ಮೂಡಿಗೆರೆ: ಬೇಲೂರು ಭಾಗದಿಂದ ಭದ್ರಾ ಅಭಯಾರಣ್ಯದತ್ತ ಕಾಡಾನೆಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಮಲೆನಾಡಿನ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಕಳೆದ ಎಂಟು ದಿನಗಳಿಂದ ಮಾಕೋನಹಳ್ಳಿ ಸುತ್ತಮುತ್ತ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಕಾಫಿ ತೋಟಗಳಿಗೆ ನುಗ್ಗಿ ಕಾಫಿ, ಅಡಿಕೆ, ಬಾಳೆ ಹಾಗೂ ಕಾಳುಮೆಣಸು ಬೆಳೆಗಳನ್ನು ನಾಶಪಡಿಸಿದ್ದು, ಆಕ್ರೋಶಗೊಂಡ ರೈತರು ಶನಿವಾರ ಮಾಕೋನಹಳ್ಳಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮೂಡಿಗೆರೆ-ಬೇಲೂರು ರಸ್ತೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದರು.
ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಬೇಕು ಅಥವಾ ಬಂದ ದಾರಿಯಲ್ಲೇ ವಾಪಸ್ ಅಟ್ಟಬೇಕು. ಕಾಡಾನೆಗಳಿಂದ ನಾಶವಾಗಿರುವ ಬೆಳೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬೆಳಿಗ್ಗೆ 10 ಗಂಟೆಯಿಂದಲೇ ರೈತರು ರಸ್ತೆ ತಡೆ ಆರಂಭಿಸಿದರು. ಆನೆಗಳು ನಾಶಪಡಿಸಿದ್ದ ಕಾಫಿ ಹಾಗೂ ಅಡಿಕೆ ಗಿಡಗಳನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದರು. ಬಿಸಿಲಿನ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ರಸ್ತೆಗೆ ಶಾಮಿಯಾನ ಹಾಕಿಕೊಂಡು ಮಹಿಳಾ ಕಾರ್ಮಿಕರು, ಮಕ್ಕಳು ಸೇರಿದಂತೆ ನೂರಾರು ಮಂದಿ ಧರಣಿಯಲ್ಲಿ ಪಾಲ್ಗೊಂಡರು.
ಶಾಸಕಿ ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಶಾಸಕಿ ನಯನಾ ಮೋಟಮ್ಮ ಅವರಿಗೆ ದೂರವಾಣಿ ಮೂಲಕ ಮನವಿ ಮಾಡಿದಾಗ, ನವೆಂಬರ್ 30ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಭೆ ಕರೆದಿದ್ದು, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿರೀಕ್ಷೆಯಿದೆ. ಆದರೆ, ತಾವು ಪ್ರತಿಭಟನಾ ಸ್ಥಳಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ಶಾಸಕಿ ವಿರುದ್ಧ ಘೋಷಣೆ ಕೂಗಿದರು.
ಮಧ್ಯಾಹ್ನ 12.30ರ ವೇಳೆಗೆ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಹಾಗೂ ಡಿಸಿಎಫ್ ಬೋರಯ್ಯ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಬೇಲೂರು ಭಾಗದ ಸಮಸ್ಯೆಯನ್ನು ಪರಿಹರಿಸುವ ನೆಪದಲ್ಲಿ ಕಾಡಾನೆಗಳನ್ನು ಮೂಡಿಗೆರೆ ತಾಲೂಕಿಗೆ ಅಟ್ಟಲಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಶಾಸಕಿ ನಯನಾ ಮೋಟಮ್ಮ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ, ಕಾರುಬೈಲ್ ಗ್ರಾಮದ ಕೃಷಿಕ ಪ್ರಹ್ಲಾದ್ ಎಂಬುವವರು ಬೆಳೆ ನಷ್ಟದಿಂದ ಬೇಸತ್ತು ರಸ್ತೆ ಬದಿಯ ಕಟ್ಟಡದ ಮಹಡಿಗೆ ತೆರಳಿ ವಿಷ ಸೇವಿಸಲು ಯತ್ನಿಸಿದ ಘಟನೆ ಸ್ಥಳದಲ್ಲಿ ಆತಂಕ ಮೂಡಿಸಿತು. ಕೂಡಲೇ ರೈತ ಮುಖಂಡರು ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ಅವರ ಬಳಿಯಿದ್ದ ವಿಷದ ಬಾಟಲಿಯನ್ನು ವಶಪಡಿಸಿಕೊಂಡರು. ಬಳಿಕ ಮೂಡಿಗೆರೆ ಸಿಪಿಐ ಕೆ.ವಿ.ರಾಜಶೇಖರ್ ಹಾಗೂ ಪಿಎಸ್‌ಐಗಳಾದ ಹರ್ಷವರ್ಧನ್, ಶಶಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಪ್ರಹ್ಲಾದ್ ಅವರನ್ನು ಸಮಾಧಾನಪಡಿಸಿ ಕೆಳಗಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಹ್ಲಾದ್, 20 ವರ್ಷಗಳಿಂದ ಶ್ರಮಪಟ್ಟು ಬೆಳೆಸಿದ್ದ ಒಂದೂವರೆ ಎಕರೆ ತೋಟಕ್ಕೆ ಮೂರು ದಿನಗಳ ಹಿಂದೆ 12 ಕಾಡಾನೆಗಳು ನುಗ್ಗಿ ಕಾಫಿ, ಬಾಳೆ, ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ನಾಶಪಡಿಸಿವೆ. ಬೆಳೆ ಹಾಗೂ ಜಮೀನಿನ ನಷ್ಟಕ್ಕೆ ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಮುಖ್ಯಮಂತ್ರಿ ನವೆಂಬರ್ 30ರಂದು ಸಭೆ ಕರೆದಿದ್ದು, ರೈತರ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ಸೂಕ್ತ ಪರಿಹಾರ ಹಾಗೂ ಕಾಡಾನೆ ಹಾವಳಿಗೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದರು.
ಡಿಸಿಎಫ್ ಬೋರಯ್ಯ ಮಾತನಾಡಿ, 56 ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಅಟ್ಟಲು ಸರ್ಕಾರ ನಿರ್ಧರಿಸಿತ್ತು. ಆದರೆ, ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಬೇಲೂರಿನಿಂದ ಮೂಡಿಗೆರೆ ತಾಲೂಕಿಗೆ ಬಂದಿದ್ದ 39 ಆನೆಗಳ ಪೈಕಿ 25 ಆನೆಗಳು ಕಾನಹಳ್ಳಿ ಅರಣ್ಯಕ್ಕೆ ಮರಳಿದ್ದು, ಉಳಿದ 16 ಆನೆಗಳು ಮಾಕೋನಹಳ್ಳಿ ಮತ್ತು ಕಮ್ಮರಗೋಡು ಭಾಗದಲ್ಲಿ ಬೀಡುಬಿಟ್ಟಿವೆ. ಆನೆಗಳಿಂದ ಹಾನಿಗೊಳಗಾದ ತೋಟಗಳ ಸಮೀಕ್ಷೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳನ್ನು ನೇಮಿಸಲಾಗಿದ್ದು, ತಕ್ಷಣವೇ ಕಾರ್ಯಾರಂಭ ಮಾಡಲಿದ್ದಾರೆ. ಎರಡು ದಿನಗಳ ಕಾಲಾವಕಾಶ ನೀಡುವಂತೆ ರೈತರಲ್ಲಿ ಮನವಿ ಮಾಡಿದರು.
ಕೃಷಿಕರಾದ ಎಂ.ಎನ್.ಅಶ್ವತ್ಥ್ ಹಾಗೂ ಸುಪ್ರೀತ್ ಸೇರಿದಂತೆ ಹಲವು ರೈತರು ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಫಿ ತೋಟಗಳು ಹಾಗೂ ಭತ್ತದ ಗದ್ದೆಗಳು ನಾಶವಾಗುತ್ತಿವೆ. ಈ ಭಾಗದ ರೈತರ ಬದುಕು ಉಳಿಸಲು ಕಾಡಾನೆಗಳನ್ನು ನಾಗರಹೊಳೆ, ಬಂಡೀಪುರ ಅಥವಾ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಸುಮಾರು ಎರಡು ಗಂಟೆಗಳ ಕಾಲ ರೈತರ ಮನವೊಲಿಸಲು ಗಾಯತ್ರಿ ಶಾಂತೇಗೌಡ ಹಾಗೂ ಡಿಸಿಎಫ್ ಬೋರಯ್ಯ ಪ್ರಯತ್ನಿಸಿದರೂ ಪ್ರತಿಭಟನಾಕಾರರು ಧರಣಿ ಹಿಂಪಡೆಯಲು ಒಪ್ಪಲಿಲ್ಲ. ಬಳಿಕ ಗಾಯತ್ರಿ ಶಾಂತೇಗೌಡ ಸ್ಥಳದಿಂದ ತೆರಳಿದರು. ರೈತರು ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ವಿವಿಧ ರಾಜಕೀಯ ಮುಖಂಡರು, ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನೂರಾರು ರೈತರು ಭಾಗವಹಿಸಿದ್ದರು.
Farmers’ struggle for compensation for damage caused by wild elephant attacks
Leave a comment