ಚಿಕ್ಕಮಗಳೂರು : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮುಲ್ಲಾನ ಎದೆ ಸೀಳಿದರೆ ಮೂರಕ್ಷರ ಇಲ್ಲ ಎನ್ನುವ ಮೂಲಕ ಸಮಾಜದಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದು ಇವರ ನಾಲಿಗೆಯಿಂದ ಮೆದುಳಿಗೆ ನೆಟ್ವರ್ಕ್ ಕಟ್ಟಾಗಿರುವಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ರೂಬಿನ್ಮೊಸೆಸ್ ವ್ಯಂಗ್ಯವಾಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವ್ಯಕ್ತಿ ತಾವೊಬ್ಬ ಸಚಿವನಾಗಿದ್ದವನು ಎಂಬುದನ್ನು ಮರೆತು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯಾವುದೇ, ಹೋರಾಟವಿರಲಿ ಇವರಿಗೆ ಕಾಣುವುದು ಮುಸಲ್ಮಾನರು. ಯಾವೊಬ್ಬ ವ್ಯಕ್ತಿ ತಪ್ಪು ಮಾಡಿದ್ದರೆ ವೈಯಕ್ತಿಕವಾಗಿ ಅವರ ಬಗ್ಗೆ ಮಾತಾಡಲಿ ಅದನ್ನು ಬಿಟ್ಟು ಅವರ ಧರ್ಮವನ್ನೇ ಟಾರ್ಗೆಟ್ ಮಾಡುವುದು ಹಿಂದಿನಿಂದಲೂ ಇವರ ರಾಜಕೀಯ ಷಡ್ಯಂತರವಾಗಿದೆ. ಇಂತಹ ಕಟುವಾದ ಮಾತನ್ನು ಕೇಳಿಯೂ ಕೆಲ ಮುಸಲ್ಮಾನ ಸ್ನೇಹಿತರು ಬಿಜೆಪಿಯಲ್ಲಿದ್ದಾರೆ. ಅವರಿಗೆ ಧರ್ಮದ ಬಗ್ಗೆ ಗೌರವವಿದ್ದರೆ ಬಿಜೆಪಿಯಿಂದ ಹೊರಬರಲಿ ಎಂದರು.
ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ಬುಲ್ ಕಲಾಂ ಕೂಡ ಮುಲ್ಲಾನೆ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಬಿಟ್ಟ ಶಹೀದ್ ಅಶ್ವಕ್ ಉಲ್ಲಾಖಾನ್ ಒಬ್ಬಮುಲ್ಲಾ ಅನ್ನೋದು ಸಿ.ಟಿ.ರವಿಗೆ ಗೊತ್ತಿಲ್ಲ. ಮುಲ್ಲಾ ಎಂದರೆ ದೇವರು ಮತ್ತು ಭಕ್ತರ ನಡುವೆ ಇರುವ ಅರ್ಚಕನಿದ್ದಂತೆ. ಅಂತಹ ಹುದ್ದೆಗೆ ಇವರು ಅಗೌರವ ತೋರಿದ್ದಾರೆ ಎಂದು ಹೇಳಿದ ಅವರು ಮುಲ್ಲಾ ಎಂದು ಆರೋಪಿಸಿರುವ ವ್ಯಕ್ತಿಯ ಕೃತ್ಯ ಜಂತರ್ ಮಂತರ್ ನಲ್ಲಿ ನಡೆದಿದ್ದಲ್ಲ. ಬೇರೆ ವಿಡೀಯೋದ ಅಸಲಿಯತ್ತನ್ನೂ ತಿಳಿಯದ ಡಾ.ಸಿ.ಟಿ.ರವಿ ಈ ರೀತಿ ಮಾತಾಡಿರುವುದರ ಹಿಂದೆ ಸಮಾಜದ ಸ್ವಾಸ್ಥ್ಯ ಕದಡುವ ಹುನ್ನಾರ ಇದೆ ಎಂದರು.
ಬಿಜೆಪಿಗರು ಈಗಲೂ ಪೊಲೀಸ್ ಇಲಾಖೆಯನ್ನೂ ತಮ್ಮ ಹದ್ದುಬಸ್ತಿನಲ್ಲೇ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ನಿನ್ನೆಯ ನಿದರ್ಶನವೇ ಸಾಕ್ಷಿ. ಮುಲ್ಲಾ ಹೇಳಿಕೆ ಸಂಬಂಧ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಸಿ.ಟಿ.ರವಿ ಮನೆಗೆ ನೊಟೀಸ್ ಕೊಡಲು ಹೋಗಿದ್ದರು. ಅದಕ್ಕೂ ಮುನ್ನ ಬಿಜೆಪಿ ಪಟಾಲಂ ಅಲ್ಲಿ ನೆರೆದಿತ್ತು. ಪೊಲೀಸರು ಬರುತ್ತಾರೆ ಎಂದು ಸಿ.ಟಿ.ರವಿಗೆ ಕನಸು ಬಿದಿತ್ತೆ ಎಂದು ಪ್ರಶ್ನಿಸಿದ ಅವರು ತಮ್ಮ ಮನೆಗೆ ಬರುವ ವಿಚಾರವನ್ನು ಇದೇ ಪೊಲೀಸರು ಸಿ.ಟಿ.ರವಿಗೆ ಮೊದಲೇ ತಿಳಿಸಿದ್ದಾರೆ ಎಂದು ಆರೋಪಿಸಿದರು.
ತಮ್ಮ ಪಕ್ಷ ಶಿಸ್ತಿನ ಪಕ್ಷ ಎಂದು ಬೊಗಳೆ ಬಿಡುವ ಸಿ.ಟಿ.ರವಿ ಪೊಲೀಸರು ತಮ್ಮ ಮನೆಗೆ ನೊಟೀಸ್ ಕೊಡಲು ಬಂದಾಗ ಕಾನೂನಿಗೆ ಗೌರವ ಕೊಟ್ಟು ಅದನ್ನು ಸ್ವೀಕರಿಸಬೇಕಿತ್ತು. ಅದನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರ ಮೂಲಕ ಪ್ರತಿಭಟನೆ ಮಾಡಿಸಿ ಪೊಲೀಸರನ್ನೇ ಹಿಮ್ಮೆಟ್ಟಿಸಿರುವುದು ಅವರ ಯೋಗ್ಯತೆಯನ್ನು ತೋರಿಸುತ್ತದೆ ಎಂದರು.
ಕೇಂದ್ರಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದರೆ ಸಾಲದು ನೀಟ್ ಅಕ್ರಮದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಪರಿಹಾರ ನೀಡಬೇಕು. ಪ್ರತಿಭಟನೆ ಮಾಡಿದ ಯುವಕರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ತನೋಜ್ನಾಯ್ಡು, ಪ್ರಕಾಶ್ರೈ, ಶಾಂತಕುಮಾರ್, ರಾಮಚಂದ್ರ, ರಫೀಕ್ಅಹ್ಮದ್ ಇದ್ದರು.
C.T. Ravi’s work to disrupt harmony in society
Leave a comment