ಚಿಕ್ಕಮಗಳೂರು: ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿಸುವ ಉದ್ದೇಶದಿಂದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿಯವರು ಅನುಷ್ಠಾನಗೊಳಿಸಲಾಗಿದ್ದು, ಇದರ ಅಂಗವಾಗಿ ಜಿಲ್ಲೆಯಾದ್ಯಂತ ಎಲ್ಲಾ ಮಂಡಲ ಮಟ್ಟದಲ್ಲಿ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ಶೆಟ್ಟಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಪ್ರತಿಯೊಬ್ಬ ನಾಗರೀಕರು ಸಹ ಸ್ವದೇಶಿ ಉತ್ಪನ್ನಗಳ ಬಳಕೆ, ಸ್ವದೇಶಿ ನೀತಿಯ ಆಧಾರದ ಮೇಲೆ ಸಾಮಾಜಿಕ ಜೀವನವನ್ನು ರೂಢಿಸಿಕೊಳ್ಳುವ ಪ್ರತಿಜ್ಞೆಯನ್ನು ಈ ಅಭಿಯಾನದ ಮೂಲಕ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು. ಮಹತ್ವದ ಈ ಅಭಿಯಾನ ಸೆ.೨೫ ರಂದು ನಡೆದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿಯಂದು ಚಾಲನೆ ನೀಡಲಾಗಿದ್ದು, ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜಯಂತಿ ಡಿ.೨೫ ರಂದು ನಡೆಯಲಿದ್ದು, ಅಂದು ಸಮಾರೋಪಗೊಳ್ಳಲಿದೆ ಎಂದರು.
ಜಿಲ್ಲೆಯಲ್ಲಿ ಈ ಅಭಿಯಾನ ಎಲ್ಲಾ ಮಂಡಲ ಮಟ್ಟಗಳಲ್ಲಿ ನಡೆಯಲಿದ್ದು, ಈಗಾಗಲೇ ಒಂದು ದಿನದ ಜಿಲ್ಲಾ ಮಟ್ಟದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದ ಕಾರ್ಯಾಗಾರ ನಡೆಸಲಾಗಿದೆ. ಈ ಮೂಲಕ ಪ್ರತಿ ಹಳ್ಳಿಗಳಲ್ಲೂ ಅಭಿಯಾನದ ಉದ್ದೇಶವನ್ನು ಮನವರಿಕೆ ಮಾಡಿ ಅಭಿಯಾನ ಪೂರ್ಣಗೊಂಡ ನಂತರ ಜಿಲ್ಲಾ ಮಟ್ಟದಲ್ಲಿ ಸಮ್ಮೇಳನ ನಡೆಸುವುದಾಗಿ ಹೇಳಿದರು. ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಭಾರತ ದೇಶದಲ್ಲಿ ತಯಾರಾಗುವ ಸ್ವದೇಶಿ ಉತ್ಪನ್ನಗಳಾದ ಮಣ್ಣಿನ ಉತ್ಪನ್ನಗಳು ಸೇರಿದಂತೆ ಇತ್ಯಾದಿ ಸ್ವದೇಶಿ ಉತ್ಪನ್ನಗಳನ್ನು ಖರೀದಿಸಲು ಮತ್ತು ಸ್ವದೇಶಿ ಉತ್ಪನ್ನಗಳನ್ನು ಮಾರಾಟ ಮಾಡಲು ಗ್ರಾಹಕರು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ತಾಲ್ಲೂಕು ಕಚೇರಿ ಆವರಣದಲ್ಲಿದ್ದ ಗಣಪತಿ ದೇವಸ್ಥಾನ ರಸ್ತೆಗೆ ಅಡ್ಡಲಾಗಿ ಸಂಚಾರಕ್ಕೆ ತೊಂದರೆಯಾಗುವುದನ್ನು ಮನಗಂಡು ಪಕ್ಕಕ್ಕೆ ಸ್ಥಳಾಂತರಿಸಲಾಗಿದೆ. ಅದೇ ರೀತಿ ಉಪ್ಪಳ್ಳಿ ದರ್ಗಾದಲ್ಲಿ ಮಸೀದಿ ನಿರ್ಮಿಸುವ ಕೆಲಸವನ್ನು ಹಿಂದಕ್ಕೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ದರ್ಗಾದ ಬಳಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು. ಕಾಲೇಜುಗಳ ಬಳಿ ಗಾಂಜಾ ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಭಿಯಾನದ ಸಂಚಾಲಕಿ ಸವಿತಾ ರಮೇಶ್ ಮಾತನಾಡಿ, ಯುವಕರು, ರೈತರು, ಹಳ್ಳಿಗರು, ಬಡವರು ಮತ್ತು ಮಹಿಳೆಯರ ಪರಾವಲಂಬನೆಯಿಂದ ಸ್ವಾವಲಂಬನೆಯೆಡೆಗೆ ತರುವ ಉದ್ದೇಶವೇ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದ ಉದ್ದೇಶ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಹೆಚ್.ಎಸ್. ಪುಟ್ಟಸ್ವಾಮಿ, ಮಧುಕುಮಾರ್ ರಾಜ್ ಅರಸ್, ರಘು ಜನ್ನಾಪುರ, ದಿನೇಶ್, ಕನಕರಾಜ್ ಅರಸ್ ಮತ್ತಿತರರು ಉಪಸ್ಥಿತರಿದ್ದರು
Atmanirbhar Bharat Sankalpa Abhiyana at Mandal Level
Leave a comment