ಚಿಕ್ಕಮಗಳೂರು: ಬಸವಣ್ಣನವರು ಕೇವಲ ಒಂದು ಧರ್ಮ ಅಥವಾ ಜಾತಿಗೆ ಸೀಮಿತರಾದವರಲ್ಲ, ಅವರು ಇಡೀ ಮಾನವಕುಲಕ್ಕೆ ಸಮಾನತೆಯ ದಾರಿ ತೋರಿದ ಮಹಾನ್ ಮಾನವತಾವಾದಿ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ ಹಾಗೂ ವಾಲ್ಮೀಕಿಯಂತಹ ಮಹಾಪುರುಷರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದರೆ, ಇವರನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ ಎಂದು ಅವರು ಕಳವಳ ವ್ಯಕ್ತಪಡಿಸಿದರು.
೧೨ನೇ ಶತಮಾನದಲ್ಲಿ ಬಸವಣ್ಣನವರು ಕಂಡ ಸಮ ಸಮಾಜದ ಕನಸಿಗೆ, ೨೦ನೇ ಶತಮಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮುದ್ರೆ ಒತ್ತಿದ್ದಾರೆ. ಇಬ್ಬರೂ ಪ್ರತಿಪಾದಿಸಿದ್ದು ಸಮಾನತೆ ಮತ್ತು ನೈತಿಕತೆಯ ಹಾದಿಯನ್ನೇ ಎಂದು ಅವರು ಹೇಳಿದರು.
ಬಸವಣ್ಣನವರ ‘ಕಾಯಕವೇ ಕೈಲಾಸ’ ಮತ್ತು ‘ಅರಿವೇ ಗುರು’ ಎಂಬ ಸಂದೇಶಗಳು ಪರಿಶ್ರಮದ ಮಹತ್ವವನ್ನು ಸಾರುತ್ತವೆ. ಪ್ರತಿಯೊಬ್ಬರೂ ಮಾಡುವ ಕೆಲಸ ಸಣ್ಣದಿರಲಿ, ದೊಡ್ಡದಿರಲಿ ಅದಕ್ಕೆ ಗೌರವ ನೀಡಬೇಕು. ಅದೇ ರೀತಿ ‘ಉಳ್ಳವರು ಶಿವಾಲಯ ಮಾಡುವರು…’ ಎಂಬ ವಚನದ ಮೂಲಕ ನಮ್ಮ ದೇಹವೇ ದೇವಾಲಯ, ನಮ್ಮೊಳಗಿನ ಆತ್ಮವೇ ದೇವರು ಎಂಬ ಸತ್ಯವನ್ನು ಅವರು ಜಗತ್ತಿಗೆ ಸಾರಿದ್ದಾರೆ ಎಂದು ಸ್ಮರಿಸಿದರು.
ಮನುಷ್ಯನ ನಡೆ ಮತ್ತು ನುಡಿ ಎರಡೂ ಶುದ್ಧವಾಗಿರಬೇಕು, ನಡೆ ತಪ್ಪಿದರೆ ಇಡೀ ಬದುಕೇ ವ್ಯರ್ಥ. ೧೨ನೇ ಶತಮಾನದಲ್ಲಿದ್ದ ಅಸಮಾನತೆ, ಅಂಧಶ್ರದ್ಧೆ ಮತ್ತು ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿದರು. ಜಗತ್ತು ಇಂಗ್ಲೆಂಡನ್ನು ಪ್ರಜಾಪ್ರಭುತ್ವದ ಜನನಿ ಎಂದು ಕರೆಯಬಹುದು, ಆದರೆ ಅದಕ್ಕಿಂತ ಮೊದಲೇ ಬಸವಣ್ಣನವರು ಇಂದಿನ ಪಾರ್ಲಿಮೆಂಟ್ ಮಾದರಿಯಲ್ಲೇ ಅನುಭವ ಮಂಟಪವನ್ನು ರೂಪಿಸಿದ್ದರು. ಈ ಮಂಟಪದ ಮೂಲಕ ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಸೇರಿದಂತೆ ಶೋಷಿತ ವರ್ಗದ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ್ದರು ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಮಾತನಾಡಿ, ಮಹಾ ಪುರುಷರ ತತ್ವಗಳು ಕೇವಲ ಭಾಷಣಕ್ಕೆ ಸೀಮಿತವಾಗಬಾರದು, ಅವು ನಮ್ಮ ಬದುಕಿನ ಭಾಗವಾಗಬೇಕು ಎಂದು ಆಶಿಸಿದರು. ಮಹಾತ್ಮರ ಬದುಕಿನ ರೀತಿ-ನೀತಿಗಳು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳು ಜನಸಾಮಾನ್ಯರಿಗೆ ತಲುಪಲಿ ಎಂಬುದೇ ಸರ್ಕಾರಿ ಜಯಂತಿಗಳ ಆಚರಣೆಯ ಉದ್ದೇಶ. ಆದರೆ ಇಂದು ಯಾರನ್ನು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರೋ ಅವರನ್ನೇ ಜಾತಿಯ ಚೌಕಟ್ಟಿನೊಳಗೆ ಬಂಧಿಸಿ ಆಚರಿಸುತ್ತಿರುವುದು ಆ ಮಹಾತ್ಮರಿಗೆ ಮಾಡುವ ಅಪಚಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಬಸವಣ್ಣನವರ ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ತತ್ವವನ್ನು ಸ್ಮರಿಸಿದ ಅವರು, ನಾವು ಮಹಾತ್ಮರನ್ನು ಕೇವಲ ಪ್ರತಿಮೆ ಮತ್ತು ಫೋಟೋಗಳಿಗೆ ಸೀಮಿತಗೊಳಿಸುತ್ತಿದ್ದೇವೆ ಹೊರತು ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿಲ್ಲ ಎಂದು ವಿಷಾದಿಸಿದರು. ಬಸವಣ್ಣ, ಕುವೆಂಪು, ಕನಕದಾಸರು ಹಾಗೂ ಸರ್ವಜ್ಞರಂತಹ ಮಹಾಪುರುಷರ ಫೋಟೋಗಳು ಮನೆಯ ಗೋಡೆಗಳ ಮೇಲೆ ಬಂದರೆ ಸಾಲದು, ಅವರ ವಿಚಾರಗಳು ಮನೆಯ ಒಳಗೆ ಪ್ರವೇಶಿಸಬೇಕು. ಪ್ರತಿಯೊಬ್ಬರೂ ತಮ್ಮ ಮನೆಯೊಳಗಿನ ಜಾತಿಯತೆ ಮತ್ತು ಅಸ್ಪೃಶ್ಯತೆ ಹೋಗಲಾಡಿಸಿಕೊಂಡಾಗ ಮಾತ್ರ ಸಮಾಜದ ಕತ್ತಲೆ ನಿವಾರಿಸಲು ಸಾಧ್ಯ ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಫೆಕ್) ಅಧ್ಯಕ್ಷ ಬಿ.ಹೆಚ್. ಹರೀಶ್ ಮಾತನಾಡಿ, ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರು ಕೇವಲ ಒಂದು ಜಾತಿಗೆ ಸೀಮಿತವಾಗದೆ, ಇಡೀ ಮನುಕುಲದ ದಾರಿದೀಪವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಬಸವಣ್ಣನವರು ಎಂಟು ವರ್ಷದ ಬಾಲಕನಾಗಿದ್ದಾಗಲೇ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ್ದರು. ತಮಗೆ ಜನಿವಾರ ಹಾಕಲು ಬಂದಾಗ, ನನ್ನ ಅಕ್ಕ ನಾಗಮ್ಮನಿಗೆ ಏಕೆ ಜನಿವಾರ ಹಾಕುವುದಿಲ್ಲ? ಎಂದು ಪ್ರಶ್ನಿಸುವ ಮೂಲಕ ಸ್ತ್ರೀ-ಪುರುಷ ಅಸಮಾನತೆ ಪ್ರತಿಭಟಿಸಿ ಮನೆ ಬಿಟ್ಟು ಕೂಡಲಸಂಗಮಕ್ಕೆ ತೆರಳಿದರು ಎಂದರು. ಬಸವಣ್ಣನವರು ‘ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎಂಬ ಮಂತ್ರದ ಮೂಲಕ ವಿಶ್ವ ಭ್ರಾತೃತ್ವದ ಸಂದೇಶವನ್ನು ಸಾರಿದರು. ಸಂಕೀರ್ಣವಾದ ತತ್ವಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ವಚನಗಳ ಮೂಲಕ ತಿಳಿಸಿಕೊಟ್ಟ ಅಪ್ರತಿಮ ಆಡಳಿತಗಾರ ಎಂದು ಬಣ್ಣಿಸಿದರು.
೧೨ನೇ ಶತಮಾನದಲ್ಲೇ ‘ಅನುಭವ ಮಂಟಪ’ ಸ್ಥಾಪಿಸಿ, ಎಲ್ಲಾ ವರ್ಗದ ಜನರಿಗೆ ಮುಕ್ತವಾಗಿ ಚರ್ಚಿಸಲು ಅವಕಾಶ ಮಾಡಿಕೊಟ್ಟ ಬಸವಣ್ಣನವರು ವಿಶ್ವದ ಮೊದಲ ಸಂಸತ್ತಿನ ಪರಿಕಲ್ಪನೆ ನೀಡಿದರು. ಪ್ರತಿಯೊಬ್ಬರೂ ಕಾಯಕ ಮಾಡಬೇಕು ಮತ್ತು ಆ ಕೆಲಸದಲ್ಲೇ ದೇವರನ್ನು ಕಾಣಬೇಕು ಎಂಬ ‘ಕಾಯಕವೇ ಕೈಲಾಸ’ ತತ್ವವನ್ನು ಬೋಧಿಸಿದರಲ್ಲದೆ, ಮಹಿಳೆಯರಿಗೆ ಪುರುಷರಷ್ಟೇ ಸಮಾನ ಸ್ಥಾನಮಾನ ನೀಡಬೇಕು ಎಂದು ಪ್ರತಿಪಾದಿಸಿದರು ಎಂದು ಹೇಳಿದರು.
ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ, ಅಸಾಧ್ಯವಾಗಿದ್ದ ತಾಮ್ರಶಾಸನದ ಗುಟ್ಟನ್ನು ಬಿಡಿಸಿ, ಅದರಲ್ಲಿ ಅಡಗಿದ್ದ ನಿಧಿಯನ್ನು ವೈಯಕ್ತಿಕಕ್ಕೆ ಬಳಸದೆ ಜನಕಲ್ಯಾಣಕ್ಕೆ ಬಳಸುವಂತೆ ರಾಜನಿಗೆ ಸಲಹೆ ನೀಡಿದ ಪ್ರಾಮಾಣಿಕ ವ್ಯಕ್ತಿತ್ವ ಅವರದು ಎಂದು ಗುಣಗಾನ ಮಾಡಿದರು.
ಶ್ರೀ ಬಸವೇಶ್ವರರ ಕುರಿತು ಸಾಹಿತಿ ಬಿ.ತಿಪ್ಪೆರುದ್ರಪ್ಪ, ಪ್ರಧಾನ ಉಪನ್ಯಾಸ ನೀಡಿ, ಬಸವಣ್ಣನವರು ಒಬ್ಬ ಸ್ವತಂತ್ರ ವಿಚಾರವಾದಿ ಚಿಂತಕನಾಗಿ ಸಮಾಜದಲ್ಲಿ ನೆಲೆಸಿದ್ದ ಮೌಢ್ಯಗಳಾದ ಜಾತೀಯತೆ, ವರ್ಣಪದ್ಧತಿ ಮತ್ತು ಶ್ರೇಣೀಕೃತ ವರ್ಗೀಕರಣದ ವಿರುದ್ಧ ಹೋರಾಡಿ ಒಂದು ಸರ್ವ ಸಮಾನತೆಯ ಸಮಾಜವನ್ನು ಕಟ್ಟಲು ಬಯಸಿದವರು. ೧೨ನೇ ಶತಮಾನದಲ್ಲಿ ನಡೆದ ಈ ಚಳುವಳಿ ವರ್ಗ, ವರ್ಣ, ಲಿಂಗಭೇದ ರಹಿತ, ಸಮಾಜ ಸೌಧ ನಿರ್ಮಿತಿಯ ಕನಸು ಹೊತ್ತು ಸ್ಫೋಟಗೊಂಡ ಬಸವಾದಿ ಶರಣರ ಸಮಾಜೋ-ಧಾರ್ಮಿಕ-ವೈಚಾರಿಕ ಕ್ರಾಂತಿ ಆಂದೋಲನದಲ್ಲಿ ಬಸವೇಶ್ವರರು ಎಲ್ಲ ಕೆಳಸ್ತರದ ವೃತ್ತಿಪರ ಜನರನ್ನು ಒಂದೇ ಛತ್ರಿಯಡಿ ತಂದು ಅನುಭವ ಮಂಟಪವನ್ನು ಸ್ಥಾಪಿಸಿದರು. ಇದೊಂದು ಅದ್ಭುತವಾದ ಪ್ರಜಾಪ್ರಭುತ್ವದ ಪರಿಕಲ್ಪನೆ ಎಂದು ಹೇಳಿದರು.
ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಇವುಗಳನ್ನು ಕಲ್ಪಿಸಿಕೊಟ್ಟು ವೈಚಾರಿಕ ಚಿಂತನೆಗಳ ಮೂಸೆಯಲ್ಲಿ ಹೊರಹೊಮ್ಮಿದ್ದೇ ವಚನ ಸಾಹಿತ್ಯ. ಈ ವಚನಗಳೆಂದರೆ ೧೨ನೇ ಶತಮಾನದ ಶರಣ ಚಳುವಳಿಯ ಉಪ ಉತ್ಪನ್ನದ ರಚನೆಗಳು. ಸಂವಾದಾತ್ಮಕವಾಗಿದ್ದು, ಜನರಲ್ಲಿ ಚಿಂತನೆಗೆ ಎಡೆ ಮಾಡಿಕಟ್ಟಿವೆ. ಬೇಸರದ ಸಂಗತಿ ಎಂದರೆ ೯೦೦ ವರ್ಷಗಳು ಕಳೆದರೂ ಕೂಡ ಬಸವಣ್ಣನವರ ಆಶಯಗಳು ಕೈಗೂಡದೇ ಇದ್ದು, ಇವುಗಳನ್ನು ಯಶಸ್ವಿ ಅನುಷ್ಠಾನಕ್ಕೆ ತರುವುದು ಇಂದಿನ ಅನಿವಾರ್ಯವಾಗಿದು, ಆಗ ಮಾತ್ರ ಈ ಆಚರಣೆ ಅರ್ಥಪೂರ್ಣ ಎನಿಸುತ್ತದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ತಹಶೀಲ್ದಾರ್ ರೇಷ್ಮಾಶೆಟ್ಟಿ, ಡಿವೈಎಸ್‌ಪಿ ನಾಗರಾಜ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತಿತರರು ಕಾರ್ಯಕ್ರಮದಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಅವರು ಸ್ವಾಗತಿಸಿದರು.
Basavanna was a great humanist who led the way for equality
Leave a comment