ಚಿಕ್ಕಮಗಳೂರು: ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಕಂಡ ಸಮ ಸಮಾಜದ ಕನಸಿಗೆ, ೨೦ನೇ ಶತಮಾನದಲ್ಲಿ ಸಂವಿಧಾನ ರಚಿಸುವ ಮೂಲಕ ಅಧಿಕೃತ ಮುದ್ರೆ ಒತ್ತಿದವರು ಡಾ.ಬಿ.ಆರ್. ಅಂಬೇಡ್ಕರ್ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಬಣ್ಣಿಸಿದರು.
ನಗರದ ಕುವೆಂಪು ಕಲಾ ಮಂದಿರದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‌ರವರ ೧೩೫ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ.ಅಂಬೇಡ್ಕರ್ ಅವರು ನಮ್ಮನ್ನು ಅಗಲಿ ೭೦ ವರ್ಷಗಳಾಗಿದ್ದರೂ, ಅವರ ವಿಚಾರಧಾರೆಗಳು ಮತ್ತು ಬಸವಣ್ಣನವರ ತತ್ವಗಳು ಈ ಜಗತ್ತು ಇರುವವರೆಗೂ ಜೀವಂತವಾಗಿರುತ್ತವೆ. ಅಂದಿನ ಕಾಲದಲ್ಲಿ ಶೋಷಿತ ವರ್ಗದಲ್ಲಿ ಹುಟ್ಟಿದವರು ತಮ್ಮ ಹಣೆಬರಹವನ್ನು ದೂರುತ್ತಿದ್ದರು. ಆದರೆ, ಅಂಬೇಡ್ಕರ್ ಅವರು ‘ನನ್ನ ಹಣೆಬರಹವನ್ನು ವಿಧಿ ಬರೆಯುವುದಿಲ್ಲ, ನಾನೇ ಬರೆದು ಉನ್ನತ ಸ್ಥಾನಕ್ಕೇರುತ್ತೇನೆ’ಎಂದು ಛಲದಿಂದ ಹೋರಾಡಿ ಗೆದ್ದವರು. ಅಂಬೇಡ್ಕರ್ ಅವರ ಈ ಛಲ ಮತ್ತು ಹೋರಾಟದ ಹಾದಿ ಇಂದಿನ ಯುವ ಪೀಳಿಗೆಗೆ ತಲುಪಬೇಕು ಎಂಬ ಉದ್ದೇಶದಿಂದ ಸರ್ಕಾರ ಇಂತಹ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸುತ್ತಿವೆ ಎಂದರು.
ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಭಾರತವು ಎಲ್ಲಾ ಧರ್ಮಗಳನ್ನು ಒಳಗೊಂಡ ವಿಶ್ವದ ಏಕೈಕ ಜಾತ್ಯತೀತ ರಾಷ್ಟ್ರವಾಗಿದೆ. ಅಂಬೇಡ್ಕರ್ ಅವರ ಸಂವಿಧಾನವು ಈ ರಾಷ್ಟ್ರದ ಅಡಿಪಾಯವನ್ನು ಗಟ್ಟಿಗೊಳಿಸಿದೆ ಎಂದು ತಿಳಿಸಿದ ಅವರು, ಒಂದು ಕಾಲದಲ್ಲಿ ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದವರು ಇಂದು ಅಂಬೇಡ್ಕರ್ ಅವರ ಹೆಸರೇಳದೆ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡದಿದ್ದರೆ ಇಂದು ನಾವ್ಯಾರೂ ಈ ಸ್ಥಾನಗಳಲ್ಲಿ ಕೂರಲು ಸಾಧ್ಯವಾಗುತ್ತಿರಲಿಲ್ಲ. ಶೋಷಿತ ವರ್ಗದಿಂದ ಬಂದ ನಾವೆಲ್ಲರೂ ಇಂದು ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಲು ಬಾಬಾಸಾಹೇಬರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ ಎಂದು ಸ್ಮರಿಸಿದರು.
ಹಿಂದೆ ಮತದಾನದ ಹಕ್ಕು ಕೇವಲ ವಿದ್ಯಾವಂತರಿಗೆ ಮತ್ತು ಜಮೀನ್ದಾರರಿಗೆ ಮಾತ್ರ ಸೀಮಿತವಾಗಿರಬೇಕು ಎಂಬ ವಾದವಿತ್ತು. ಆದರೆ, ಕರಡು ಸಮಿತಿ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು ಎಲ್ಲರ ವಿರೋಧದ ನಡುವೆಯೂ ಶ್ರೀಮಂತ-ಬಡವ, ಸುಶಿಕ್ಷಿತ-ಅಶಿಕ್ಷಿತ, ಪುರುಷ-ಮಹಿಳೆ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ಮತದಾನದ ಹಕ್ಕನ್ನು ನೀಡಿದರು. ಸಂವಿಧಾನದಲ್ಲಿ ಸರ್ವಧರ್ಮ ಸಮಾನತೆ, ಅಲ್ಪಸಂಖ್ಯಾತರ ಹಕ್ಕುಗಳು, ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಇಂದಿನ ಯುವ ಪೀಳಿಗೆ ಅಂಬೇಡ್ಕರ್ ಅವರ ಸಂವಿಧಾನದ ಪ್ರಸ್ತಾವನೆ ಹಾಗೂ ಬಸವಣ್ಣನವರ ವಚನಗಳನ್ನು ಓದಿಕೊಂಡರೆ ಮಾತ್ರ ಸುಸಂಸ್ಕೃತ ಪ್ರಜೆಗಳಾಗಲು ಸಾಧ್ಯ ಎಂಬ ಉದ್ದೇಶದಿಂದ ಸರ್ಕಾರವು ಇಂದು ಎಲ್ಲಾ ಶಾಲೆ ಮತ್ತು ಕಚೇರಿಗಳಲ್ಲಿ ಸಂವಿಧಾನ ಪೀಠಿಕೆಯನ್ನು ಪ್ರದರ್ಶಿಸುವ ಕೆಲಸ ಮಾಡಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾಭ್ಯಾಸ ಮತ್ತು ಜ್ಞಾನವಿಲ್ಲದೆ ಸ್ವಾತಂತ್ರ್ಯವಿಲ್ಲ, ಸ್ವಾತಂತ್ರ್ಯವಿಲ್ಲದೆ ದೇಶದ ಪ್ರಗತಿ ಸಾಧ್ಯವಿಲ್ಲ ಎಂಬ ಅಂಬೇಡ್ಕರ್ ಅವರ ಮಾತುಗಳು ಇಂದಿಗೂ ಸಾರ್ವಕಾಲಿಕ ಸತ್ಯವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಮಾತನಾಡಿ, ನಾವು ಯಾರೂ ಕೀಳರಿಮೆಯಿಂದ ಬಳಲಬೇಕಾಗಿಲ್ಲ. ನಾವೆಲ್ಲರೂ ಒಂದೇ ಎನ್ನುವ ಆತ್ಮವಿಶ್ವಾಸ ನಮ್ಮಲ್ಲಿ ಬೆಳೆಯಬೇಕು. ಈ ಆತ್ಮವಿಶ್ವಾಸವನ್ನು ನಮಗೆ ಶಿಕ್ಷಣ ಮಾತ್ರ ನೀಡಲು ಸಾಧ್ಯ ಹೇಳಿದರು.
ಅಂಬೇಡ್ಕರ್ ಅವರ ಪ್ರಸಿದ್ಧ ನುಡಿಯಾದ “ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವನು ಗರ್ಜಿಸಲೇಬೇಕು” ಎಂಬುದನ್ನು ಉಲ್ಲೇಖಿಸಿದ ಅವರು, ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಾಗುವುದಿಲ್ಲ. ಮಳೆ ಬಿದ್ದಾಗ ಬೀಜ ಹೇಗೆ ಮೊಳಕೆಯೊಡೆಯುತ್ತದೆಯೋ, ಹಾಗೆಯೇ ಶಿಕ್ಷಣದ ಮೂಲಕ ನಾವು ಸ್ವಾಲಂಬನೆ ಪಡೆಯಬಹುದು ಎಂದು ತಿಳಿಸಿದರು.
ಬಾಬಾ ಸಾಹೇಬರು ಮಹಿಳೆಯರಿಗಾಗಿ ನಡೆಸಿದ ಹೋರಾಟ ಸ್ಮರಿಸಿದ ಸಿ.ಟಿ. ರವಿ ಅವರು, ಸಂವಿಧಾನ ರಚನೆಯ ಸಂದರ್ಭದಲ್ಲಿ ಮಹಿಳೆಯರಿಗೆ ಹಕ್ಕುಗಳನ್ನು ನೀಡಬೇಕೆಂದು ಅವರು ಪ್ರತಿಪಾದಿಸಿದ್ದರು. ಅಂದು ಅದು ಸಾಧ್ಯವಾಗದಿದ್ದಾಗ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಇಂದು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.೩೩ ರಷ್ಟು ಮೀಸಲಾತಿ ಕಲ್ಪಿಸುವ ಐತಿಹಾಸಿಕ ಅಧಿವೇಶನಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಈ ಮೂಲಕ ಅವರ ಕನಸು ನನಸಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ನಾಗರಾಜ್ ಮಾತನಾಡಿ, ಅಂಬೇಡ್ಕರ್ ಅವರು ಅತ್ಯಂತ ಕಷ್ಟಕರವಾದ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಶಿಕ್ಷಣ ಪಡೆದವರು. ಶಾಲಾ ದಿನಗಳಲ್ಲಿ ಅವರು ಅನುಭವಿಸಿದ ತಾರತಮ್ಯ ಮತ್ತು ಕಷ್ಟಗಳು ಇಂದು ನಮಗೆ ಕಲ್ಪಿಸಿಕೊಳ್ಳಲೂ ಅಸಾಧ್ಯ. ಆದರೂ ಅವರು ಎಂದೂ ಶಿಕ್ಷಣದಿಂದ ವಿಮುಖರಾಗಲಿಲ್ಲ. ಅಂದಿನ ಅಡೆತಡೆಗಳಿಗೂ ಇಂದಿನ ಸೌಲಭ್ಯಗಳಿಗೂ ಹೋಲಿಕೆ ಮಾಡಿದರೆ, ಇಂದಿನ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಛಲವನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರು ಕೇವಲ ಸಂವಿಧಾನ ಶಿಲ್ಪಿ ಮಾತ್ರವಲ್ಲ, ಅವರು ಅಪ್ರತಿಮ ಮೇಧಾವಿ ಮತ್ತು ಹೋರಾಟಗಾರ. ದೇಶಕ್ಕಾಗಿ ಕರ್ತವ್ಯ ನಿರ್ವಹಿಸುವಾಗ ಎದುರಾಗುವ ಸವಾಲುಗಳಿಗೆ ಹೆದರದೆ ಮುನ್ನುಗ್ಗುವುದನ್ನು ಅವರ ಜೀವನದಿಂದ ಕಲಿಯಬೇಕು. ಸಂಶೋಧನೆ ಅಥವಾ ಪಿಎಚ್.ಡಿ ಎಂದರೆ ಕೇವಲ ಪದವಿ ಪಡೆಯುವುದಲ್ಲ, ಬದಲಾಗಿ ಒಂದು ವಿಷಯದ ಬಗ್ಗೆ ಅತ್ಯಂತ ಆಳವಾದ ಅಧ್ಯಯನ ನಡೆಸಿ ಹೊಸ ನೋಟಗಳನ್ನು ಸಮಾಜಕ್ಕೆ ನೀಡುವುದು. ಅಂಬೇಡ್ಕರ್ ಅವರು ಅಂತಹ ಆಳವಾದ ಅಧ್ಯಯನದಿಂದಲೇ ಸಂವಿಧಾನದಂತಹ ಮಹಾನ್ ಗ್ರಂಥ ನೀಡಲು ಸಾಧ್ಯವಾಯಿತು.
ಅಂಬೇಡ್ಕರ್ ಅವರು ದೇಶದ ಆರ್ಥಿಕತೆ, ನೀರಾವರಿ ಮತ್ತು ಪತ್ರಿಕೋದ್ಯಮ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಅವರು ಜನಸಾಮಾನ್ಯರ ಧ್ವನಿಯಾಗಲು ಪತ್ರಿಕೆಗಳನ್ನು ನಡೆಸಿದರು. ದೇಶದ ನೀರಾವರಿ ಯೋಜನೆಗಳ ಬಗ್ಗೆ ಅವರಿಗಿದ್ದ ದೃಷ್ಟಿಕೋನ ಇಂದಿಗೂ ಪ್ರಸ್ತುತವಾಗಿದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಅವರ ಬರಹಗಳು ಮತ್ತು ಸಂವಿಧಾನ ಸಭೆಯ ಚರ್ಚೆಗಳನ್ನು ಓದುವ ಮೂಲಕ ಅವರ ಜ್ಞಾನದ ಲಾಭ ಪಡೆಯಬೇಕು. ಅಂಬೇಡ್ಕರ್ ಅವರ ಜೀವನ ನಮಗೆಲ್ಲರಿಗೂ ಪ್ರೇರಣೆಯಾಗಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಉಪನ್ಯಾಸ ನೀಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ಆಶಯಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಏಷ್ಯಾದಲ್ಲೇ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ವ್ಯಕ್ತಿ. ಅವರ ’ಪ್ರಾಬ್ಲಮ್ ಆಫ್ ರೂಪೀ’ ಪುಸ್ತಕವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಗೆ ಅಡಿಪಾಯವಾಯಿತು. ಇಂತಹ ಮಹಾನ್ ವ್ಯಕ್ತಿಯನ್ನು ಅನುಸರಿಸುವ ನಾವು ಕೇವಲ ಉದ್ಯೋಗಾಕಾಂಕ್ಷಿಗಳಾಗದೆ, ಯಶಸ್ವಿ ಉದ್ಯಮಿಗಳಾಗಿ ಬೆಳೆಯಬೇಕು ಎಂದು ಹೇಳಿದರು.
ಸಂವಿಧಾನದಲ್ಲಿ ಅಂಬೇಡ್ಕರ್ ಅವರು ನೀಡಿರುವ ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಪರಿಕಲ್ಪನೆಯನ್ನು ಜಾರಿಗೆ ತರಲು ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧವಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ದಲಿತ ಮುಖಂಡರಾದ ಕೆ.ಟಿ.ರಾಧಾಕೃಷ್ಣ, ರಾಮಚಂದ್ರ, ಮರ್ಲೆ ಅಣ್ಣಯ್ಯ, ಲಕ್ಷ್ಮಣ್, ದಂಟರಮಕ್ಕಿ ಶ್ರೀನಿವಾಸ್, ಅನಿಲ್‌ಕುಮಾರ್, ಹೊನ್ನೇಶ್, ಸಂತೋಷ್, ಬಾಲಕೃಷ್ಣ ಬಿಳೇಕಲ್ಲಳ್ಳಿ, ರಮೇಶ್, ಜವರಯ್ಯ, ಭೀಮಯ್ಯ, ಜಗದೀಶ್ ಕೋಟೆ, ಕೆ.ಪಿ.ವೆಂಕಟೇಶ್, ಪಿ.ರಾಜೇಶ್, ವಸಂತಕುಮಾರ್, ಮೋಹನ್ ಕುಮಾರ್, ಕುರುವಂಗಿ ಕೃಷ್ಣಮೂರ್ತಿ, ಅನಿಲ್‌ಕುಮಾರ್ ಶಂಕರಪುರ, ಮಲ್ಲೇಸ್ವಾಮಿ, ಹರೀಶ್‌ಮಿತ್ರ, ಹಾಲಪ್ಪ ಉದ್ದೇಬೋರನಹಳ್ಳಿ, ನಾಗರಾಜ್, ದಿವಾಕರ್, ಜಗದೀಶ್ ಬ್ಯಾಡರಹಳ್ಳಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತಿತರರು ಕಾರ್ಯಕ್ರಮದಲ್ಲಿದ್ದರು. ರೂಪಾ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಡಾ.ಅಂಬೇಡ್ಕರ್ ಅವರ ಪುತ್ಥಳಿಗೆ ಗಣ್ಯರಿಂದ ಮಾಲಾರ್ಪಣೆ ನಡೆಯಿತು. ಅನಂತರ ತಾಲ್ಲೂಕು ಕಚೇರಿ ಆವರಣದಿಂದ ವಿವಿಧ ಕಲಾತಂಡಗಳೊಂದಿಗೆ ಕುವೆಂಪು ಕಲಾಮಂದಿರದವರೆಗೆ ಡಾ.ಅಂಬೇಡ್ಕರ್‌ರವರ ಭಾವಚಿತ್ರದ ಮೆರವಣಿಗೆ ನಡೆಯಿತು.
Dr. Ambedkar’s ideas are a beacon for the world
Leave a comment