ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಇಡೀ ಜಿಲ್ಲೆಗೆ ಸಂಬಂಧಿಸಿದಂತೆ ಜುಲೈ ೧೨ ರಂದು ಲೋಕ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಇಂದು ನಡೆದ `ದೇಶಕ್ಕಾಗಿ ೯೦ ದಿನಗಳ ಮಧ್ಯಸ್ಥಿಕೆ’ ವಿಶೇಷ ಅಭಿಯಾನ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರತೀ ವರ್ಷ ನಾಲ್ಕು ಬಾರಿ ರಾಷ್ಟ್ರೀಯ ಲೋಕ ಅದಾಲತ್‌ಗಳನ್ನು ನಡೆಸಲಾಗುತ್ತದೆ. ಈಗಾಗಲೇ ಮೊದಲನೇ ಲೋಕ ಅದಾಲತ್ ಮಾರ್ಚ್ ೮ ರಂದು ನಡೆದಿದೆ. ಇದೀಗ ಎರಡನೇ ಲೋಕ ಅದಾಲತ್ ಜುಲೈ ೧೨ ರಂದು ನಡೆಯಲಿದೆ. ಕಳೆದ ಬಾರಿಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಪ್ರಕರಣಗಳನ್ನು ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರ ಸಹಕಾರದಿಂದ ೩೦೬೪ ಬಾಕಿ ಉಳಿದಿದ್ದ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ೨೦,೯೬೨ ಪ್ರಕರಣಗಳು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಸೇರಿದ ಒಟ್ಟು ೨೪,೦೨೬ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಬಾರಿ ನಡೆಯುತ್ತಿರುವ ಲೋಕ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲಾ ಏಳು ತಾಲ್ಲೂಕುಗಳಿಗೆ ಸಂಬಂಧಿಸಿದ ೩೯,೯೩೭ ಪ್ರಕರಣಗಳು ಬಾಕಿ ಉಳಿದಿವೆ. ಈ ಪೈಕಿ ಶೇ.೧೦ಕ್ಕಿಂತ ಹೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡುವ ಯೋಜನೆ ಇದೆ. ಕೊಲೆ, ಅತ್ಯಾಚಾರದಂತಹ ಪ್ರಕರಣಗಳು ಲೋಕ ಅದಾಲತ್‌ನಲ್ಲಿ ತೀರ್ಮಾನವಾಗುವುದಿಲ್ಲ. ಮೋಟಾರು ವಾಹನ ಅಪಘಾತ, ಜೀವನಾಂಶ, ಆಸ್ತಿ ವಿಭಾಗದ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಈ ಅದಾಲತ್‌ನಲ್ಲಿ ವಿಲೇವಾರಿ ಮಾಡಬಹುದು ಎಂದು ತಿಳಿಸಿದರು.
ಲೋಕ ಅದಾಲತ್‌ನಲ್ಲಿ ತೀರ್ಮಾನ ಮಾಡುವುದಾದರೆ ಪ್ರಕರಣಗಳು ಅತೀ ಶೀಘ್ರ ಇತ್ಯರ್ಥವಾಗುತ್ತವೆ. ನ್ಯಾಯಾಲಯದ ಶುಲ್ಕ ಇರುವುದಿಲ್ಲ. ಕೆಲವರಿಗೆ ವಕೀಲರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಲೋಕ ಅದಾಲತ್‌ನಲ್ಲಿ ನುರಿತ ವಕೀಲರು ಸಂಧಾನಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಸಮಯವೂ ಉಳಿತಾಯವಾಗಲಿದ್ದು, ಕಕ್ಷಿದಾರರು ಅವರ ತೀರ್ಪನ್ನು ಅವರೇ ಪಡೆದುಕೊಳ್ಳಬಹುದು. ಇಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಉಭಯಕಡೆಯ ಕಕ್ಷಿದಾರರ ನಡುವೆ ಬಾಂಧವ್ಯವೂ ಉಳಿಯುತ್ತದೆ. ಈ ನಿಟ್ಟಿನಲ್ಲಿ ಕಕ್ಷಿದಾರರು ಈ ಅದಾಲತ್‌ನ ಪ್ರಯೋಜನ ಪಡೆದುಕೊಳ್ಳುವಂತೆ ಕಿವಿಮಾತು ಹೇಳಿದರು.
೯೦ ದಿನಗಳ ವಿಶೇಷ ಅಭಿಯಾನ: ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಮಧ್ಯಸ್ಥಿಕೆಯಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, `ದೇಶಕ್ಕಾಗಿ ೯೦ ದಿನಗಳ ಮಧ್ಯಸ್ಥಿಕೆ’ ವಿಶೇಷ ಅಭಿಯಾನವನ್ನು ಕಾನೂನು ಸೇವಾ ಪ್ರಾಧಿಕಾರದಿಂದ ನಡೆಸಲಾಗುತ್ತಿದೆ. ಇದರಲ್ಲಿ ವಕೀಲರೇ ಮಧ್ಯಸ್ಥಿಕೆ ವಹಿಸಲಿದ್ದು, ಅಪಘಾತ ಪ್ರಕರಣ, ಕೌಟುಂಬಿಕ ದೌರ್ಜನ್ಯ, ಚೆಕ್‌ಬೌನ್ಸ್ ಪ್ರಕರಣ, ವಾಣಿಜ್ಯ ಕಲಹ ಪ್ರಕರಣ, ಸೇವಾ ವಿಷಯದ ಪ್ರಕರಣ, ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣ, ಗ್ರಾಹಕರ ವ್ಯಾಜ್ಯ, ಸಾಲ ಮರುಪಾವತಿ ವ್ಯಾಜ್ಯ, ವಿಭಾಗದ ದಾವೆ, ಎವಿಕ್ಷನ್ ದಾವೆ, ಭೂಸ್ವಾಧೀನ ದಾವೆ, ಇತರ ಸಿವಿಲ್ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಜುಲೈ ಒಂದರಿಂದ ಈ ಅಭಿಯಾನ ಆರಂಭವಾಗಿದ್ದು, ಅಕ್ಟೋಬರ್ ೭ ರವರೆಗೆ ನಡೆಯಲಿದೆ.
ಪ್ರಕರಣಗಳ ಸ್ವರೂಪವನ್ನು ಗುರುತಿಸಿ ಅವುಗಳನ್ನು ಮಧ್ಯಸ್ಥಿಕೆದಾರರಿಗೆ ಕಳುಹಿಸಲಾಗುವುದು. ಮಧ್ಯಸ್ಥಿಕೆದಾರರಿಂದ ಪಕ್ಷಗಾರರಿಗೆ ನೋಟಿಸು ಜಾರಿಯಾಗುತ್ತದೆ. ವಾರದ ಏಳು ದಿನಗಳಲ್ಲಿ ಮಧ್ಯಸ್ಥಿಕಾ ಕೇಂದ್ರ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ಸಂಘರ್ಷ ಎನ್ನುವುದು ಮಕ್ಕಳಿಂದ ಪ್ರಾರಂಭವಾಗುತ್ತದೆ. ಮಾನವ ಸಹಜವಾಗಿಯೇ ಸಂಘರ್ಷ ಜೀವಿ. ಐಶ್ವರ್ಯ, ಬಡತನ, ಮಧ್ಯಸ್ಥಿಕೆಯಲ್ಲಿದ್ದರೂ ಸಂಘರ್ಷವೆ. ಕಕ್ಷಿದಾರರು ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆ, ಆಸ್ಪತ್ರೆ, ನ್ಯಾಯಾಲಯ ಈ ಮೂರರ ಮೆಟ್ಟಿಲೇರುವಂತಹ ಸನ್ನಿವೇಶ ತಂದುಕೊಳ್ಳಬಾರದು. ಆಸ್ತಿ ವಿಭಾಗದಲ್ಲಿ ಉಂಟಾಗುವ ಪ್ರಕರಣಗಳನ್ನು ಆಯಾ ಕುಟುಂಬದವರೇ ಇತ್ಯರ್ಥಪಡಿಸಿಕೊಳ್ಳಬಹುದು. ಇದೀಗ ಲೋಕ ಅದಾಲತ್ ಮೂಲಕ ರಾಜಿ ಸಂಧಾನ, ಮಧ್ಯಸ್ಥಿಕೆ ಮೂಲಕ ಪ್ರಕರಣಗಳ ಇತ್ಯರ್ಥಪಡಿಸಿಕೊಂಡು ಕಕ್ಷಿದಾರರು ಹಣ, ಸಮಯ ಉಳಿತಾಯ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆದ ವಿ.ಹನುಮಂತಪ್ಪ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಭಾನುಮತಿ, ನ್ಯಾಯಾಧೀಶರುಗಳಾದ ಪ್ರಕಾಶ್, ಮಂಜುನಾಥ, ಕುಲಕರ್ಣಿ, ಗುರುಪ್ರಸಾದ್, ರಾಘವೇಂದ್ರ, ಸುಜಾತ, ದ್ಯಾವಪ್ಪ, ಲತಾ, ಅನುರಾಧ, ಶರತ್ ಕುಮಾರ್, ನಂದಿನಿ ಹಾಗೂ ವಕೀಲರು ಭಾಗವಹಿಸಿದ್ದರು,
National Lok Adalat to be held in the district on July 12
Leave a comment