ಚಿಕ್ಕಮಗಳೂರು: ಮುಂಗಾರು ಬಿರುಗಾಳಿ ಮಳೆಗೆ ಸಂಭವನೀಯ ಅಪಾಯ, ಹಾನಿ ತಡೆಗಟ್ಟುವುದು ಹಾಗೂ ತುರ್ತು ಕ್ರಮ ವಹಿಸುವ ಸಲುವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖೆಗಳ ನಡುವೆ ಸಮನ್ವಯತೆ ಕಾಪಾಡಿಕೊಂಡು ರ್‍ಯಾಪಿಡ್ ರೆಸ್ಪಾನ್ಸ್ ತಂಡ ಮಾಡಿಕೊಳ್ಳಬೇಕು. ಆ ಮೂಲಕ ಅಗತ್ಯ ಇರುವ ಕಡೆ ಮುಂಜಾಗೃತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಈ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಮಳೆಗಾಲದಲ್ಲಿ ಮತ್ತು ಪ್ರವಾಹ ಸಂಭಾವ್ಯ ಸಮಯದಲ್ಲಿ ಅಗತ್ಯ ತುರ್ತು ವ್ಯವಸ್ಥೆಗಳನ್ನು ಸಾರ್ವಜನಿಕರಿಗೆ ಒದಗಿಸಲು ಕೇಂದ್ರ ಸ್ಥಾನದಲ್ಲಿ ಲಭ್ಯರಿರಬೇಕು ಎಂದು ಆದೇಶಿಸಿದ್ದಾರೆ.
ಮೆಸ್ಕಾಂ ಇಲಾಖೆ ವತಿಯಿಂದ ಬೀಳುವ ಸ್ಥಿತಿಯಲ್ಲಿರುವ, ಶಿಥಿಲವಾಗಿರುವ, ದುಸ್ಥಿತಿಯಲ್ಲಿರುವ ವಿದ್ಯುತ್ ಕಂಬ ತಂತಿಗಳನ್ನು ತೆರವುಗೊಳಿಸುವುದು. ತುರ್ತು ಸಂದರ್ಭಗಳಲ್ಲಿ ಹಾನಿಯುಂಟಾದ ಸಂದರ್ಭಗಳಲ್ಲಿ ಕಂಬಗಳನ್ನು, ವಿದ್ಯುತ್ ಲೈನ್‌ಗಳನ್ನು ಸ್ಥಳಾಂತರಿಸುವ ಕಾರ್ಯ ನಿರ್ವಹಿಸಬೇಕು. ಅರಣ್ಯ ಇಲಾಖೆ ವತಿಯಿಂದ ನಗರ ವ್ಯಾಪ್ತಿಯಲ್ಲಿ ಬೀಳುವ ಸ್ಥಿತಿಯಲ್ಲಿರುವ ಮರ, ರಂಬೆಕೊಂಬೆಗಳನ್ನು ತೆರವು ಮಾಡಬೇಕು ಎಂದಿದ್ದಾರೆ.
ಮಳೆಹಾನಿ ತಡೆಗಟ್ಟುವ ತಂಡಕ್ಕೆ ಅಗತ್ಯ ಸುರಕ್ಷಾ ಪರಿಕರ, ಸಲಕರಣೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ನೀಡಬೇಕು. ನಗರ ವ್ಯಾಪ್ತಿಯಲ್ಲಿ ತಗ್ಗು ಮತ್ತು ಇಳಿಜಾರು ಪ್ರದೇಶಗಳನ್ನು ಗುರುತಿಸಿ ಅಂಥ ಪ್ರದೇಶಗಳಲ್ಲಿ ಮಳೆನೀರು ಶೇಖರಣೆಯಿಂದ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕು. ಶಿಥಿಲಾವಸ್ಥೆಯಲ್ಲಿರುವ ಹಳೆಯ ಸಾರ್ವಜನಿಕ ಕಟ್ಟಡಗಳನ್ನು, ಶಾಲಾ ಕಟ್ಟಡಗಳು ಹಾಗೂ ಇತರೆ ಅಪಾಯ ಸಂಭಾವ್ಯ ಕಟ್ಟಡಗಳನ್ನು ಗುರುತಿಸಿ ಸಾರ್ವಜನಿಕರ ಬಳಕೆಗೆ ನಿಷೇಧಿಸಬೇಕು. ಶಿಥಿಲಗೊಂಡಿರುವ ಮನೆ, ಗುಡಿಸಲುಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮ ವಹಿಸಬೇಕು. ಸ್ಥಳಾಂತರಿಸುವ ಅನಿವಾರ್ಯ ಸಂದರ್ಭಗಳಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಹೇಳಿದ್ದಾರೆ.
ಪ್ರವಾಹ ಸ್ಥಳಗಳನ್ನು ಗುರುತಿಸಿ ಅಗತ್ಯವಿರುವ ಯಂತ್ರೋಪಕರಣ, ವಾಹನಗಳನ್ನು ಕಾಯ್ದಿರಿಸಿಕೊಳ್ಳುವುದು ಮತ್ತು ಪ್ರವಾಹ ನೀರನ್ನು ಸುರಕ್ಷಿತ ದಿಕ್ಕಿನಲ್ಲಿ ಹರಿಯಲು ಅನುವಾಗುವಂತೆ ಕ್ರಮ ವಹಿಸಬೇಕು. ಪ್ರವಾಹದಿಂದ ಉಂಟಾಗಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಸಮನ್ವಯಿಸಿ ಮುಂಜಾಗ್ರತಾ ಕ್ರಮ ವಹಿಸಬೇಕು. ಕೊಳಚೆ ಪ್ರದೇಶಗಳನ್ನು ಗುರುತಿಸಿ, ಪ್ರವಾಹದಿಂದ ಕುಡಿಯುವ ನೀರಿನ ಕೊರತೆ ಉಂಟಾದಲ್ಲಿ ಬದಲಿ ವ್ಯವಸ್ಥೆ ಮಾಡಬೇಕು. ತಗ್ಗು ಪ್ರದೇಶದ ಜನನಿಬಿಡ ಪ್ರದೇಶಗಳಿಗೆ ಪ್ರವಾಹ ಮುನ್ಸೂಚನೆಯ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಹಾಗೂ ಮಾಹಿತಿ ನೀಡಲು ತಿಳಿಸಿದ್ದಾರೆ.
ಪ್ರಥಮವಾಗಿ ಇಲಾಖಾಧಿಕಾರಿಗಳು ಸ್ಥಳೀಯ ತಹಸೀಲ್ದಾರರ ಸಂಪರ್ಕದಲ್ಲಿದ್ದು, ಪರಿಸ್ಥಿತಿ ನಿಭಾವಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಹಸೀಲ್ದಾರರ ಗಮನಕ್ಕೆ ತಂದು ಪರಸ್ಪರ ಸಮಾಲೋಚಿಸಿ ಸೂಕ್ತ ಸಲಹೆ ಸಹಕಾರವನ್ನು ತಾಲ್ಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನೀಡುವುದು. ನಗರ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಮೂಲಗಳು ಮತ್ತು ನೀರು ಸರಬರಾಜಿನ ವ್ಯವಸ್ಥೆಗಳು, ಘಟಕಗಳನ್ನು ತಾಂತ್ರಿಕವಾಗಿ ಪರಿಶೀಲನೆ ನಡೆಸಿ ಉದ್ಭವಿಸಬಹುದಾದ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳು ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಮಳೆಗಾಲದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಲು ನಗರ ಪ್ರದೇಶಗಳಲ್ಲಿ ನಿಯಮಿತವಾಗಿ ಫಾಗಿಂಗ್ ಮಾಡ ಬೇಕು. ಈ ಎಲ್ಲ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ ನಗರ ವ್ಯಾಪ್ತಿಯಲ್ಲಿ ಪ್ರಾಣ ಹಾನಿ ಅಥವಾ ಆಸ್ತಿಗಳಿಗೆ ಹಾನಿಯಾಗದಂತೆ ಜಿಲ್ಲಾಡಳಿತದ ಸಮನ್ವಯದೊಂದಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ವಿವಿಧ ಇಲಾಖೆಯ ಕಚೇರಿಯ ಅಧಿಕಾರಿ, ನೌಕರರನ್ನೊಳಗೊಂಡಂತೆ ತಂಡಗಳನ್ನು ರಚಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ೧ ರಿಂದ ೭ನೇ ವಾರ್ಡ್‌ನವರು ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರು ಮಂಜುನಾಥ್ ೯೪೪೮೨೮೯೪೫೭ ಹಾಗೂ ಡಿಆರ್‌ಎಫ್‌ಒ ಭಜಂತ್ರಿ (೯೦೬೦೦೯೨೨೭೩) ಹಾಗೂ ೮ ರಿಂದ ೧೪ನೇ ವಾರ್ಡ್‌ನವರು ಮೆಸ್ಕಾಂ ಸಹಾಯಕ ಅಭಿಯಂತರರು ಪ್ರಶಾಂತ್ (೯೪೪೮೨೮೯೪೮೨) ಮತ್ತು ಬೀಟ್ ಫಾರೆಸ್ಟರ್ ಪ್ರದೀಪ್ (೯೪೮೦೪೭೭೪೪೨), ೧೫ ರಿಂದ ೨೧ನೇ ವಾರ್ಡ್‌ನವರು ಸಹಾಯಕ ಅಭಿಯಂತರ ವಿಜಯ್ ಕುಮಾರ್ (೯೪೪೮೨೮೯೪೮೩) ಹಾಗೂ ಎನ್.ಪಿ. ಬೀಟ್ ಫಾರೆಸ್ಟರ್ ಮಂಜುನಾಥ (೯೫೩೫೬೭೦೧೩೦), ೨೨ ರಿಂದ ೨೮ನೇ ವಾರ್ಡ್‌ನವರು ಎನ್‌ವಿ., ಎಫ್‌ಒ ತನುಜಾಕುಮಾರ್ (೯೪೮೦೧೫೦೩೩೧) ಮತ್ತು ಮೆಸ್ಕಾಂ ಸಹಾಯಕ ಅಭಿಯಂತರ ಶಾಂತಪ್ಪ (೯೪೪೮೨೮೯೪೮೪), ೨೯ ರಿಂದ ೩೫ನೇ ವಾರ್ಡ್‌ನವರು ಮೆಸ್ಕಾಂ ಸಹಾಯಕ ಅಭಿಯಂತರ ಶಾಂತಪ್ಪ (೯೪೪೮೨೮೯೪೮೪) ಹಾಗೂ ಬೀಟ್ ಫಾರೆಸ್ಟರ್ ಲೋಕೇಶ್ (೯೫೩೫೩೧೮೫೩೦) ಅವರಿಗೆ ಕರೆ ಮಾಡಿ ತಿಳಿಸಿ ವಿಪತ್ತು ನಿರ್ವಹಣೆ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advice to be vigilant to prevent monsoon damage
Leave a comment