ಚಿಕ್ಕಮಗಳೂರು: ಅರಣ್ಯ ಕಾಯ್ದೆಗಳ ಹೆಸರಿನಲ್ಲಿ ಜಿಲ್ಲೆಯ ರೈತರ ಬದುಕನ್ನು ಅರಣ್ಯ ಇಲಾಖೆ ಕಸಿದು ಕೊಳ್ಳುತ್ತಿದೆ. ಅಂತಹ ಕಾಯ್ದೆಗಳನ್ನು ರದ್ದುಪಡಿಸಬೇಕು, ರೈತರನ್ನು ರಕ್ಷಿ ಸಬೇಕು ಎಂಬ ಒಕ್ಕೊರಲ ಒತ್ತಾಯ ಸೋಮವಾರ ನಡೆದ ರೈತರ ಸಮಾವೇಶದಲ್ಲಿ ವ್ಯಕ್ತವಾಯಿತು.
ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ಶೃಂಗೇರಿ ಕ್ಷೇತ್ರದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಬೆಳೆಗಾರರ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಪಕ್ಷಾತೀತವಾಗಿ ಭಾಗವಹಿಸಿ ಬೆಂಬಲ ಸೂಚಿಸಿದರು.
ಮೂಡಿಗೆರೆ, ಕೊಪ್ಪ, ಶೃಂಗೇರಿ ಸೇರಿ ಎಲ್ಲೆಡೆಯಿಂದ ರೈತರು ಬಂದಿದ್ದರು. ತಾಲ್ಲೂಕು ಕಚೇರಿ ಆವರಣದಿಂದ ಮೆರವಣಿಗೆ ನಡೆಸಿದ ಸಾವಿರಾರು ರೈತರು, ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡರು.
ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯಕುಮಾರ್, ‘ಸೆಕ್ಷನ್ –4(ಪ್ರಸ್ತಾವಿತ ಅರಣ್ಯ), ಡೀಮ್ಡ್ (ಪರಿಭಾವಿತ) ಅರಣ್ಯ, ಜಿಲ್ಲಾಧಿಕಾರಿ ಘೋಷಿತ ಅರಣ್ಯದ ಹೆಸರಿನಲ್ಲಿ ರೈತರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸಿ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಜಿಲ್ಲೆಯ ಜನಪ್ರತಿನಿಧಿಗಳ ಮೇಲಿದೆ. ಆದ್ದರಿಂದ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸಿ ರೈತ ಸಮಾವೇಶ ಆಯೋಜಿ ಸಲಾಗಿದೆ. ಜಿಲ್ಲೆಯ ರೈತರ ಪರವಾಗಿ ಜನಪ್ರತಿನಿಧಿಗಳು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮುಂದೆ ಧ್ವನಿ ಎತ್ತಬೇಕು’ ಎಂದು ಒತ್ತಾಯಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತ ನಾಡಿ, ‘ದೊಡ್ಡ ಬೆಳೆಗಾರರು ಸರ್ಕಾರಿ ಜಾಗ ಒತ್ತುವರಿ ಮಾಡಿ ಕೊಂಡು ಹೋರಾಟ ನಡೆಸುತ್ತಿದ್ದಾರೆ ಎಂಬ ಅಭಿಪ್ರಾಯ ತಪ್ಪು. ಬಹುತೇಕ ಶೇ 90ರಷ್ಟು ರೈತರು 1 ಎಕರೆಯಿಂದ 5 ಎಕರೆಯನ್ನಷ್ಟೇ ಸಾಗುವಳಿ ಮಾಡುತ್ತಿದ್ದಾರೆ. ಹಕ್ಕು ಪತ್ರ ಸಿಗದೆ ಜೀವ ಮಾನವಿಡಿ ಕಾಯುತ್ತಿದ್ದಾರೆ. ಇದನ್ನು ಸರ್ಕಾರಕ್ಕೆ ಅರ್ಥ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ’ ಎಂದರು.
‘ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಬಳಿಗೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿಯೋಗ ಕರೆದೊಯ್ದಿದ್ದೆ. ಸಭೆ ನಡೆಸಿ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲು ಒತ್ತಾಯಿಸಲಾಯಿತು. ಸೆಕ್ಷನ್ 4 ಅಧಿಸೂಚನೆ ಪುನರ್ ಪರಿಶೀಲಿಸಲು ಮನವಿ ಮಾಡಲಾಗಿದೆ. ಸೆಕ್ಷನ್ 4 ಜಾರಿಗೊಳಿಸಿರುವ ಜಾಗದಲ್ಲಿ ಸಾಗುವಳಿ ಇಲ್ಲದ ಜಾಗವನ್ನು ‘ಎ’ ಬ್ಲಾಕ್ ಎಂದೂ, ಸಾಗುವಳಿ ಇದ್ದರೆ ‘ಬಿ’ ಬ್ಲಾಕ್ ಎಂದು ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಲು ಮನವರಿಕೆ ಮಾಡಿದ್ದೇವೆ’ ಎಂದು ವಿವರಿಸಿದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ‘ಎಲ್ಲ ದಕ್ಕೂ ನ್ಯಾಯಾಂಗದ ಮೇಲೆ ಬೊಟ್ಟು ಮಾಡಲಾಗುತ್ತಿದೆ. ಶಾಸಕಾಂಗ ಮಾಡಿದ ತೀರ್ಮಾನಗಳನ್ನು ಕಾರ್ಯಾಂಗ ಪಾಲಿ ಸದೆ ಇರುವುದೇ ಸಮಸ್ಯೆಗೆ ಕಾರಣ’ ಎಂದರು.
ಶಾಸಕಾಂಗ, ಕಾರ್ಯಾಂಗ ಇದ್ದಾಗ ಎಲ್ಲದಕ್ಕೂ ನ್ಯಾಯಾಂಗದ ಮೇಲೆ ಬೊಟ್ಟು ಮಾಡುವ ಕೆಲಸ ನಡೆಯುತ್ತಿದೆ. ಶಾಸಕಾಂಗ ಹೇಳಿದ್ದನ್ನು ಕಾರ್ಯಾಂಗ ಮಾಡದಿರುವುದೇ ಸಮಸ್ಯೆಗಳಿಗೆ ಕಾರಣ. ಒತ್ತುವರಿ ಜಮೀನು 25 ಎಕರೆ ತನಕ ಗುತ್ತಿಗೆ ನೀಡುವ ಯೋಜನೆ ಅನು ಷ್ಠಾನ ವಿಷಯ ಎಲ್ಲಾ ಶಾಸಕರ ಮೇಲಿದೆ ಎಂದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ‘ಭದ್ರಾ ಮತ್ತು ತುಂಗಾ ಜಲಾಶಯದಲ್ಲಿ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ತರೀಕೆರೆ ತಾಲ್ಲೂಕಿನಲ್ಲಿ ಸರ್ಕಾರವೇ ಭೂಮಿ ನೀಡಿದೆ. ಆದರೆ, ಈಗ ಆ ಜಾಗ ನಮಗೆ ಸೇರಿದ್ದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. 35–40 ವರ್ಷಗಳಿಂದ ಜೀವನ ನಡೆಸುತ್ತಿರುವ ರೈತರು ಈಗ ಎಲ್ಲಿಗೆ ಹೋಗಬೇಕು’ ಎಂದರು.
ಕಾಂಗ್ರೆಸ್ ಮುಖಂಡರಾದ ಬಿ.ಬಿ.ನಿಂಗಯ್ಯ, ಗಾಯತ್ರಿ ಶಾಂತೇಗೌಡ, ಎಂ.ಪಿ.ಕುಮಾರಸ್ವಾಮಿ, ಎಚ್.ಎಚ್.ದೇವರಾಜ್, ಬೆಳೆಗಾರರ ಮುಖಂಡ ಹಳಸೆ ಶಿವಣ್ಣ, ಜಗನ್ನಾಥ್ ಅತ್ತಿಕಟ್ಟೆ, ಡಾ.ಕೃಷ್ಣೇಗೌಡ, ಕೆ.ಟಿ. ರಾಧಾಕೃಷ್ಣ ಭಾಗವಹಿಸಿದ್ದರು.
ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ಡಿಸಿಎಫ್ ರಮೇಶ್ಬಾಬು, ನಂದೀಶ್ ಸ್ಥಳಕ್ಕೆ ಬಂದು ಬೆಳೆಗಾರರ ಮನವಿ ಸ್ವೀಕರಿಸಿದರು.
ಸಮಸ್ಯೆ ಬಗೆಹರಿಸಲು ಪ್ರಯತ್ನ
ಬೇರೆ ಬೇರೆ ಉದ್ದೇಶಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದಿರುವಾಗ ರೈತರು, ಬೆಳೆಗಾರರಿಗಾಗಿ ಅರಣ್ಯ ಕಾಯ್ದೆ ತಿದ್ದುಪಡಿ ತರಬಾರದು ಎಂದು ಕೇಳಿದ್ದೇವೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
‘ಒಂದೇ ಜಾಗಕ್ಕೆ ಪರಿಭಾವಿತ ಅರಣ್ಯ, ಸೆಕ್ಷನ್–4, ಜಿಲ್ಲಾಧಿಕಾರಿ ಕಾಯ್ದಿರಿಸಿದ ಅರಣ್ಯ ಎಂದು ಅಧಿಸೂಚನೆ ಹೊರಡಿಸಲಾಗಿದೆ. ಹಿಂದಿನ ಜಿಲ್ಲಾಧಿಕಾರಿಯೊಬ್ಬರು ರಾತ್ರೋರಾತ್ರಿ ಕಡತಗಳಿಗೆ ಸಹಿ ಹಾಕಿ ಅರಣ್ಯ ಎಂದು ಬರೆದುಕೊಟ್ಟರು. ಇದರಿಂದ ಮಲೆನಾಡಿನ ರೈತರು ತೊಂದರೆಗೆ ಸಿಲುಕಿದ್ದೇವೆ’ ಎಂದರು.
ಅರಣ್ಯ ಸಚಿವರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಬೆಳೆಗಾರರ ಯಾವುದೇ ಒತ್ತುವರಿ ತೆರವು ಮಾಡದಂತೆ ಸೂಚಿಸಲಾಗಿದೆ. ಸಮಸ್ಯೆ ಬಗೆಹರಿಸಲು ಇರುವ ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ ಎಂದು ತಿಳಿಸಿದರು.
ಅರಣ್ಯ ಸಚಿವರು ಇತ್ತೀಚೆಗೆ ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ್ದು, ಅಲ್ಲಿ ಕೆಲವು ಭರವಸೆ ಸಿಕ್ಕಿವೆ. ಈ ಕಾರಣದಿಂದ ಬೆಳೆಗಾರರು ಭಯಪಡುವ ಅಗತ್ಯವಿಲ್ಲ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
‘ಪರಿಭಾವಿತ ಅರಣ್ಯ ಮರು ಸರ್ವೆ ಯಾಗಲಿದೆ. ನಿಮ್ಮ ಜಮೀನು ಯಾವ ವಿಭಾಗದಲ್ಲಿ ಬರಲಿದೆ ಎಂಬುದನ್ನು ಬೆಳೆಗಾರರು ಪರಿಶೀಲಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಪ್ಲಾಂಟೇಷನ್ ಜಾಗಗಳನ್ನು ನಮೂನೆ 57ರ ಅಡಿ ಬಗರ್ ಹುಕುಂ ಸಾಗುವಳಿ ಎಂದು ಪರಿಗಣಿಸಲು ಅವಕಾಶ ಇಲ್ಲ. ಆದ್ದರಿಂದ ಗುತ್ತಿಗೆ ಆಧಾರದಲ್ಲಿ ಜಮೀನು ಕೊಡಿಸುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಬೆಳೆಗಾರರು ಈ ಯೋಜನೆ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪರಿಭಾವಿತ ಅರಣ್ಯ ಎಂಬ ಪರಿಕಲ್ಪನೆ ಒಪ್ಪುವಂಥದ್ದಲ್ಲ. ಇದನ್ನು ಅರಣ್ಯ ಎಂದು ಪರಿಗಣಿಸುವಂತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಪರಿಭಾವಿತ ಅರಣ್ಯ ಮರು ಪರಿಶೀಲನೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಎಫ್ಎಸ್ಒ ವರದಿ ಅಂತಿಮವಾಗಬೇಕು. ಅದಕ್ಕೆ ಡಿಸಿಎಫ್ಗಳು ಸಹಿ ಹಾಕಬೇಕು ಎಂಬ ನಿಯಮ ರದ್ದುಪಡಿಸಬೇಕು ಎಂದರು.
Farmers in the district demand a solution to the forest problem
Leave a comment