ಚಿಕ್ಕಮಗಳೂರು: ಕಾಫಿನಾಡಿನ ಸುತ್ತಮುತ್ತ ಉಪಟಳ ನೀಡುತ್ತಿದ್ದ 20 ವರ್ಷದ ಒಂಟಿ ಸಲಗವನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ನಡೆಸುತ್ತಿರುವ ‘ಆಪರೇಷನ್ ಗಜ’ ಕಾರ್ಯಾಚರಣೆ ಇಂದು ರೋಚಕ ಹಾಗೂ ಆತಂಕಕಾರಿ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.
ಕಾರ್ಯಾಚರಣೆಯ ವೇಳೆ ಒಂಟಿ ಸಲಗದ ಅಬ್ಬರಕ್ಕೆ ಬೆದರಿದ ಸಾಕಾನೆ ಅಯ್ಯಪ್ಪ, ತನ್ನ ಮೇಲಿದ್ದ ಮಾವುತನನ್ನೇ ಕೆಳಗೆ ಬೀಳಿಸಿ ದಟ್ಟ ಅರಣ್ಯದತ್ತ ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.
20 ವರ್ಷದ ಪುಂಡಾನೆ ಎದುರು ಸಾಕಾನೆ ಅಯ್ಯಪ್ಪ ಅಕ್ಷರಶಃ ಬೆಚ್ಚಿಬಿದ್ದಿದ್ದು, ಕಾಡಾನೆಯ ಆರ್ಭಟಕ್ಕೆ ಹೆದರಿದ ಅಯ್ಯಪ್ಪ ಮಾವುತನನ್ನು ಕೆಳಗಿಳಿಸಿ ಅರಣ್ಯದೊಳಗೆ ಓಡಿಹೋಗಿದೆ. ಇದರಿಂದ ಕೆಲಕಾಲ ಕಾರ್ಯಾಚರಣೆಯಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬಳಿಕ ಕಾರ್ಯಾಚರಣೆಯಲ್ಲಿದ್ದ ಮತ್ತೊಂದು ಸಾಕಾನೆ ‘ಜ್ಯೂನಿಯರ್ ಅರ್ಜುನ’ ಕಾಡಿನೊಳಗೆ ತೆರಳಿ ಬೆದರಿದ್ದ ಅಯ್ಯಪ್ಪನನ್ನು ಸುರಕ್ಷಿತವಾಗಿ ವಾಪಸ್ ಕರೆತಂದಿದೆ.
ಇದೇ ವೇಳೆ ಕಾಡಾನೆ ಹಾಗೂ ಸಾಕಾನೆಗಳ ನಡುವೆ ಮುಖಾಮುಖಿ ನಡೆದ ಸಂದರ್ಭದಲ್ಲಿ, ಆನೆಯ ಮೇಲಿದ್ದ ಅರವಳಿಕೆ ತಜ್ಞರ ಭುಜಕ್ಕೆ ಮರದ ರೆಂಬೆಯೊಂದು ಬಡಿದು ಸಣ್ಣಪುಟ್ಟ ತೊಂದರೆ ಉಂಟಾಗಿದೆ.
ಒಂದೆಡೆ ಪುಂಡಾನೆ ಅಬ್ಬರಕ್ಕೆ ಸಾಕಾನೆ ಅಯ್ಯಪ್ಪ ಬೆದರಿ ಓಡಿದರೆ, ಮತ್ತೊಂದೆಡೆ ಸೆರೆಯ ಸುಳಿವು ಸಿಗುತ್ತಿದ್ದಂತೆ ಒಂಟಿ ಸಲಗ ದಟ್ಟ ಪೊದೆಗಳೊಳಗೆ ನುಗ್ಗಿ ನಿಂತುಕೊಳ್ಳುತ್ತಿರುವುದು ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಾಡಾನೆ ಪೊದೆಗಳೊಳಗೆ ನಿಂತಿರುವುದರಿಂದ ಅರವಳಿಕೆ ನೀಡುವುದು ಹಾಗೂ ಸುರಕ್ಷಿತವಾಗಿ ಸೆರೆಹಿಡಿಯುವುದು ಅರಣ್ಯ ಸಿಬ್ಬಂದಿಗೆ ಕಷ್ಟಕರವಾಗಿದ್ದು, ಪರಿಸ್ಥಿತಿಯನ್ನು ಅವಲೋಕಿಸಿದ ಅಧಿಕಾರಿಗಳು ಸದ್ಯಕ್ಕೆ ‘ಆಪರೇಷನ್ ಗಜ’ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಒಂಟಿ ಸಲಗದ ಅಬ್ಬರದ ನಡುವೆ ಮುಂದಿನ ಹಂತದ ಕಾರ್ಯಾಚರಣೆ ಹೇಗೆ ನಡೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
Sakane Ayyappa threatened by Pundane uproar!
Leave a comment