ಚಿಕ್ಕಮಗಳೂರು: ಜನರಲ್ಲಿ ಆರ್ಥಿಕ ಶಕ್ತಿ ತುಂಬಲು ಪಂಚ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಈ ಯೋಜನೆ ಅನುಕೂಲವಾಗಿದೆ ಎಂದು ಮಾನ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೆ.ಜೆ.ಜಾರ್ಜ್ ಅವರು ಹೇಳಿದರು.
ಚಿಕ್ಕಮಗಳೂರು ಕ್ಷೇತ್ರದ ಬೆಳವಾಡಿ ಕೆರೆಗೆ ಇಂದು ಬಾಗಿನ ಅರ್ಪಿಸಿ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ನಮ್ಮ ಜನಸಂಖ್ಯೆಯಲ್ಲಿ ಶೇ.೫೦ ರಷ್ಟು ಮಹಿಳೆಯರಿದ್ದು, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದರೆ ಇಡೀ ಕುಟುಂಬಕ್ಕೆ ಬಲ ಬಂದಂತಾಗಲಿದೆ. ಯುವಕರಿಗೆ ಯುವನಿಧಿ, ೧.೬೦ ಕೋಟಿ ಜನರಿಗೆ ೨೦೦ ಯೂನಿಟ್ಗಳಷ್ಟು ಉಚಿತ ವಿದ್ಯುತ್ ನೀಡುವ ವ್ಯವಸ್ಥೆ,. ಅಂತೆಯೇ ಮಹಿಳೆಯರಿಗೆ ಸಾರಿಗೆ ನಿಗಮದ ಬಸ್ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ, ಗೃಹಲಕ್ಷ್ಮೀ ಯೋಜನೆಯಡಿ ನೀಡಲಾಗುವ ೨೦೦೦ ರೂ.ಗಳು ಸರಾಸರಿ ಪರಿಗಣಿಸಿದರೆ ಒಂದು ಕುಟುಂಬಕ್ಕೆ ೫ ಸಾವಿರ ರೂ. ದೊರೆತಂತಾಗುತ್ತಿದೆ ಎಂದರು.
ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸೋಲಾರ್ ವ್ಯವಸ್ಥೆಯನ್ನು ಹೆಚ್ಚು ಮಾಡಲು ಯೋಜನೆ ರೂಪಿಸಲಾಗಿದೆ. ಜೊತೆಗೆ ಶರಾವತಿ ಪಂಪ್ ಸ್ಟೋರೇಜ್ ನೀರು ಬಳಸಿ ೨ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕೇಂದ್ರ ಹಾಗೂ ರಾಜ್ಯದ ಅನುಮತಿ ಕೋರಲಾಗಿದೆ. ಪಾವಗಡದಲ್ಲಿ ಇನ್ನೂ ೨ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಮುಂದಾಗಿದ್ದೇವೆ. ಇದಕ್ಕೆ ರೈತರಿಂದ ಗುತ್ತಿಗೆ ಪಡೆದ ಭೂಮಿಗೆ ಸರ್ಕಾರ ಪ್ರತೀ ತಿಂಗಳು ಹಣ ಪಾವತಿಸುತ್ತಿದೆ. ಕುಸುಮ್-ಸಿ ಯೋಜನೆಯಡಿ ೨೫೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಂಬಂಧ ಖಾಸಗಿಯವರು ಬಂಡವಾಳ ಹೂಡಲಿದ್ದು, ಅವರಿಂದ ೨ ಅಥವಾ ೨.೧೦ ರೂ.ಗಳಿಗೆ ಕೊಡಲು ಮುಂದೆ ಬಂದಿದ್ದಾರೆ. ಇದಕ್ಕೆ ಸುಮಾರು ೧೦ ಸಾವಿರ ಕೋಟಿ ರೂ. ಬಂಡವಾಳ ಹೂಡುವ ಅವಶ್ಯಕತೆ ಇದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗದ ಕಡೆಗಳಲ್ಲಿ ಕೊಳವೆ ಬಾವಿಗಳಿಗೆ ಸೋಲಾರ್ ಮೂಲಕ ವಿದ್ಯುತ್ ಅನ್ನು ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಚಿಕ್ಕಮಗಳೂರು ಕ್ಷೇತ್ರದ ಶಾಸಕರಾದ ಹೆಚ್.ಡಿ.ತಮ್ಮಯ್ಯ ಪ್ರಾಸ್ತಾವಿಕ ಮಾತನಾಡಿ, ಕಳೆದ ೨೫ ವರ್ಷಗಳಿಂದೀಚೆಗೆ ದೇವನೂರು ಕೆರೆ ಮಳೆಯಿಂದ ಮಾತ್ರ ಒಮ್ಮೆ ತುಂಬಿತ್ತು. ಬಹುಶಃ ಇದೊಂದು ತೆಂಗು ಹಾಗೂ ಅಡಿಕೆಯ ನಾಡಾಗಿತ್ತು. ಬರಗಾಲ ಬಂದು ಈ ಎರಡು ಕೆರೆಗೆ ನೀರಿಲ್ಲದೆ ಬರಡಾಯಿತು. ಬಹುಶಃ ಬೆಳವಾಡಿ, ದೇವನೂರಿನಂತಹ ದೊಡ್ಡ ಗ್ರಾಮಗಳಿಂದ ಜನರು ಬೆಂಗಳೂರಿಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಕಾಲದಲ್ಲಿ ನೀರು ಮತ್ತು ವಿದ್ಯುತ್ ದೊರಕಿದರೆ ಇಲ್ಲಿನ ರೈತರು ಉತ್ತಮ ಬೆಳೆ ಬೆಳೆದು ಬೆಲೆ ಸಿಕ್ಕಿದ್ದಲ್ಲಿ ಅವರೆಲ್ಲಾ ಸ್ವಾಭಿಮಾನಿಗಳಾಗಿ ಬದುಕುತ್ತಾರೆ. ಅನೇಕ ರೈತ ಮುಖಂಡರು ಈ ಕೆರೆಯನ್ನು ತುಂಬಿಸಲು ಪ್ರಯತ್ನಿಸಿದ್ದರು ಎಂದರು.
ಈ ಹಿಂದೆ ಮಲ್ಲಿಕಾರ್ಜುನ ಪ್ರಸನ್ನ ಅವರು ಸಣ್ಣ ನೀರಾವರಿ ಸಚಿವರಾದ ಬಳಿಕ ಜನಪ್ರತಿನಿಧಿಗಳಾಗಿದ್ದ ಕೆ.ಬಿ.ಮಲ್ಲಿಕಾರ್ಜುನ್, ಧರ್ಮೇಗೌಡರು, ಸಿ.ಟಿ.ರವಿ ಇವರುಗಳು ಕರಗಡ ಯೋಜನೆಗೆ ಶ್ರಮಪಟ್ಟಿದ್ದಾರೆ. ಆದರೆ ಕರಗಡ ಯೋಜನೆ ಕಳಸಾಪುರ ಮತ್ತು ಈಶ್ವರಹಳ್ಳಿ ಕೆರೆಗಳನ್ನು ಮಾತ್ರ ತುಂಬಲು ಶಕ್ತವಾಗಿದೆ. ಈ ಕೆರೆಗಳಿಗೆ ನೀರು ತುಂಬಿಸಲು ರಣಘಟ್ಟ ಯೋಜನೆ, ಭದ್ರಾ ಉಪ ಕಣಿವೆ ಯೋಜನೆ ಇದ್ದರೂ ಈ ಯೋಜನೆಗಳು ಕೈಗೂಡುವವರೆಗೆ ಇನ್ನೂ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನೀರಾವರಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಜಿಲ್ಲೆಯ ಉಸ್ತುವಾರಿ ಸಚಿವ ಜಾರ್ಜ್ ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಮಾಡಿದ ಫಲವಾಗಿ ಎತ್ತಿನಹೊಳೆ ನೀರು ಇಲ್ಲಿಯವರೆಗೆ ನೀರು ಹರಿದು ಬಂದಿದೆ. ಆದರೆ ಮುಂದೆ ರಣಘಟ್ಟ ಯೋಜನೆಯನ್ನು ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿದರು. ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ರಾಜ್ಯ ಪರಿಸರ ತಜ್ಞರ ಮೌಲ್ಯ ಮಾಪನ ಸಮಿತಿಯ ಅಧ್ಯಕ್ಷ ಎ.ಎನ್.ಮಹೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಮುಖಂಡರಾದ ಹೆಚ್.ಪಿ.ಮಂಜೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಬಸವರಾಜ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ತಹಸೀಲ್ದಾರ್ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.
Five guarantees are full of power for those in financial distress
Leave a comment