ಚಿಕ್ಕಮಗಳೂರು: ಮೀಸಲು ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಮೇಲೆ ಕಣ್ಣಿಡಲು ಅಳವಡಿಸಲಾಗಿದ್ದ ಅತ್ಯಾಧುನಿಕ ಕ್ಯಾಮೆರಾಗಳನ್ನೇ ಖದೀಮರು ಹೊತ್ತೊಯ್ದಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಶಾಖೆಯ ಪಾದಮನೆ ಗಸ್ತು ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಹುಲಿ ಗಣತಿಯ ಅತ್ಯಂತ ಪ್ರಮುಖ ಕಾರ್ಯಾಚರಣೆಗಾಗಿ ಅರಣ್ಯ ಇಲಾಖೆಯಿಂದ ಒಟ್ಟು ನಾಲ್ಕು ಕ್ಯಾಮೆರಾ ಟ್ರ್ಯಾಪ್‌ಗಳನ್ನು ನೀಡಲಾಗಿತ್ತು. ಈ ಪೈಕಿ ಕಾಮೇನಹಳ್ಳಿ ಮೀಸಲು ಅರಣ್ಯದ ಸರ್ವೆ ನಂಬರ್ 1ರ ವಲಯದಲ್ಲಿ ಅಳವಡಿಸಲಾಗಿದ್ದ ಎರಡು ದುಬಾರಿ ಕ್ಯಾಮೆರಾಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.
ಗಸ್ತು ಅರಣ್ಯ ಪಾಲಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೀತಾ ಬಿ.ಎಸ್. ಅವರು ಕ್ಯಾಮೆರಾಗಳನ್ನು ಪರಿಶೀಲಿಸಲು ತೆರಳಿದಾಗ ಈ ಕಳ್ಳತನ ನಡೆದಿರುವುದು ಸ್ಪಷ್ಟವಾಗಿದೆ. ಕಾಣೆಯಾದ ಕ್ಯಾಮೆರಾಗಳಿಗಾಗಿ ಅರಣ್ಯ ಸಿಬ್ಬಂದಿ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಕಳವಾಗಿರುವ ಎರಡು ಕ್ಯಾಮೆರಾಗಳ ಒಟ್ಟು ಮೌಲ್ಯ ಸುಮಾರು 40,000 ರೂಪಾಯಿಗಳಾಗಿದ್ದು, ಈ ಕುರಿತು ಅರಣ್ಯ ಪಾಲಕಿ ಸಖರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮೀಸಲು ಅರಣ್ಯದೊಳಗೆ ನುಗ್ಗಿ ಇಲಾಖೆಯ ಕ್ಯಾಮೆರಾಗಳನ್ನೇ ಕದ್ದ ಕಳ್ಳರ ಪತ್ತೆಗಾಗಿ ಜಾಲ ಬೀಸಿದ್ದಾರೆ.
Camera stolen in Kamenahalli reserve forest
Leave a comment