ಚಿಕ್ಕಮಗಳೂರು: ದೈವಜ್ಞ ಬ್ರಾಹ್ಮಣ ಸಂಘದ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯಕ್ಕೆ ಶಾಸಕರ ನಿಧಿಯಿಂದ ೧೦ ಲಕ್ಷ ರೂ. ನೀಡುವುದಾಗಿ ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು.
ನಗರದ ಕೆ.ಎಂ.ರಸ್ತೆಯಲ್ಲಿರುವ ಶ್ರೀ ದೈವಜ್ಞ ಬ್ರಾಹ್ಮಣ ಸಂಘದ ನೂತನ ಸಭಾಭವನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿ, ದೈವಜ್ಞ ಬ್ರಾಹ್ಮಣ ಸಮುದಾಯ ಒಗ್ಗಟ್ಟಾಗಬೇಕು. ಆಗ ಮಾತ್ರ ಸರಕಾರದಿಂದ ದೊರೆಯುವ ಅನುದಾನ ಮತ್ತಿತರೆ ಸೌಲಭ್ಯ ಪಡೆದುಕೊಳ್ಳಲು ಸಾಧ್ಯ ಎಂದರು. ದೈವಜ್ಞ ಬ್ರಾಹ್ಮಣ ಸಮುದಾಯ ಚಿಕ್ಕದಾದರೂ ಬಹು ಸಂಖ್ಯಾತ ಜನ ಮೆಚ್ಚುವ ಕೆಲಸ ಮಾಡುತ್ತದೆ.
ಚಿನ್ನ ಬೆಳ್ಳಿ ಆಭರಣ ತಯಾರಿಸುವ ಈ ಸಮುದಾಯ ಹಿಂದಿನಿಂದಲೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಾ ಬಂದಿದೆ. ಸಣ್ಣ ಸಮುದಾಯ ಆಗಿರುವುದರಿಂದ ಒಗ್ಗಟ್ಟಾಗಿರಬೇಕು. ಒಗ್ಗಟ್ಟಿನಲ್ಲಿ ಬಲವಿದೆ. ಯಾವುದೇ ರಾಜಕೀಯ ಪಕ್ಷದ ನಾಯಕರ ಬಳಿ ಒಬ್ಬರೇ ಹೋದರೆ ಅವರ ಮಾತಿಗೆ ಕಿಮ್ಮತ್ತಿರುವುದಿಲ್ಲ. ಅದೇ ಹತ್ತು ಜನ ಹೋದಾಗ ಅದಕ್ಕೆ ಬೆಲೆ ಇದೆ. ಹೀಗಾಗಿ ಸಮಾಜ ಸದಾ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು. ಚಿನ್ನ ಬೆಳ್ಳಿ ಆಭರಣ ತಯಾರಕರಾದ ನಿಮಗೆ ಪೊಲೀಸರಿಂದ ತೊಂದರೆ ಎದುರಾಗುವುದು ಸಮಾನ್ಯ. ಅಂತಹ ಸಂದರ್ಭ ಬಂದಾಗ ಸದಾ ನಿಮ್ಮ ಪರವಾಗಿ ನಿಂತಿದ್ದೇನೆ ಮುಂದೆಯೂ ನಿಲ್ಲುತ್ತೇನೆ ಎಂದರು
ದೈವಜ್ಞ ಬ್ರಾಹ್ಮಣ ಸಂಘದ ಕಲ್ಯಾಣ ಮಂಟಪ ನಿರ್ಮಿಸಲು ಶಾಸಕರ ನಿಧಿಯಿಂದ ೧೦ ಲಕ್ಷ ರೂ. ನೀಡುವುದಾಗಿ ಇದೇ ವೇಳೆ ಭರವಸೆ ನೀಡಿದರು.
ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಧಕೃಷ್ಣಶೇಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಕಟ್ಟಡದಿಂದ ಮಾಸಿಕ ೪೫ ಸಾವಿರ ರೂ. ಆದಾಯ ಬರುತ್ತಿದೆ. ಇದರೊಂದಿಗೆ ಸಂಘದ ಸದಸ್ಯರೆಲ್ಲರೂ, ಸಮುದಾಯ ಕೈಜೋಡಿಸಿದಲ್ಲಿ ೨ ಕೋಟಿ ರೂ. ವೆಚ್ಚದಲ್ಲಿ ನೂತನ ಕಲ್ಯಾಣ ಮಂಟಪ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು.
ನಿವೃತ್ತ ಲೆಕ್ಕಾಧಿಕಾರಿ ನಾಗೇಶ್‌ಶೇಟ್ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ಖಜಾಂಚಿ ಪುರುಷೋತ್ತಮಶೇಟ್ ವರದಿ ಮಂಡಿಸಿದರು. ನಿರ್ದೇಶಕ ಬಾಲಸುಬ್ರಮಣ್ಯರಾಯ್ಕರ್ ವಂದಿಸಿದರು. ರಮೇಶ್‌ಶೇಟ್, ಶ್ರೀಪತಿಭಟ್ ಮತ್ತಿತರೆ ನಿರ್ದೇಶಕರು ಉಪಸ್ಥಿತರಿದ್ದರು.
lakh to Daivajna Brahmin Sangha Grants
Leave a comment