ಚಿಕ್ಕಮಗಳೂರು: ಬೀಗ ಹಾಕಿದ ಮನೆಯನ್ನು ಗುರಿಯಾಗಿಸಿಕೊಂಡ ಖತರ್ನಾಕ್ ಕಳ್ಳರು, ಬರೊಬ್ಬರಿ 6.60 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣದೊಂದಿಗೆ ಪರಾರಿಯಾಗಿದ್ದಾರೆ. ಈ ಘಟನೆ ಮಂಗಳೂರಿಗೆ ಹೋಗಿದ್ದ ಕುಟುಂಬವೊಂದಕ್ಕೆ ಅಕ್ಷರಶಃ ಆಘಾತ ತಂದಿದೆ.
ಶುಹೇಬ್ ಅವರು ತಮ್ಮ ಕುಟುಂಬದೊಂದಿಗೆ ಮಂಗಳೂರಿಗೆ ತೆರಳಿದ್ದರು. ದಿನಾಂಕ 08.04.2026ರ ರಾತ್ರಿ 08:00 ಗಂಟೆಗೆ ಮನೆಗೆ ಬೀಗ ಹಾಕಿ ತೆರಳಿದ್ದ ಅವರು, 11.04.2026ರ ಸಂಜೆ ವಾಪಸ್ ಬಂದಾಗ ಮನೆ ಸಂಪೂರ್ಣವಾಗಿ ಕಳ್ಳರ ಪಾಲಾಗಿರುವುದು ಕಂಡುಬಂದಿದೆ. ಮನೆಯ ಗೇಟ್ ತೆರೆದಿದ್ದು, ಮುಂಭಾಗಿಲನ್ನು ಯಾವುದೋ ಭಾರವಾದ ಆಯುಥದಿಂದ ಮೀಟಿ ಮುರಿದಿರುವುದು ಸ್ಪಷ್ಟವಾಗಿತ್ತು.
ಮನೆಯೊಳಗೆ ಪ್ರವೇಶಿಸಿದಾಗ ದೃಶ್ಯ ಇನ್ನಷ್ಟು ಭಯಾನಕವಾಗಿತ್ತು. ಎರಡು ಬೆಡ್ ರೂಂಗಳಲ್ಲಿನ ಗಾಡೇಜ್ ಬೀರುಗಳನ್ನು ಅದೇ ರೀತಿ ಮೀಟಿ ಮುರಿದು, ಅವುಗಳಲ್ಲಿಟ್ಟಿದ್ದ ಹಣ ಹಾಗೂ ಬಂಗಾರದ ಒಡವೆಗಳನ್ನು ದೋಚಲಾಗಿತ್ತು.
ಆಸ್ಪತ್ರೆಗೆ ಹೋಗುವ ಮುನ್ನ ಅವರ ತಾಯಿಯವರು ಬೀರುವಿನಲ್ಲಿಟ್ಟಿದ್ದ ಸುಮಾರು 130 ಗ್ರಾಂ ತೂಕದ ಹಳೆಯ ಬಂಗಾರದ ಆಭರಣಗಳು (ಅಂದಾಜು ಮೌಲ್ಯ 2,60,000 ರೂ.) ಮತ್ತು 4 ಲಕ್ಷ ರೂಪಾಯಿ ನಗದು ಹಣ ಎಲ್ಲವೂ ಮಾಯವಾಗಿತ್ತು.
ಕಳುವಾದ ಒಟ್ಟು ಸ್ವತ್ತಿನ ಮೌಲ್ಯ 6,60,000/- ರೂ. ಎಂದು ಅಂದಾಜಿಸಲಾಗಿದ್ದು, ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ.
ಕುಟುಂಬದವರು ಕಳೆದುಹೋದ ಚಿನ್ನ ಮತ್ತು ಹಣವನ್ನು ಪತ್ತೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
House locked cash and jewellery stolen
Leave a comment