ಎನ್.ಆರ್.ಪುರ: ಮಾರುತಿ 800 ಕಾರೊಂದು ಆಕಸ್ಮಿಕವಾಗಿ ಬೆಂಕಿ ಹೊತ್ತಿ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಗುಬ್ಬಿಗಾ ಗ್ರಾಮದಲ್ಲಿ ನಡೆದಿದೆ.
ಕಾಫಿ ತೋಟದ ಸೂಪರ್‌ವೈಸರ್ ಜಾರ್ಜ್ ಎಂಬುವರಿಗೆ ಸೇರಿದ ಈ ಕಾರು, ಕಾರ್ಮಿಕರನ್ನು ತೋಟಕ್ಕೆ ಬಿಟ್ಟು ಬಂದು ಮನೆ ಮುಂದೆ ನಿಲ್ಲಿಸಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ವಾಹನ ಧಗಧಗನೆ ಹೊತ್ತಿ ಉರಿದಿದೆ.
ಕಾರ್ಮಿಕರು ಕಾರಿನಲ್ಲಿದ್ದಾಗಲೇ ಈ ಅವಘಡ ಸಂಭವಿಸಿದ್ದರೆ ದೊಡ್ಡ ಮಟ್ಟದ ಪ್ರಾಣಾಪಾಯವಾಗುವ ಸಾಧ್ಯತೆಯಿತ್ತು, ಆದರೆ ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಮನೆ ಬಳಿ ನಿಲ್ಲಿಸಿದ ನಂತರವೇ ಬೆಂಕಿ ಹೊತ್ತಿಕೊಂಡಿದ್ದರಿಂದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
A Maruti 800 car accidentally caught fire
Leave a comment