ಚಿಕ್ಕಮಗಳೂರು: ಭಗವಾನ್ ಮಹಾವೀರರ ಸಂದೇಶ ನಾಗರಿಕ ಸಮಾಜಕ್ಕೆ ಅವಶ್ಯಕತೆ ಇದ್ದು, ಜಗತ್ತು ಎದುರಿಸುತ್ತಿರುವ ಜಾಗತಿಕ ಸಮಸ್ಯೆಗೆ ಪರಿಹಾರ ಇದೊಂದೇ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಭಗವಾನ್ ಮಹಾವೀರರು ಜಗತ್ತನ್ನು ಗೆಲ್ಲಲು ಹೋಗಲಿಲ್ಲ, ಬದಲಾಗಿ ತನ್ನನ್ನು ತಾನು ಗೆದ್ದು ’ಜಿತೇಂದ್ರಿಯ‘ರಾದವರು. ಇಂದಿನ ದಿನಗಳಲ್ಲಿ ಮತ ಸಂಪ್ರದಾಯಗಳನ್ನು ಧರ್ಮ ಎಂದು ತಪ್ಪಾಗಿ ಗುರುತಿಸಲಾಗುತ್ತಿದೆ. ಹಿಂಸೆಗೆ ಪ್ರಚೋದನೆ ನೀಡುವಂತಹದ್ದು ಧರ್ಮವಾಗಲು ಸಾಧ್ಯವಿಲ್ಲ. ಪರರ ಆಸ್ತಿಯನ್ನು ಕಬಳಿಸುವುದು ಅಧರ್ಮವೇ ಹೊರತು ಧರ್ಮವಲ್ಲ. ಧರ್ಮ ಎನ್ನುವುದು ಕರ್ತವ್ಯ ಮತ್ತು ಕಾಲಧರ್ಮಕ್ಕೆ ಅನುಗುಣವಾಗಿರಬೇಕು ಎಂದು ಅವರು ಹೇಳಿದರು.
ಜಗತ್ತಿಗೆ ಭಾರತೀಯ ಚಿಂತನೆಗಳು ಹಾಗೂ ಭಾರತೀಯ ದೃಷ್ಟಿಕೋನಗಳು ಮಾತ್ರ ಶಾಂತಿಯನ್ನು ನೀಡಬಲ್ಲುದು ಏಕೆಂದರೆ ಜಗತ್ತಿಗೆ ಮಹಾವೀರರನ್ನು, ಬುದ್ಧನನ್ನು ನೀಡಿದ್ದು ನಾವು. ವಿಶ್ವ ಒಂದು ಕುಟುಂಬ, ಅಣುರೇಣು ತೃಣಕಾಷ್ಠಗಳಲ್ಲಿ ದೇವರನ್ನು ಕಾಣು ಎಂದು ಹೇಳಿದ್ದು ನಾವು. ದೇವರು ಎಲ್ಲದರಲ್ಲೂ ಇದ್ದಾನೆ ಎಂದು ಹೇಳಿದ್ದು ನಾವು. ಈ ಹಿನ್ನೆಲೆಯಲ್ಲಿ ನಮ್ಮ ಧರ್ಮ, ಚಿಂತನೆಗಳು ಶ್ರೇಷ್ಠ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಎ.ಎನ್. ಮಹೇಶ್ ಮಾತನಾಡಿ, ಜಗತ್ತಿಗೆ ಅಹಿಂಸೆ ಮತ್ತು ಶಾಂತಿಯ ಪರಮೋಚ್ಚ ಸಂದೇಶ ನೀಡಿದ ಭಗವಾನ್ ಮಹಾವೀರರ ತತ್ವಗಳು ಇಂದಿನ ಸಂಘರ್ಷಮಯ ಕಾಲಘಟ್ಟದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದು ಹೇಳಿದರು.
ಇಂದು ವಿಶ್ವದಾದ್ಯಂತ ಯುದ್ಧದ ಕಾರ್ಮೋಡ ಕವಿದಿದೆ. ಮಧ್ಯಪ್ರಾಚ್ಯ ದೇಶಗಳು ಸೇರಿದಂತೆ ಹಲವೆಡೆ ಸಂಘರ್ಷಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಭಾರತವು ವಿವಿಧ ಧರ್ಮ, ವರ್ಗಗಳ ನಡುವೆಯೂ ಸ್ನೇಹ ಮತ್ತು ಸೌಹಾರ್ದತೆಯಿಂದ ಬಾಳುತ್ತಿದೆ ಎಂದರೆ ಅದಕ್ಕೆ ಮಹಾವೀರರಂತಹ ಮಹಾಪುರುಷರು ಹಾಕಿಕೊಟ್ಟ ಅಹಿಂಸೆಯ ಅಡಿಪಾಯವೇ ಕಾರಣ ಎಂದರು.
ರಾಜ ಮನೆತನದಲ್ಲಿ ಜನಿಸಿದ ಮಹಾವೀರರು ೩೦ನೇ ವಯಸ್ಸಿನಲ್ಲಿ ಸಂನ್ಯಾಸ ದೀಕ್ಷೆ ಪಡೆದರು. ೧೨ ವರ್ಷಗಳ ಸುದೀರ್ಘ ತಪಸ್ಸಿನ ನಂತರ ಜ್ಞಾನೋದಯ ಪಡೆದ ಅವರು, ಸತತ ೩೦ ವರ್ಷಗಳ ಕಾಲ ನಾಡಿನಾದ್ಯಂತ ಸಂಚರಿಸಿ ಶಾಂತಿಯ ಸಂದೇಶ ಬಿತ್ತಿದರು. ಅವರು ನೀಡಿದ ತತ್ವಗಳು ಸೂರ್ಯ-ಚಂದ್ರರು ಇರುವವರೆಗೆ ಶಾಶ್ವತವಾಗಿರುತ್ತವೆ ಎಂದು ಹೇಳಿದರು.
ಜೈನ ಸಮುದಾಯದ ಜನಸಂಖ್ಯೆ ಕಡಿಮೆ ಇದ್ದರೂ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ದೇಶದ ಒಟ್ಟು ಜನಸಂಖ್ಯೆಯ ಕೇವಲ ಶೇ.೧ ರಷ್ಟಿರುವ ಜೈನ ಸಮುದಾಯವು ಭಾರತದ ಜಿಡಿಪಿಗೆ ಶೇ. ೨೫ ರಷ್ಟು ಕೊಡುಗೆ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದರು.
ಕನ್ನಡ ಸಾಹಿತ್ಯಕ್ಕೆ ಪಂಪ, ರನ್ನ, ಪೊನ್ನ ಮತ್ತು ಜನ್ನರಂತಹ ರತ್ನಗಳನ್ನು ನೀಡಿದ ಕೀರ್ತಿ ಈ ಸಮುದಾಯಕ್ಕೆ ಸಲ್ಲುತ್ತದೆ. ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿಗ್ರಹ ಸೇರಿದಂತೆ ದೇಶದಾದ್ಯಂತ ಇರುವ ಜೈನ ಮಂದಿರಗಳು ಅದ್ಭುತ ವಿನ್ಯಾಸ ಮತ್ತು ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿವೆ.
ಭಗವಾನ್ ಮಹಾವೀರರ ಕುರಿತು ಉಪನ್ಯಾಸ ನೀಡಿದ ಡಾ.ಹೇಮಲತಾ, ಜಗತ್ತಿನ ರಾಗ, ದ್ವೇಷ, ಯುದ್ಧ ಮತ್ತು ಅಶಾಂತಿಯಂತಹ ವಿನಾಶಕಾರಿ ಸಮಸ್ಯೆಗಳಿಗೆ ಭಗವಾನ್ ಮಹಾವೀರರ ಅಹಿಂಸೆ ಮತ್ತು ತಪಸ್ಸಿನ ತತ್ವಗಳೇ ಮದ್ದಾಗಿವೆ ಎಂದು ತಿಳಿಸಿದರು.
ಮಹಾವೀರರು ಜೈನಧರ್ಮದ ವರ್ತಮಾನ ಕಾಲದ ೨೪ನೇ ಹಾಗೂ ಕೊನೆಯ ತೀರ್ಥಂಕರರಾಗಿದ್ದಾರೆ. ಇವರಿಗಿಂತ ಮೊದಲು ೨೩ ತೀರ್ಥಂಕರರು ಹಾಗೂ ಭೂತಕಾಲದಲ್ಲಿ ೨೪ ತೀರ್ಥಂಕರರು ಆಗಿಹೋಗಿರುವ ಭವ್ಯ ಪರಂಪರೆ ಜೈನಧರ್ಮಕ್ಕಿದೆ ಎಂದು ಅವರು ಸ್ಮರಿಸಿದರು.
ರಾಜ ವೈಭೋಗದ ನಡುವೆಯೂ ಜನರ ಕಷ್ಟಗಳನ್ನು ಕಂಡು ಮನನೊಂದ ವರ್ಧಮಾನರು, ಶಾಂತಿ ಮತ್ತು ಸತ್ಯದ ಶೋಧಕ್ಕಾಗಿ ತಮ್ಮ ೩೦ನೇ ವಯಸ್ಸಿನಲ್ಲಿ ಸಂಸಾರ ತ್ಯಜಿಸಿದರು. ೧೨ ವರ್ಷಗಳ ಕಠಿಣ ತಪಸ್ಸಿನ ನಂತರ ೪೨ನೇ ವಯಸ್ಸಿನಲ್ಲಿ ಅವರು ’ಕೇವಲ ಜ್ಞಾನ’ವನ್ನು ಪಡೆದರು. ತಪಸ್ಸು ಎಂದರೆ ಯಾವುದಾದರೂ ಒಂದು ಸಮಸ್ಯೆಗೆ ಅಥವಾ ತತ್ವಕ್ಕೆ ಉತ್ತರ ಕಂಡುಕೊಳ್ಳಲು ಮಾಡುವ ಗಾಢವಾದ ಚಿಂತನೆ. ಮಹಾವೀರರ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ಪ್ರತಿಯೊಬ್ಬರೂ ಅಕ್ಷರಶಃ ಪಾಲಿಸಿದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಅವರು ಹೇಳಿದರು.
ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿದರು. ಉಪ ತಹಸೀಲ್ದಾರ್ ರಾಮರಾವ್ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಜೈನ ಸಮಾಜದ ಪ್ರಮುಖರಾದ ಜಿನೇಂದ್ರ ಬಾಬು, ಚಾರಿತ್ರ್ಯ, ಕಾಂತಿಲಾಲ್ ಜೈನ್, ಗೌತಮ್ ಚಂದ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಗೀತಾ ಮತ್ತಿತರರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಸ್ವಾಗತಿಸಿದರು.
Lord Mahavir’s message is essential for civil society
Leave a comment