ಚಿಕ್ಕಮಗಳೂರು: ಸೀಗೋಡುವಿನ ಪಿ.ಎಂ.ಶ್ರೀ ಜವಾಹರ ನವೋದಯ ವಿದ್ಯಾಲಯವು ವಸತಿಯುತ ಸಹಶಿಕ್ಷಣ ವಿದ್ಯಾಲಯವಾಗಿದ್ದು, ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಇಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಪ್ರತಿನಿಧಿಸುವ ಸುಮಾರು ೫೦೦ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಪಿ.ಎಂ.ಶ್ರೀ ಯೋಜನೆಗೆ ಆಯ್ಕೆಯಾಗಿರುವ ಈ ವಿದ್ಯಾಲಯವು ಪಿ.ಎಂ.ಶ್ರೀ ಜವಾಹರ ನವೋದಯ ವಿದ್ಯಾಲಯ ನಾಮಧೇಯದ ಅಡಿಯಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಅನೇಕ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ.
ಈ ವಿದ್ಯಾಲಯದ ವಿಶೇಷತೆಗಳೆಂದರೆ, ಇದು ಚಿಕ್ಕಮಗಳೂರು ಜಿಲ್ಲೆಯ ಕೇಂದ್ರ ಸರ್ಕಾರದಿಂದ ನಡೆಸಲ್ಪಡುತ್ತಿರುವ ಏಕೈಕ ಸಹಶಿಕ್ಷಣ ವಸತಿಯುತ ಶಾಲೆಯಾಗಿದ್ದು ಇಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳಿವೆ. ಅಲ್ಲದೆ ಮಕ್ಕಳಿಗೆ ಉಚಿತ ಶಿಕ್ಷಣ, ಆಹಾರ ಮತ್ತು ಪಠ್ಯಪುಸ್ತಕಗಳ ವಿತರಣೆ ಅಲ್ಲದೆ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವ ನಿಟ್ಟಿನಲ್ಲಿ ವಲಸೆ ಪದ್ಧತಿ ಇದ್ದು ಇದರಿಂದ ವೈವಿಧ್ಯಮಯ ಸಾಂಸ್ಕೃತಿಕ ವಿನಿಮಯ ನಡೆಯುತ್ತದೆ.
ನಮ್ಮ ವಿದ್ಯಾಲಯದಲ್ಲಿ ಕ್ರೀಡೆ ಮತ್ತು ಆಟೋಟಗಳಿಗೆ ಉತ್ತೇಜನ ನೀಡಲಾಗುತ್ತಿದ್ದು, ವಲಯ ಮಟ್ಟ, ರಾಜ್ಯ ಮಟ್ಟ, ರಾಷ್ಟ್ರೀಯ ಮಟ್ಟದಲ್ಲಿ ಈ ಸ್ಪರ್ಧೆಗಳು ನಡೆಯುತ್ತವೆ. ನಮ್ಮ ವಿದ್ಯಾಲಯದಲ್ಲಿ ಎನ್.ಸಿ.ಸಿ, ಸೌಟ್ಸ್ ಮತ್ತು ಗೈಡ್ಸ್ ಘಟಕಗಳಿದ್ದು, ಎನ್.ಸಿ.ಸಿಯಲ್ಲಿ ಎ.ದೃಢೀಕರಣ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ ಅಲ್ಲದೆ ಸೌಟ್ಸ್ ಮತ್ತು ಗೈಡ್ಸ್ನಲ್ಲಿ ಈ ಸಂಸ್ಥೆಯ ಮಕ್ಕಳಿಗೆ ರಾಷ್ಟ್ರಪತಿ ಪುರಸ್ಕಾರದವರೆಗೂ ಅರ್ಹತೆ ಪಡೆದುಕೊಳ್ಳಲು ಅವಕಾಶವಿದೆ.
ಇಲ್ಲಿ ನಡೆಯುವ ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ವಿಜ್ಞಾನ ಜ್ಯೋತಿ, ಕರ್ತಾ, ಅವಂತಿ ತರಬೇತಿಗಳು ಮಕ್ಕಳಲ್ಲಿ ಜೆಇಇ ಮತ್ತು ಎನ್ಇಇಟಿಗೆ ದಕ್ಷತೆಯನ್ನು ಬೆಳೆಸಲು ತುಂಬಾ ನೆರವಾಗುತ್ತವೆ. ೧೦ ಮತ್ತು ೧೨ ನೇ ಬೋರ್ಡ್ ಪರೀಕ್ಷೆಯಲ್ಲಿ (೨೦೨೫-೨೬) ಶೇ.೧೦೦ ಗುಣಾತ್ಮಕ ಫಲಿತಾಂಶ ಬಂದಿದೆ.
ಈ ವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ಕಲಾ ಉತ್ಸವ, ವಿಜ್ಞಾನ ಮೇಳ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ವಿಜ್ಞಾನ ಕಾರ್ಯಾಗಾರಗಳಲ್ಲಿ ಭಾಗವಹಿಸಲು ಮಕ್ಕಳಿಗೆ ತರಬೇತಿ ಕೊಡಲಾಗುತ್ತದೆ.
ಇಂತಹ ಪ್ರತಿಷ್ಠಿತ ವಿದ್ಯಾಲಯದಲ್ಲಿ ೨೦೨೭-೨೮ನೇ ಶೈಕ್ಷಣಿಕ ಸಾಲಿಗೆ ೬ನೇ ತರಗತಿಗೆ ಪ್ರವೇಶ ಪಡೆಯಲು ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ-೨೦೨೭ ಇದೇ ವರ್ಷ ನವೆಂಬರ್ ೨೮ ರಂದು ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದ್ದು ಅದಕ್ಕಾಗಿ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿಗಳನ್ನು ಅನ್ಲೈನ್ ಮೂಲಕ https://navodaya.gov.in ಟಿ ವೆಬ್ಸೈಟ್ನಲ್ಲಿ ಅರ್ಜಿಗಳನ್ನು ತುಂಬಬಹುದು.
ಅರ್ಹತೆ: ಅಭ್ಯರ್ಥಿಗಳ ಪೋಷಕರು ಇದೇ ಜಿಲ್ಲೆಯಲ್ಲಿ ವಾಸವಾಗಿರಬೇಕು. ಅಭ್ಯರ್ಥಿಗಳು ೨೦೨೬-೨೭ನೇ ಶೈಕ್ಷಣಿಕ ವರ್ಷದಲ್ಲಿ ಇದೇ ಜಿಲ್ಲೆಯ ಸರ್ಕಾರಿ, ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ ೫ನೇ ತರಗತಿಯಲ್ಲಿ ಓದುತ್ತಿರಬೇಕು. ವಿದ್ಯಾರ್ಥಿಯು ೩ ಮತ್ತು ೪ ನೇ ತರಗತಿಯ ಪೂರ್ಣ ಶೈಕ್ಷಣಿಕ ವರ್ಷವನ್ನು ಸರ್ಕಾರಿ, ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ ಓದಿರಬೇಕು. ಅಭ್ಯರ್ಥಿಗಳು ೦೧.೦೫.೨೦೧೫ ರಿಂದ ೩೧.೦೭.೨೦೧೭ರ ನಡುವೆ ಜನಿಸಿದವರಾಗಿರಬೇಕು. (ಎರಡೂ ದಿನಗಳು ಸೇರಿ)
ಮೀಸಲಾತಿ: ಜಿಲ್ಲೆಯಲ್ಲಿ ಕನಿಷ್ಠ ಶೇ.೭೫ ರಷ್ಟು ಸ್ಥಾನಗಳು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಸರ್ಕಾರದ ನಿಯಮದನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗ ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಮೀಸಲಾತಿ ಇದೆ. ಕನಿಷ್ಠ ೧/೩ ರಷ್ಟು ಸ್ಥಾನಗಳು ಬಾಲಕಿಯರಿಗೆ ಮೀಸಲಾಗಿವೆ.
https://navodaya.gov.in ಆಯ್ಕೆ ಪರೀಕ್ಷೆಯ ದಿನಾಂಕವು ನವೆಂಬರ್ ೨೮ ಆಗಿದ್ದು, ಅರ್ಜಿ ಸಲ್ಲಿಸಲು ಜುಲೈ ೩೧ ಕೊನೆಯ ದಿನವಾಗಿದೆ. ಆಯ್ಕೆ ಪರೀಕ್ಷೆಗೆ ಅರ್ಜಿಗಳನ್ನು ಯಾವುದಾದರೂ ಅಡೆತಡೆಗಳು ಬಂದಲ್ಲಿ ನಮ್ಮ ವಿದ್ಯಾಲಯದ ಕೆಳಗಿನ ಸಹಾಯವಾಣಿ ಸಂಖ್ಯೆಗಳಿಗೆ ಸಂಪರ್ಕಿಸುವ ಮೂಲಕ ತಮ್ಮ ತೊಂದರೆಗಳನ್ನು ಬಗೆಹರಿಸಿಕೊಳ್ಳಬಹುದು.
ಸಹಾಯವಾಣಿ ನಂಬರ್ಗಳು: ನಾಗರಾಜ ಎ.ಪಿ. ಟಿ.ಜಿ.ಟಿ ಕನ್ನಡ-೯೪೪೯೭೯೫೪೮೦, ದೊರೆರಾಜ ಜೆ.ಆರ್-ಟಿ.ಜಿ.ಟಿ ಕನ್ನಡ ೬೩೬೦೬೨೬೫೧೬, ೫ನೇ ತರಗತಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳ ಪೋಷಕರು ಇದರ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಜವಾಹರ ನವೋದಯ ವಿದ್ಯಾಲಯಕ್ಕೆ ಪ್ರಾಚಾರ್ಯ ಅಕ್ಷಯ್ ಕುಮಾರ್ ದ್ವಿವೇದಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Invitation for admission in Jawahar Navodaya Vidyalaya
Leave a comment