ಮೂಡಿಗೆರೆ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ದಂಪತಿ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಡಿದಾಳು ಗ್ರಾಮದ ಸುಧಾ ಮತ್ತು ರಘುಪತಿ ದಂಪತಿ ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೊಂಡಿರುವ ಈ ಕಾರ್ಯಕ್ಕೆ ಈಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಡಿದಾಳು ಗ್ರಾಮದ ಮುಖ್ಯ ರಸ್ತೆಯು ಸುಮಾರು ಎರಡು ಕಿಲೋಮೀಟರ್‌ವರೆಗೂ ಸಂಪೂರ್ಣವಾಗಿ ಗುಂಡಿಬಿದ್ದಿದ್ದು, ವಾಹನ ಸವಾರರು ದಿನನಿತ್ಯ ಪ್ರಾಣದ ಹಂಗು ತೊರೆದು ಸಂಚರಿಸುವಂತಾಗಿದೆ. ಹಲವು ವರ್ಷಗಳಿಂದ ಕಾಡುತ್ತಿರುವ ಈ ಸಮಸ್ಯೆಯ ಕುರಿತು ಸ್ಥಳೀಯರು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ತಮ್ಮ ಮನೆಯ ಮುಂಭಾಗದ ರಸ್ತೆಯ ಗುಂಡಿಗಳಲ್ಲಿ ಬಿದ್ದು ಸಾಕಷ್ಟು ಜನರು ಗಾಯಗೊಂಡಿರುವುದನ್ನು ಕಂಡ ರಘುಪತಿ ಅವರು, ವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡು ತಾವೇ ರಸ್ತೆ ಸರಿಪಡಿಸಲು ನಿರ್ಧರಿಸಿದ್ದಾರೆ. ಕಳೆದ ನವೆಂಬರ್ ತಿಂಗಳಿನಲ್ಲಿಯೇ ತಮ್ಮ ವೈಯಕ್ತಿಕ ಹಣದಿಂದ 28 ಲೋಡ್ ಮಣ್ಣು ತಂದು ರಸ್ತೆಯ ಗುಂಡಿಗಳನ್ನು ಮುಚ್ಚಿದ್ದ ರಘುಪತಿ ಅವರಿಗೆ ಈಗ ಮತ್ತೆ ಮಳೆ ಪ್ರಾರಂಭವಾಗಿರುವುದು ಆತಂಕ ತಂದಿದೆ.
ಮಳೆಗೆ ಮಣ್ಣು ಕೊಚ್ಚಿಹೋಗಿ ವಾಹನಗಳು ಜಾರುತ್ತಿರುವುದರಿಂದ, ಪ್ರಸ್ತುತ ಸ್ವಂತ ಖರ್ಚಿನಲ್ಲಿ ಒಂದು ಲಕ್ಷ ರೂಪಾಯಿ ವೆಚ್ಚ ಮಾಡಿ ಜಲ್ಲಿಕಲ್ಲುಗಳನ್ನು ತರಿಸಿ ರಸ್ತೆ ದುರಸ್ತಿ ಮಾಡುತ್ತಿದ್ದಾರೆ. ಈ ರಸ್ತೆಯ ದುಃಸ್ಥಿತಿಯಿಂದಾಗಿ ಶಾಲಾ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
Couple fed up with public representative’s negligence repairs road at their own expense
Leave a comment