ಚಿಕ್ಕಮಗಳೂರು: ಅಖಿಲ ಭಾರತ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನವನ್ನು ಶೃಂಗೇರಿ ಪಟ್ಟಣದ ಗೌರಿಶಂಕರ್ ಸಭಾಂಗಣದಲ್ಲಿ ಜ.೪ ರಂದು ಭಾನುವಾರ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಬಿ.ಶಿವಶಂಕರ್ ತಿಳಿಸಿದರು.
ಅವರು ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಚುಟುಕು ಕವಿ ಹೆಚ್.ದುಂಡಿರಾಜ್ ಆಯ್ಕೆಯಾಗಿದ್ದಾರೆ. ಅಂದು ಬೆಳಗ್ಗೆ ೮ ಗಂಟೆಗೆ ಧ್ವಜಾರೋಹಣವನ್ನು ಶೈಲಜಾರತ್ನಾಕರ ಹೆಗ್ಡೆ ನೆರವೇರಿಸಲಿದ್ದು, ಸಮ್ಮೇಳನವನ್ನು ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಉದ್ಘಾಟಿಸಲಿದ್ದಾರೆಂದು ಹೇಳಿದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಚಾಲನೆ ನೀಡಿಲಿದ್ದಾರೆಂದರು.
ಸಮಾರೋಪ ಸಮಾರಂಭದಲ್ಲಿ ಗಣೇಶ್ ಹಗ್ಡೆ ಸಮಾರೋಪ ಭಾಷಣ ಮಾಡಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಚಲನಚಿತ್ರ ನಿರ್ದೇಶಕ ಡಾ. ಗಿರೀಶ್ ಕಾಸರವಳ್ಳಿ ಅವರನ್ನು ಸನ್ಮಾನಿಸಲಾಗುವುದೆಂದು ಹೇಳಿದರು.
ಬೀದರ್‌ನ ಡಾ. ಎಂ.ಜಿ ದೇಶ್‌ಪಾಂಡೆ ಮತ್ತು ಶೃಂಗೇರಿ ಶಿವಣ್ಣ ಅವರಿಗೆ ಅಖಿಲ ಭಾರತ ಕನ್ನಡ ಚುಟುಕು ಸಿರಿ ಪ್ರಶಸ್ತಿ, ಯಜ್ಞಪುರುಷ ಭಟ್ ಸೇರಿದಂತೆ ೧೧ ಕವಿಗಳಿಗೆ ಚುಟುಕುಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹೆಚ್.ಎ ಶ್ರೀನಿವಾಸ್ ಕಿಗ್ಗ ವಿರಚಿತ ‘ಕನ್ನಡ ನುಡಿ’ ಮತ್ತು ಚಿಕ್ಕಮಗಳೂರಿನ ಸೌಭಾಗ್ಯ ಮಹಾಂತೇಶ್‌ರ ‘ಮಕ್ಕಳ ಹಾಡುಗಳ ಚಿನ್ನದ ಟೋಪಿ’ ಸಿಂಗಟಗೆರೆ ಶಪಿತಾ ಬೇಗಂರ ‘ನೆನಪಿನ ಪಯಣ’ ‘ನನ್ನುಡಿಯ ತೇರು’ ಪುಸ್ತಕಗಳು ಬಿಡುಗಡೆಗೊಳ್ಳಲಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಶೃಂಗೇರಿ ಸುಬ್ಬಣ್ಣ, ಬಿ.ಹೆಚ್ ಸೋಮಶೇಖರ್, ಆಗುಂಬೆ ಗಣೇಶ್ ಹೆಗ್ಡೆ, ಅಂಗುರುಡಿ ಗಣೇಶ್, ವಿಜಯಲಕ್ಷ್ಮಿ, ಯೋಗಪ್ಪಗೌಡ ಉಪಸ್ಥಿತರಿದ್ದರು.
All India Kannada Short Literature Conference to be held in Sringeri on January 4th
Leave a comment