ಚಿಕ್ಕಮಗಳೂರು:ಯಾವುದೇ ರೋಗ ಬಂದ ಮೇಲೆ ಪರದಾಡುವುದಕ್ಕಿಂತ, ಅದು ಬರುವ ಮುನ್ನವೇ ತಡೆಯುವುದು ಬುದ್ಧಿವಂತಿಕೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಮುಂಜಾಗ್ರತಾ ಕ್ರಮವಾಗಿ ತಪ್ಪದೇ ಪೋಲಿಯೊ ಲಸಿಕೆ ಹಾಕಿಸಬೇಕು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಕರೆ ನೀಡಿದರು.
ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಹಲವು ವರ್ಷಗಳ ಹಿಂದೆಯೇ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಯಶಸ್ವಿಯಾಗಿ ಪ್ರಾರಂಭಿಸಲಾಯಿತು. ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಹಾಗೂ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ದೇವೇಗೌಡ ಅವರ ಅವಧಿಯಲ್ಲಿ ತೀವ್ರಗೊಂಡ ಈ ಅಭಿಯಾನದ ಫಲವಾಗಿ ಇಂದು ನಮ್ಮ ದೇಶ ಶೇ.100 ರಷ್ಟು ಪೋಲಿಯೊ ಮುಕ್ತವಾಗಿದೆ. ಆದಾಗ್ಯೂ, ಭವಿಷ್ಯದ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಮತ್ತು ಆರೋಗ್ಯ ಇಲಾಖೆ ಈ ಲಸಿಕಾ ಕಾರ್ಯಕ್ರಮ ಮುಂದುವರಿಸಿಕೊಂಡು ಹೋಗುತ್ತಿವೆ ಎಂದರು.
ಲಸಿಕೆಗಳ ಮಹತ್ವ ನಮಗೆ ಕೋವಿಡ್ ಸಮಯದಲ್ಲಿ ಮನವರಿಕೆಯಾಗಿದೆ. ಕೋವಿಡ್ ಸಾಂಕ್ರಾಮಿಕ ಇಡೀ ಜಗತ್ತನ್ನು ಕಾಡಿದಾಗ, ಅದಕ್ಕೆ ಲಸಿಕೆ ಕಂಡುಹಿಡಿದ ಬಳಿಕವೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಯಾರು ಮೂರು ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೋ ಅವರು ಸುರಕ್ಷಿತವಾಗಿ ಉಳಿದರು. ಅದೇ ರೀತಿ ಪೆÇೀಲಿಯೋ ಮುಕ್ತ ಸಮಾಜ ಉಳಿಸಿಕೊಳ್ಳಲು ಲಸಿಕಾ ಕವರೇಜ್ ಅಗತ್ಯ ಎಂದು ತಿಳಿಸಿದರು.
ಸರ್ಕಾರದ ಯಾವುದೇ ಯೋಜನೆಗಳು, ಆರೋಗ್ಯ ಕಾರ್ಯಕ್ರಮಗಳು ಕೇವಲ ಇಲಾಖೆಯಿಂದ ಮಾತ್ರ ಯಶಸ್ವಿಯಾಗಲು ಸಾಧ್ಯವಿಲ್ಲ. ಅದಕ್ಕೆ ಸಾರ್ವಜನಿಕರು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯ. ಇಂದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಇನ್ನರ್ ವೀಲ್ ಕ್ಲಬ್, ರೋಟರಿ ಏಕತಾ ಕ್ಲಬ್, ಐಸಿರಿ ಫೌಂಡೇಶನ್, ರೋಟರಿ ಕಾಫಿಲ್ಯಾಂಡ್ ಮತ್ತು ಲಯನ್ಸ್ ಕ್ಲಬ್ನಂತಹ ಸಾಮಾಜಿಕ ಸಂಸ್ಥೆಗಳು ಕೈಜೋಡಿಸಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.
ಕೆಲವರು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ ಎಂಬ ತಪ್ಪು ಮಾಹಿತಿ ಹರಡುತ್ತಾರೆ. ಆದರೆ ವಾಸ್ತವ ಬೇರೆಯೇ ಇದೆ. ನಮ್ಮ ಜಿಲ್ಲಾ ಆಸ್ಪತ್ರೆಗೆ ಕಡೂರು, ಬೇಲೂರು ಮುಂತಾದ ಹೊರ ತಾಲ್ಲೂಕು ಹಾಗೂ ಜಿಲ್ಲೆಗಳಿಂದಲೂ ಹೆರಿಗೆ ಮತ್ತು ಇತರೆ ಚಿಕಿತ್ಸೆಗಳಿಗಾಗಿ ರೋಗಿಗಳು ಬರುತ್ತಾರೆ. ಕಡೂರು ಮತ್ತು ತರೀಕೆರೆಯ ಜನರಿಗೆ ಶಿವಮೊಗ್ಗ ಹತ್ತಿರವಿದ್ದರೂ, ಬೇಲೂರಿನ ಜನರಿಗೆ ಹಾಸನ ಹತ್ತಿರವಿದ್ದರೂ ಅವರು ನಮ್ಮ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯನ್ನು ನಂಬಿ ಬರುತ್ತಿರುವುದು ಇಲ್ಲಿನ ಉತ್ತಮ ವೈದ್ಯಕೀಯ ಸೇವೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದ ಅವರು, ಇನ್ನೂ ಕೆಲವೇ ತಿಂಗಳಲ್ಲಿ ಚಿಕ್ಕಮಗಳೂರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭವಾಗಲಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಬಡವರಿಗೆ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದರು.
ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾತನಾಡಿ, ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ ಯಶಸ್ವಿಗೊಳಿಸಲು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮೊದಲ ದಿನವೇ ಜಿಲ್ಲೆಯ ಶೇ.95 ರಷ್ಟು ಮಕ್ಕಳಿಗೆ ಲಸಿಕೆ ತಲುಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಷಕರು ತಪ್ಪದೇ ಪಲ್ಸ್ ಪೋಲಿಯೊ ಲಸಿಕೆಯನ್ನು ಹಾಕಿಸಬೇಕು. ಕಳೆದ 14 ವರ್ಷಗಳಿಂದ ಭಾರತದಲ್ಲಿ ಯಾವುದೇ ಪೆÇೀಲಿಯೊ ಪ್ರಕರಣಗಳು ವರದಿಯಾಗಿಲ್ಲವಾದರೂ, ನೆರೆಹೊರೆಯ ದೇಶಗಳಲ್ಲಿ ಇತ್ತೀಚೆಗೆ ಕೆಲವು ಪ್ರಕರಣಗಳು ಪತ್ತೆಯಾಗಿವೆ. ಈ ನಿಟ್ಟಿನಲ್ಲಿ ನಾವು ಸದಾ ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಪೋಷಕರಲ್ಲಿ ಮನವಿ ಮಾಡಿದರು.
ಕೋವಿಡ್ನಂತಹ ಕಠಿಣ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದಂತೆಯೇ, ಪೋಲಿಯೊ ಮುಕ್ತ ಸಮಾಜ ಕಾಯ್ದುಕೊಳ್ಳಲು ಎಲ್ಲಾ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಒಟ್ಟಾಗಿ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿವೆ. ಲಸಿಕೆ ನೀಡಿಕೆ ಪ್ರಕ್ರಿಯೆಯು ಇತರ ವ್ಯವಸ್ಥೆಗಳಿಗೆ ಒಂದು ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳಿಗೆ ಜ್ವರ ಅಥವಾ ಇನ್ಯಾವುದೇ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿದ್ದರೆ, ತಕ್ಷಣವೇ ಗಾಬರಿಪಡುವ ಅಗತ್ಯವಿಲ್ಲ. ಅಂತಹ ಮಕ್ಕಳಿಗೆ ಒಂದೆರಡು ದಿನಗಳ ಬಳಿಕ ಲಸಿಕೆ ಹಾಕಿಸಬಹುದು. ಇನ್ನು ಲಸಿಕೆ ಹಾಕಿದ ನಂತರ 2 ರಿಂದ 3 ಗಂಟೆಗಳ ಕಾಲ ಮಕ್ಕಳ ಆರೋಗ್ಯದ ಕಡೆಗೆ ನಿಗಾವಹಿಸುವುದು ಸೂಕ್ತ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು ಮಾತನಾಡಿ, ಜಿಲ್ಲೆಯ 5 ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಪೋಲಿಯೊ ಹನಿ ಹಾಕಿಸುವಂತೆ ಪೋಷಕರಲ್ಲಿ ಮನವಿ ಮಾಡಿದರು.
ಈ ಪೋಲಿಯೊ ಅಭಿಯಾನವು ಗ್ರಾಮೀಣ ಭಾಗಗಳಲ್ಲಿ ಒಟ್ಟು ಮೂರು ದಿನಗಳ ಕಾಲ ನಡೆಯಲಿದ್ದು, ನಗರ ಪ್ರದೇಶದ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ದಿನಗಳ ಕಾಲ ಲಸಿಕಾ ಕಾರ್ಯಕ್ರಮ ಇರಲಿದೆ. ಜಿಲ್ಲೆಯಲ್ಲಿ ಒಟ್ಟು 74,622 ಮಕ್ಕಳನ್ನು ಲಸಿಕೆಗಾಗಿ ಗುರುತಿಸಲಾಗಿದ್ದು, ಎಲ್ಲರಿಗೂ ಪೋಲಿಯೊ ಹನಿ ತಲುಪಿಸುವ ಗುರಿ ಹೊಂದಲಾಗಿದೆ. ಮೊದಲ ದಿನವಾದ ಇಂದು ಬೂತ್ಗಳಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ನಡೆಯುತ್ತಿದ್ದು, ಇಂದೇ ಸುಮಾರು ಶೇ.95 ರಷ್ಟು ಗುರಿಯನ್ನು ತಲುಪಲು ಆರೋಗ್ಯ ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದರು.
ನೆರೆಹೊರೆಯ ದೇಶಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಇಂದಿಗೂ ಪೋಲಿಯೋ ಪ್ರಕರಣಗಳು ಕಂಡುಬರುತ್ತಿರುವುದರಿಂದ, ನಮ್ಮ ದೇಶದ ಸುರಕ್ಷತೆಯ ಹಿತದೃಷ್ಟಿಯಿಂದ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಭವ್ಯಾ ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಅಶ್ವತ್ಥಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಾಲಿಮಠ್, ವೈದ್ಯರಾದ ಡಾ. ಮಂಜುನಾಥ್, ಡಾ. ಭರತ್, ರೋಟರಿ ಏಕತಾ ಕ್ಲಬ್ ಅಧ್ಯಕ್ಷೆ ಪ್ರಿಯಾಂಕ ಆನಂದ್, ಕಾರ್ಯದರ್ಶಿ ದಿವ್ಯ ವಿಕ್ರಂ ಸೇರಿದಂತೆ ವಿವಿಧ ಸ್ವಯಂಸೇವಾ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
Get vaccinated against polio as a precaution.
Leave a comment