ಚಿಕ್ಕಮಗಳೂರು: ತಾಲ್ಲೂಕು ಅಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ತಾಲ್ಲೂಕು ಸಮಿತಿಯ ಸಭೆಯಲ್ಲಿ ಹಾಜರಿದ್ದ ಪದಾಧಿಕಾರಿಗಳ ನಿರ್ಣಯದಂತೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಡಿ.ರಾಮೇಗೌಡ ಕಲ್ಲಹಳ್ಳಿ ಅವರ ಆಯ್ಕೆ ಕ್ರಮಬದ್ಧವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಕೆ.ಕೆ.ಕೃಷ್ಣಗೌಡ ಹೇಳಿದರು.
ಚಿಕ್ಕಮಗಳೂರು ತಾಲ್ಲೂಕು ಸಮಿತಿಯಲ್ಲಿ ನಿಷ್ಕ್ರಿಯರಾಗಿರುವ ಒಂದಿಬ್ಬರು ಪದಾಧಿಕಾರಿಗಳನ್ನು ಕೈ ಬಿಟ್ಟು ಸಂಘದ ಬಲವರ್ಧನೆಗಾಗಿ ಸದ್ಯದಲ್ಲೇ ಸಮಿತಿಯನ್ನು ಪುನರ್ ರಚಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಾಲಿ ಜಿಲ್ಲಾ ಘಟಕದ ಅಧ್ಯಕ್ಷರ ಹುದ್ದೆ ಕ್ರಮಬದ್ಧ ಅಲ್ಲ. ಕೆಲವು ತಾಲ್ಲೂಕುಗಳಲ್ಲಿ ಸಮಿತಿಯೇ ಇಲ್ಲ. ಜಿಲ್ಲಾ ಘಟಕದ ಅಧ್ಯಕ್ಷರಿಗೆ ಸಂಘದ ಬಲವರ್ಧನೆಯ ಬಗ್ಗೆ ಆಸಕ್ತಿ ಇಲ್ಲ. ಕೆಲವು ಮಾಲೀಕತ್ವದ ಮನೋಭಾವನೆಯ ಹಿರಿಯ ನಾಯಕರು ಹಾಗೂ ನೆನ್ನೆ ಮೊನ್ನೆ ಬಂದ ಕೆಲವು ಕಾರ್ಯಕರ್ತರಿಂದ ಸಂಘದ ಸಿದ್ದಾಂತವನ್ನು ಉಲ್ಲಂಘಿಸಿ ರಚನೆ ಮಾಡಿಕೊಂಡ ಜಿಲ್ಲಾ ಘಟಕದ ಅಧ್ಯಕ್ಷರ ನಿಯಮಬಾಹಿರ ಗುಂಪು ಎಂದು ಸಾಬೀತುಪಡಿಸುತ್ತೇವೆ. ಈ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಹೇಳಿದರು.
ಜಾತ್ಯತೀತ ಸೈದ್ಧಾಂತಿಕ, ಸಂಘದ ಸಿದ್ಧಾಂತ, ರಾಜ್ಯ ಘಟಕದ ಅಧ್ಯಕ್ಷರ ಆದೇಶ ಎಂಬ ಶಬ್ದ ಬಳಸಿ ಮಾಧ್ಯಮಗಳ ಮೂಲಕ ಸಾರ್ವಜನಿಕರನ್ನು ನಂಬಿಸುವುದು, ತೋರಿಕೆ ಹೋರಾಟ ನಡೆಸುವುದು ಮತ್ತು ಸಂಘದ ಪ್ರಾಮಾಣಿಕ ಪದಾಧಿಕಾರಿಗಳನ್ನು ಪ್ರತಿಸ್ಪರ್ಧಿ ಎಂದು ಭಾವಿಸಿ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ತೇಜೋವಧೆ ಮಾಡುವುದು, ಕಾರಣ ಕೇಳದೆ ತಾಲ್ಲೂಕು ಅಧ್ಯಕ್ಷರನ್ನು ಮತ್ತು ಸಮಿತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ಕೊಡುವ ಮೂಲಕ ವಜಾಗೊಳಿಸುವುದು ಸಂಘದ ಸಿದ್ಧಾಂತವೇ ಎಂದು ಪ್ರಶ್ನಿಸಿದರು.
ಚಳವಳಿಗಳನ್ನು ರೂಪಿಸುವುದಾಗಿ ಹೇಳಿಕೆ ನೀಡಿ ದಿನಾಂಕ ನಿಗದಿ ಮಾಡಿ ನಂತರ ಚಳವಳಿಯಿಂದ ಹಿಂದೆ ಸರಿಯಲು ಕಾರಣವೇನು. ಆ ಬಗ್ಗೆ ಚರ್ಚಿಸಲು ಜಿಲ್ಲಾಧ್ಯಕ್ಷರ ಗುಂಪು ಬಹಿರಂಗವಾಗಿ ಆಹ್ವಾನಿಸಲಿ ಎಂದು ಹೇಳಿದರು. ಈಗಾಗಲೇ ಜಿಲ್ಲೆಯ ಕೆಲವು ತಾಲ್ಲೂಕುಗಳ ಪ್ರಾಮಾಣಿಕ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರ ಗುಂಪಿನ ವರ್ತನೆಗೆ ಬೇಸತ್ತು ಸಂಘದಿಂದ ದೂರ ಸರಿಯುತ್ತಿದ್ದಾರೆ. ಜಿಲ್ಲಾಧ್ಯಕ್ಷರು ಕಷ್ಟದಿಂದ ಬಳಲಿ ಬಂದ ರೈತರನ್ನೇ ಅನಿವಾರ್ಯವಾಗಿ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಉಪಾಧ್ಯಕ್ಷ ಪರ್ವತೇಗೌಡ, ಚಂದ್ರಶೇಖರ್, ಮುಳ್ಳುಂಡಪ್ಪ, ಕಾಂತರಾಜ್, ಲೋಕೇಶ್, ರಾಮೇಗೌಡ ಭಾಗವಹಿಸಿದ್ದರು.
Farmers’ Association’s D. Ramegowda Kallahalli election formalized
Leave a comment