ಚಿಕ್ಕಮಗಳೂರು: ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳು ಒಳಗೊಂಡಂತೆ) ೨೦೨೬-೨೭ನೇ ಶೈಕ್ಷಣಿಕ ಸಾಲಿಗೆ ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಅತಿಥಿ ಗ್ರಂಥಪಾಲಕರು ಹಾಗೂ ಅತಿಥಿ ದೈಹಿಕ ಶಿಕ್ಷಣ ನಿರ್ದೇಶಕರು ಒಳಗೊಂಡಂತೆ) ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ನಿಗದಿತ ವೇಳಾಪಟ್ಟಿಯೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ತಿದ್ದುಪಡಿ ಮಾಡಲು ಜುಲೈ ೧೮ ಕೊನೆಯ ದಿನವಾಗಿದೆ. ಜುಲೈ ೧೯ ರಂದು ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುವುದು. ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಿದ ನಂತರ ಅರ್ಜಿಯನ್ನು ತಿದ್ದುಪಡಿ ಮಾಡಲು ಜು.೧೯ ರಿಂದ ೨೨ರವರೆಗೆ ಅವಕಾಶ ನೀಡಲಾಗುವುದು. ತಾತ್ಕಾಲಿಕ ಕಾರ್ಯಭಾರವನ್ನು ಜುಲೈ ೨೫ ರಂದು ಪ್ರಕಟಿಸಲಾಗುವುದು, ಜುಲೈ ೨೬ ರಂದು ಕೌನ್ಸಿಲಿಂಗ್ ಮೆರಿಟ್ ಪಟ್ಟಿ ಹಾಗೂ ಕಾರ್ಯಭಾರ ಪ್ರಕಟಿಸಲಾಗುವುದು. ಮೆರಿಟ್ ಪಟ್ಟಿಯನ್ವಯ ಕಾಲೇಜು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ಪಟ್ಟಿಯನ್ನು ಜುಲೈ ೨೮ ರಂದು ಪ್ರಕಟಿಸಲಾಗುವುದು.
ವಿದ್ಯಾರ್ಹತೆ ಮತ್ತು ಆಯ್ಕೆ ಮಾನದಂಡ:
ಯುಜಿಸಿ ೨೦೧೮ರ ಮಾರ್ಗಸೂಚಿಗಳನ್ವಯ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಶೇ.೫೫ ಅಂಕಗಳನ್ನು (ಎಸ್ಸಿ/ಎಸ್ ಟಿ/ಓಬಿಸಿ/ವಿಶೇಷ ಚೇತನರಿಗೆ ಶೇ.೫೦) ಹೊಂದಿರಬೇಕು. ಇದರೊಂದಿಗೆ ಎನ್‌ಇಟಿ, ಎಸ್‌ಎಲ್‌ಇಟಿ, ಕೆ.ಸೆಟ್, ಪಿಹೆಚ್.ಡಿ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯ. ಮೆರಿಟ್ ಅಂಕಗಳ ಹಂಚಿಕೆ ಒಟ್ಟು ೧೦೦ ಅಂಕಗಳು.
ಸ್ನಾತಕೋತ್ತರ ಪದವಿ ಅಂಕಗಳು: ಅಭ್ಯರ್ಥಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಶೇ.೨೫ ಭಾಗವನ್ನು ಪರಿಗಣಿಸಲಾಗುವುದು (ಗರಿಷ್ಠ ೨೫ ಅಂಕಗಳು). ಹೆಚ್ಚುವರಿ ವಿದ್ಯಾರ್ಹತೆ: ಪಿಹೆಚ್.ಡಿ ಹೊಂದಿದ್ದಲ್ಲಿ ೧೨ ಅಂಕಗಳು; ಎನ್‌ಇಟಿ/ಕೆ-ಸೆಟ್/ಎಸ್‌ಎಲ್‌ಇಟಿ ಹೊಂದಿದ್ದಲ್ಲಿ ೦೯ ಅಂಕಗಳು; ಎಂ.ಫಿಲ್ ಹೊಂದಿದ್ದಲ್ಲಿ ೦೬ ಅಂಕಗಳು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಪ್ರತಿ ಶೈಕ್ಷಣಿಕ ವರ್ಷಕ್ಕೆ ೩ ಅಂಕಗಳಂತೆ ಗರಿಷ್ಠ ೪೮ ಅಂಕಗಳನ್ನು (ಮಿತಿ ೧೬ ವರ್ಷಗಳು) ನೀಡಲಾಗುವುದು. ಅರ್ಹ ವಿಕಲಚೇತನ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ ೧೦ ಅಂಕಗಳನ್ನು ನೀಡಲಾಗುವುದು.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು:
೨೦೨೫-೨೬ ನೇ ಸಾಲಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆದರೆ, ತಮ್ಮ ಅರ್ಜಿಯಲ್ಲಿನ ಮಾಹಿತಿಯನ್ನು ತಿದ್ದುಪಡಿ ಮಾಡಲು ಅವಕಾಶವಿದೆ. ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸಲ್ಲಿಸಿದ ಸೇವೆಯನ್ನು ಮಾತ್ರ ಪರಿಗಣಿಸಲಾಗುವುದು. ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸುವುದಿಲ್ಲ.
ಸಾಮಾನ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು: https://emis.karnataka.gov.in/application.aspx ಮತ್ತು ಸರ್ಕಾರಿ ಚಿತ್ರಕಲಾ, ಸಂಸ್ಕೃತ ಕಾಲೇಜುಗಳು https://emis.karnataka.gov.in/AppSFC.aspx ಲಿಂಕ್‌ಗಳ ಮೂಲಕ ಅನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದಲ್ಲಿ ಅಭ್ಯರ್ಥಿತನವನ್ನು ತಿರಸ್ಕರಿಸಲಾಗುವುದು. ಒಂದು ವೇಳೆ ಹಾಜರುಪಡಿಸಿದ ದಾಖಲೆಗಳು ನಕಲಿ ಎಂದು ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾದ ನಂತರ ಪ್ರಸೂತಿ ರಜೆ ಮೇಲೆ ತೆರಳುವ ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ ೯೦ ದಿನಗಳ ವೇತನ ಸಹಿತ ಮಾತೃತ್ವ ರಜೆಯ ಸೌಲಭ್ಯವನ್ನು ನೀಡಲಾಗುತ್ತದೆ. ಹೆಚ್ಚಿನ ವಿವರಕ್ಕೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://dce.karnataka.gov.in ಅನ್ನು ಪ್ರತಿನಿತ್ಯ ಗಮನಿಸುವಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Guest Lecturer Posts in Government First Grade Colleges
Leave a comment