ಚಿಕ್ಕಮಗಳೂರು: ಮಾನವೀಯತೆ ಮರೆತ ಪತಿಯೊಬ್ಬ ತನ್ನ ತಂದೆ ಹಾಗೂ ಸಹೋದರನೊಂದಿಗೆ ಸೇರಿ ವರದಕ್ಷಿಣೆಗಾಗಿ ತನ್ನ ಪತ್ನಿಯ ಮೇಲೆ ಮೃಗೀಯವಾಗಿ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ನಂದಿಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ತಾರ ಎಂಬ ನೊಂದ ಮಹಿಳೆ ತನ್ನ ಪತಿ ತಿಮ್ಮಪ್ಪನಿಂದ ಕ್ರೂರ ಹಿಂಸೆಗೆ ಒಳಗಾದವರು ಪತಿಯ ಅಮಾನವೀಯ ಹೊಡೆತಕ್ಕೆ ಇಡೀ ದೇಹವೇ ಕಪ್ಪು ಬಣ್ಣಕ್ಕೆ ತಿರುಗಿದೆ. ಹತ್ತು ವರ್ಷಗಳ ಹಿಂದೆ ಅಂದರೆ 2014ರಲ್ಲಿ ತಿಮ್ಮಪ್ಪ ಮತ್ತು ತಾರ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.
ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಿಮ್ಮಪ್ಪ ತನ್ನ ತಂದೆ ಮತ್ತು ಅಣ್ಣನ ಮಾತು ಕೇಳಿಕೊಂಡು ಪತ್ನಿಯ ಬಳಿ ಹಣಕ್ಕಾಗಿ ಪೀಡಿಸಲು ಶುರುಮಾಡಿದ್ದ ಎನ್ನಲಾಗಿದೆ. ಬೇರೆ ಮದುವೆಯಾಗಬೇಕು, ನಿನಗೆ ಬರೀ ಹೆಣ್ಣು ಮಕ್ಕಳೇ ಹುಟ್ಟುತ್ತಿದ್ದಾರೆ, ಹೀಗಾಗಿ ನೀನು ತವರಿಗೆ ಹೋಗಿ ಹಣ ತರಬೇಕು ಅಥವಾ ಮನೆ ಬಿಟ್ಟು ತೊಲಗಬೇಕು ಎಂದು ಪತ್ನಿ ತಾರಾಗೆ ತಿಮ್ಮಪ್ಪ ನಿತ್ಯ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದನು.
ಇಷ್ಟಕ್ಕೆ ನಿಲ್ಲದ ಈ ಪಾಪಿ ಪತಿ, ಇತ್ತೀಚೆಗೆ ಪತ್ನಿಯನ್ನು ವಿವಸ್ತ್ರಗೊಳಿಸಿ ಮನಸೋ ಇಚ್ಛೆ ಹಲ್ಲೆ ನಡೆಸಿ ಮನೆಯಲ್ಲೇ ಕೂಡಿ ಹಾಕಿದ್ದನು. ಕುಡಿತದ ಅಮಲಿನಲ್ಲಿ ಪತ್ನಿಯ ಇಡೀ ದೇಹ ರಕ್ತ ಹೆಪ್ಪುಗಟ್ಟಿ ಕಪ್ಪಾಗುವಂತೆ ದೌರ್ಜನ್ಯ ಎಸಗಿದ್ದಾನೆ. ಈ ನರಕ ಯಾತನೆಯಿಂದ ಹೇಗೋ ತಪ್ಪಿಸಿಕೊಂಡ ತಾರ, ಮನೆಯ ಹಿಂಬಾಗಿಲಿನಿಂದ ಓಡಿ ಹೋಗಿ ದಾರಿಯಲ್ಲಿ ಸಿಕ್ಕ ಬಟ್ಟೆಯೊಂದನ್ನು ಮೈಗೆ ಸುತ್ತಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
ಸದ್ಯ ನೊಂದ ಮಹಿಳೆ ತಾರ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪತಿ ತಿಮ್ಮಪ್ಪ ಸೇರಿದಂತೆ ಕಿರುಕುಳ ನೀಡಿದ ಒಟ್ಟು ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರೀತಿಸಿ ಮದುವೆಯಾಗಿ ಮಕ್ಕಳಾದ ಮೇಲೆ ಹಣದ ಆಸೆಗಾಗಿ ಪತ್ನಿಯನ್ನೇ ಈ ಮಟ್ಟಕ್ಕೆ ಹಿಂಸಿಸಿರುವ ತಿಮ್ಮಪ್ಪನ ಕ್ರೌರ್ಯ ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಕ್ಷಿಣೆಯೆಂಬ ಪಿಡುಗು ಮತ್ತು ಗಂಡು ಮಗುವಿನ ವ್ಯಾಮೋಹವು ಸುಶಿಕ್ಷಿತ ಸಮಾಜದಲ್ಲೂ ಎಂತಹ ಕ್ರೌರ್ಯಕ್ಕೆ ಕಾರಣವಾಗಬಲ್ಲದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
Brutally assaulted his wife for dowry
Leave a comment