Home namma chikmagalur ಚಿಕ್ಕಮಗಳೂರು-ಮೈಸೂರು ನಡುವೆ ಹೈಟೆಕ್ ಬಸ್ ವ್ಯವಸ್ಥೆ-ಸ್ಕೈವಾಕ್ ನಿರ್ಮಾಣ
namma chikmagalurchikamagalurHomeLatest News

ಚಿಕ್ಕಮಗಳೂರು-ಮೈಸೂರು ನಡುವೆ ಹೈಟೆಕ್ ಬಸ್ ವ್ಯವಸ್ಥೆ-ಸ್ಕೈವಾಕ್ ನಿರ್ಮಾಣ

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಎಲ್ಲ್ಲ ಜಿಲ್ಲೆಗಳಿಗೂ ಹೊಸ ಬಸ್‌ಗಳನ್ನು ಒದಗಿಸುವುದಲ್ಲದೆ, ಚಿಕ್ಕಮಗಳೂರು-ಮೈಸೂರು ನಡುವೆ ಎರಡು ವೋಲ್ವೊ ಬಸ್‌ಗಳ ವ್ಯವಸ್ಥೆ ಕಲ್ಪಿಸುವುದಾಗಿಯೂ, ಇಲ್ಲಿನ ಉಭಯ ಬಸ್ ನಿಲ್ದಾಣಗಳ ನಡುವೆ ಸ್ಕೈವಾಕ್ ವ್ಯವಸ್ಥೆಗೂ ಅನುಮೋದನೆ ನೀಡುವುದಾಗಿಯೂ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನಗರದ ಗ್ರಾಮಾಂತರ ಬಸ್ ನಿಲ್ದಾಣದ ಆವರಣದಲ್ಲಿ ಇಂದು ಬೆಳಿಗ್ಗೆ ನೂತನ ಬಸ್ ನಿಲ್ದಾಣ ಶಂಕುಸ್ಥಾಪನೆ ಹಾಗೂ ನೂತನ ವಸತಿ ಗೃಹಗಳನ್ನು ಉದ್ಘಾಟಿಸಿ ಅವರು ಮಾತನಾಡಿ ಮೈಸೂರು ಹಾಗೂ ಚಿಕ್ಕಮಗಳೂರು ನಡುವೆ ವೋಲ್ವೊ ಬಸ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಉಭಯ ಬಸ್ ನಿಲ್ದಾಣಗಳ ನಡುವೆ ಸ್ಕೈವಾಕ್ ನಿರ್ಮಿಸುವಂತೆ ಶಾಸಕ ಹೆಚ್.ಡಿ.ತಮ್ಮಯ್ಯ ಅವರ ಬೇಡಿಕೆಗೆ ಸ್ಪಂದಿಸಿದ ಸಚಿವರು, ಈ ಬಾರಿಯ ಬಜೆಟ್‌ನಲ್ಲಿ ೨ ಸಾವಿರ ಬಸ್‌ಗಳನ್ನು ಒಟ್ಟಾರೆ ನಿಗಮಕ್ಕೆ ಒದಗಿಸಲಾಗಿದ್ದು, ಅವುಗಳಲ್ಲಿ ೯೦೦ ಬಸ್‌ಗಳನ್ನು ಕೆ.ಎಸ್.ಆರ್.ಟಿ.ಸಿ.ಗೆ ನೀಡಲಾಗುವುದು. ಇನ್ನೂ ಎರಡು-ಮೂರು ತಿಂಗಳಲ್ಲಿ ಈ ಬೇಡಿಕೆ ಈಡೇರಲಿದೆ ಎಂದರು.

ಶಕ್ತಿ ಯೋಜನೆಯಡಿ ನವೆಂಬರ್ ೧೭ ರವರೆಗೆ ೬೦೦ ಕೋಟಿ ಮಹಿಳೆಯರು ಉಚಿತವಾಗಿ ಓಡಾಡಿದ್ದಾರೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಹಿಳೆಯರು ಉಚಿತವಾಗಿ ಓಡಾಡಿದ ನಿದರ್ಶನ ಎಲ್ಲೂ ಇಲ್ಲ. ಇದಕ್ಕಾಗಿ ಅನೇಕ ಪ್ರಶಸ್ತಿಗಳು ಬಂದಿದ್ದು, ಸರ್ಕಾರದಿಂದ ಈ ವೆಚ್ಚವನ್ನು ಭರಿಸಲು ೧೫,೪೨೨ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ತಾವು ಸಚಿವರಾದ ಬಳಿಕ ಎರಡೂವರೆ ವರ್ಷಗಳ ಅವಧಿಯಲ್ಲಿ ನಿಗಮಕ್ಕೆ ಸುಮಾರು ೫,೮೦೦ ಬಸ್‌ಗಳನ್ನು ಖರೀದಿಸಲಾಗಿದೆ. ಹಿಂದೆ ನಾಲ್ಕು ವರ್ಷಗಳಲ್ಲಿ ನಾನಾ ಕಾರಣಗಳಿಂದ ಕೆಎಸ್‌ಆರ್‌ಟಿಸಿಯಿಂದ ಬಸ್ ಖರೀದಿಸಿರಲಿಲ್ಲ. ಈ ನಡುವೆ ನಿಗಮಕ್ಕೆ ೯ ಸಾವಿರ ಸಿಬ್ಬಂದಿಯನ್ನು ಭರ್ತಿ ಮಾಡಲಾಗಿದೆ. ಒಂದು ಸಾವಿರ ಮಂದಿಯನ್ನು ಅನುಕಂಪದ ಆಧಾರದಲ್ಲಿ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಇಲ್ಲಿನ ಒಂದೂವರೆ ಎಕರೆ ಪ್ರದೇಶದಲ್ಲಿ ಸುಮಾರು ೨೦ ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ. ೧೪ ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ನಿಲ್ದಾಣಕ್ಕೆ ಶಾಸಕರಾದ ಹೆಚ್.ಡಿ.ತಮ್ಮಯ್ಯ ಅವರು ಕಾರಣಕರ್ತರು. ಅಲ್ಲದೆ, ಸುಮಾರು ೨.೩೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ೧೨ ವಸತಿಗೃಹಗಳನ್ನು ಉದ್ಘಾಟಿಸಲಾಗಿದೆ ಎಂದರು.

ಈಗಾಗಲೇ ೯.೧೫ ಕೋಟಿ ರೂ. ವೆಚ್ಚದಲ್ಲಿ ತರೀಕೆರೆ ಬಸ್ ನಿಲ್ದಾಣ ಹಾಗೂ ೬ ಕೋಟಿ ರೂ. ವೆಚ್ಚದಲ್ಲಿ ಕಡೂರು ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶೃಂಗೇರಿಯಲ್ಲಿ ೮.೮೨ ಲಕ್ಷ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಅನುದಾನ ಒದಗಿಸಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭವಾಗಿದೆ. ಅಲ್ಲದೆ ಬೀರೂರಿನ ಬಸ್ ನಿಲ್ದಾಣವನ್ನು ೨.೫ ಕೋಟಿ ರೂ. ವೆಚ್ಚದ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ತರೀಕೆರೆಯಲ್ಲಿ ಬಸ್ ಘಟಕ ನಿರ್ಮಾಣಕ್ಕೆ ೯ ಕೋಟಿ ರೂ. ಗಳ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ಅವರು ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ರಾಜಕೀಯ ಮರುಜನ್ಮವನ್ನು ನೀಡಿದ ಜಿಲ್ಲೆ ಇದು. ಜೊತೆಗೆ ತಾವು ಕೂಡ ಈ ಜಿಲ್ಲೆಯವರೇ ಆಗಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ತಾವು ಬದ್ಧರಾಗಿರುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಡಿ.ತಮ್ಮಯ್ಯ ಅವರು ಮಾತನಾಡಿ, ಈ ನಗರಕ್ಕೆ ಹೈಟೆಕ್ ಬಸ್ ನಿಲ್ದಾಣದ ಅವಶ್ಯಕತೆ ಇದೆ ಎಂಬುದು ಚಿಕ್ಕಮಗಳೂರು ಜನತೆಯ ಆಶಯವಾಗಿತ್ತು. ರಾಜ್ಯ ಸರ್ಕಾರದ ಆಸಕ್ತಿಯಿಂದ ೧೯.೮೭ ಕೋಟಿ ರೂ.ಗಳ ವೆಚ್ಚದ ನೂತನ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರ್ಷಿಕ ೫೭ ಸಾವಿರ ಕೋಟಿ ರೂ.ಗಳ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಫಲವಾಗಿ ರಾಜ್ಯದ ಸಾರ್ವಜನಿಕರ ಬದುಕಿನ ತಲಾದಾಯದಲ್ಲಿ ಇಡೀ ದೇಶದಲ್ಲಿ ನಮ್ಮ ರಾಜ್ಯ ಮೊದಲನೇ ಸ್ಥಾನದಲ್ಲಿರುವಂತಾಗಿದೆ ಎಂದರು. ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ನವೆಂಬರ್ ೧೬ ರಂದು ಗುದ್ದಲಿಪೂಜೆ ನೆರವೇರಿಸಲಾಗಿದೆ. ಡಿಸೆಂಬರ್ ಒಂದರಿಂದ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ಮಾರ್ಚ್ ೩೧ ರೊಳಗೆ ೨೨.೫ ಕೋಟಿ ರೂ.ವೆಚ್ಚದಲ್ಲಿ ನಗರದ ಎಲ್ಲಾ ಪ್ರಮುಖ ರಸ್ತೆಗಳ ಡಾಂಬರೀಕರಣ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು. ೩೫ ಕೋಟಿ ರೂ.ಗಳ ವೆಚ್ಚದಲ್ಲಿ ಗ್ರಾಮಾಂತರ ಭಾಗದ ಎಲ್ಲಾ ರಸ್ತೆಗಳನ್ನು ಕೂಡ ದುರಸ್ತಿಪಡಿಸಲಾಗುವುದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿದರು. ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಟಿ.ಡಿ.ರಾಜೇಗೌಡ, ಭದ್ರಾ ಕಾಡಾ ಅಧ್ಯಕ್ಷರಾದ ಡಾ.ಕೆ.ಪಿ.ಅಂಶುಮಂತ್, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರಾದ ಬಿ.ಹೆಚ್.ಹರೀಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಸಿ.ಶಿವಾನಂದಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ಮುಖಂಡರಾದ ಕೆ.ಎಸ್.ಶಾಂತೇಗೌಡ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಗುತ್ತಿಗೆದಾರ ರವಿಶಂಕರ್, ಕಾರ್ಯಕ್ರಮದಲ್ಲಿದ್ದರು.

New buses to be provided to all districts including Chikkamagaluru soon

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...