ಚಿಕ್ಕಮಗಳೂರು: ‘ಮೂಡಿಗೆರೆ–ಮೂಗ್ತಿ ಹಳ್ಳಿ (ಚಿಕ್ಕಮಗಳೂರು) ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯನ್ನು ಜುಲೈ ಅಂತ್ಯದ ವೇಳೆಗೆ ಆರಂಭಿಸಬೇಕು. ಅದಕ್ಕೂ ಮುನ್ನ ಬಾಕಿ ಇರುವ ಎಲ್ಲ ಪತ್ರ ವ್ಯವಹಾರ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಪತ್ರ ವ್ಯವಹಾರ ಸಂಬಂಧ ಬೆಂಗಳೂರು, ದೆಹಲಿ ಸೇರಿ ಪ್ರತಿ ಹಂತದಲ್ಲಿ ಕಡತಗಳನ್ನು ಬೆನ್ನತ್ತಬೇಕು. ಸಮಸ್ಯೆ ಎದುರಾದಾಗ ನನಗೆ ತಿಳಿಸಿದರೆ ಬಗೆಹರಿಸುತ್ತೇನೆ’ ಎಂದು ತಿಳಿಸಿದರು.
ಮೂಡಿಗೆರೆ– ಮೂಗ್ತಿಹಳ್ಳಿ ಹೆದ್ದಾರಿ ಯೋಜನೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳ ಬೇಕು. ಒಂದೂವರೆ ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಹೇಳಿದರು.
ಚಿಕ್ಕಮಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಮಿ ಕಳೆದುಕೊಂಡಿರುವ ಕೆಲ ರೈತರಿಗೆ ಪರಿಹಾರ ಸಿಕ್ಕಿಲ್ಲ ಎಂಬ ಆರೋಪ ಇದೆ. ಅವರಿಗೆ ಪರಿಹಾರ ಕೊಡಿಸಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಜಯಣ್ಣ ಮಾತನಾಡಿ, ‘ಮೂಗ್ತಿಹಳ್ಳಿ-ಮೂಡಿಗೆರೆ ಹೆದ್ದಾರಿ ಕಾಮಗಾರಿ ಸಂಬಂಧ ಜೂನ್ 30ರೊಳಗೆ 3ಡಿ ಅವಾರ್ಡ್ ಪೂರ್ಣಗೊಳಿಸಲಾಗುವುದು. ಎರಡನೇ ಹಂತದ 4 ಹೆಕ್ಟೇರ್ ಸ್ವಾಧೀನ ಸಂಬಂಧ ಈಗಾಗಲೇ ಎಲ್ಲ ಪ್ರಕ್ರಿಯೆಗಳು ಮುಗಿದಿವೆ. 3ಡಿ ಮಂಜೂರಾತಿ ಮಾತ್ರ ಬಾಕಿ ಇದೆ. ಜುಲೈ ಅಂತ್ಯದೊಳೆಗೆ ಎಲ್ಲ ಪ್ರಕ್ರಿಯೆ ಪೂರ್ಣವಾಗಲಿದೆ’ ಎಂದು ಮಾಹಿತಿ ನೀಡಿದರು.
ಬೇಲೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಒಂದು ವಾರದಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ. ಆ ನಂತರ ಪ್ರಕ್ರಿಯೆ ಗಳು ಆರಂಭಗೊಳ್ಳಲಿವೆ ಎಂದರು.
ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಮಾತನಾಡಿ, ‘ಮೂಗ್ತಿಹಳ್ಳಿ-ಮೂಡಿಗೆರೆ ರಸ್ತೆ ವಿಸ್ತರಣೆ ಸಂಬಂಧ 3ಡಿ ಅಧಿಸೂಚನೆ ಹೊರ ಬಿದ್ದ ಮರು ದಿನದಿಂದಲೇ ಗ್ರಾಮವಾರು ನೋಟಿಸ್ ನೀಡುವ ಕಾರ್ಯ ಆರಂಭಿಸ ಲಾಗುವುದು’ ಎಂದು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ, ಉಪ ಅರಣ್ಯ ಸಂರಕ್ಷಣಾಕಾರಿ ರಮೇಶ್ ಬಾಬು, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ಬಿಜೆಪಿ ಮುಖಂಡ ಎಚ್.ಸಿ.ಕಲ್ಮರುಡಪ್ಪ ಭಾಗವಹಿಸಿದ್ದರು.
National Highway expansion work should begin by the end of July
Leave a comment