ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮಹತ್ವದ ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯ ಪ್ರಕಾರ, ಜೂನ್ 9 ರಂದು ಆರೆಂಜ್ ಅಲರ್ಟ್ ಹಾಗೂ ಜೂನ್ 10 ಮತ್ತು 11 ರಂದು ಜಿಲ್ಲಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯ ಹಲವೆಡೆ ವ್ಯಾಪಕ ಹಾಗೂ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲೇ ಮೊಕ್ಕಾಂ ಹೂಡಿ ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ನದಿ ಪಾತ್ರದ ನಿವಾಸಿಗಳು ಹಾಗೂ ಸಾರ್ವಜನಿಕರು ಯಾವುದೇ ಕಾರಣಕ್ಕೂ ನದಿಗಳಿಗೆ ಇಳಿಯಬಾರದು, ತಗ್ಗು ಪ್ರದೇಶಗಳಿಗೆ ತೆರಳಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಮಳೆಯ ಸಂದರ್ಭದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ವಿದ್ಯುತ್ ಕಂಬಗಳು, ಶಿಥಿಲಗೊಂಡ ಕಟ್ಟಡಗಳು ಹಾಗೂ ದೊಡ್ಡ ಮರಗಳ ಸಮೀಪ ನಿಲ್ಲದೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಮನವಿ ಮಾಡಲಾಗಿದೆ.
ಯಾವುದೇ ರೀತಿಯ ವಿಪತ್ತು, ಅನಾಹುತ ಅಥವಾ ತುರ್ತು ಪರಿಸ್ಥಿತಿ ಎದುರಾದಲ್ಲಿ ಸಾರ್ವಜನಿಕರ ನೆರವಿಗಾಗಿ ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆಗಳನ್ನೂ ಪ್ರಕಟಿಸಿದೆ. ಮಾಹಿತಿ ನೀಡಲು ಅಥವಾ ನೆರವು ಪಡೆಯಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಾಯವಾಣಿ 08262-238950 ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ 9480805100 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಮಳೆಯ ತೀವ್ರತೆ ಹೆಚ್ಚುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯ ಸಂಚಾರ ತಪ್ಪಿಸಿ, ಜಿಲ್ಲಾಡಳಿತದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.
Heavy rain likely in the coffee country for the next three days
Leave a comment