ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಜನತೆ ಚುನಾವಣೆಯಲ್ಲಿ ಕೋಮುವಾದಿ ನಾಯಕರನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ. ಆದರೆ ಕೇವಲ ಕೋಮುವಾದಿ ನಾಯಕರನ್ನು ಚುನಾವಣೆಯಲ್ಲಿ ಸೋಲಿಸಿದರೆ ಸಾಲದು. ಸಮಾಜದಲ್ಲಿ ಕೋಮು ದ್ವೇಷ ಬಿತ್ತುವ ರಾಜಕಾರಣವನ್ನೂ ಸೋಲಿಸಬೇಕು. ಈ ಐತಿಹಾಸಿಕ ನೆಲದಿಂದ ಕೋಮುವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಕರೆ ನೀಡಿದರು.
ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ 110ನೇ ಜನ್ಮ ಜಯಂತಿ ಹಾಗೂ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಪಿ. ಮಂಜೇಗೌಡ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ನಾನು ಚಿರಋಣಿ. ಈ ಜಿಲ್ಲೆಯಲ್ಲಿ ಕೋಮುವಾದಿ ರಾಜಕಾರಣ ನಡೆಸುತ್ತಿದ್ದ ನಾಯಕರನ್ನು ಸೋಲಿಸಿದ ನಿಮಗೆ ಶತಕೋಟಿ ನಮನಗಳು. ಆದರೆ ನಮ್ಮ ಹೋರಾಟ ವ್ಯಕ್ತಿಗಳ ವಿರುದ್ಧ ಮಾತ್ರವಲ್ಲ, ಸಮಾಜವನ್ನು ಧರ್ಮದ ಹೆಸರಿನಲ್ಲಿ ವಿಭಜಿಸುವ ಸಿದ್ಧಾಂತದ ವಿರುದ್ಧವೂ ಆಗಿರಬೇಕು. ಚುನಾವಣೆಯಲ್ಲಿ ಕೋಮುವಾದಿ ನಾಯಕರನ್ನು ಸೋಲಿಸಿದಂತೆ ಸಮಾಜದಲ್ಲಿರುವ ಕೋಮುವಾದಿ ಮನಸ್ಥಿತಿಯನ್ನೂ ಸೋಲಿಸಬೇಕಾಗಿದೆ ಎಂದು ಹೇಳಿದರು.
ಚಿಕ್ಕಮಗಳೂರು ಕೇವಲ ಒಂದು ಜಿಲ್ಲೆಯಲ್ಲ. ಸೈದ್ಧಾಂತಿಕವಾಗಿ ಅತ್ಯಂತ ಮಹತ್ವಪೂರ್ಣವಾದ ನೆಲ. ಒಂದು ಕಡೆ ಬಾಬಾ ಬುಡನ್ಗಿರಿ, ಮತ್ತೊಂದು ಕಡೆ ಶೃಂಗೇರಿಯ ಶಾರದಾ ಪೀಠವಿದೆ. ವಿಭಿನ್ನ ಧರ್ಮಗಳು, ಸಂಸ್ಕೃತಿಗಳು ಹಾಗೂ ಪರಂಪರೆಗಳು ಸಹಬಾಳ್ವೆ ನಡೆಸುತ್ತಿರುವ ಈ ಪವಿತ್ರ ನೆಲವನ್ನು ಧರ್ಮದ ಹೆಸರಿನಲ್ಲಿ ಅಶಾಂತಿಯ ಕೇಂದ್ರವನ್ನಾಗಿ ಮಾಡಲು ಕೆಲವರು ಪ್ರಯತ್ನಿಸಿದ್ದರು. ಶಾಸಕರಾಗುವುದಕ್ಕಾಗಿ ಧರ್ಮವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ಸಮಾಜದಲ್ಲಿ ದ್ವೇಷ ಸೃಷ್ಟಿಸಿದ್ದನ್ನು ಜಿಲ್ಲೆಯ ಜನತೆ ನೋಡಿದ್ದಾರೆ. ಅಂತಹ ರಾಜಕಾರಣಕ್ಕೆ ಜನರು ಚುನಾವಣೆಯ ಮೂಲಕ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಅವಕಾಶ ನೀಡಿಲ್ಲ. ಮುಂದೆಯೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪ್ರಯತ್ನಗಳನ್ನು ಸಹಿಸುವುದಿಲ್ಲ. ಜಾತಿ, ಧರ್ಮ, ಭಾಷೆ ಹಾಗೂ ಪ್ರಾಂತ್ಯದ ಹೆಸರಿನಲ್ಲಿ ಜನರನ್ನು ವಿಭಜಿಸುವ ರಾಜಕಾರಣಕ್ಕೆ ಅವಕಾಶ ನೀಡದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದು ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತವಾಗಿದೆ ಎಂದು ಪ್ರತಿಪಾದಿಸಿದರು.
1978ರಲ್ಲಿ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನಾಗಿ ಇಂದಿರಾ ಗಾಂಧಿಯವರ ಚುನಾವಣಾ ಪ್ರಚಾರಕ್ಕಾಗಿ ಚಿಕ್ಕಮಗಳೂರಿಗೆ ಬಂದಿದ್ದೆ. ಅಂದು ದೇವರಾಜ ಅರಸು, ಗುಂಡೂರಾವ್ ಹಾಗೂ ಎಫ್.ಎಂ. ಖಾನ್ ಅವರ ನೇತೃತ್ವದಲ್ಲಿ ಸುಮಾರು 1,500 ಯುವ ಕಾರ್ಯಕರ್ತರು ಚುನಾವಣೆಯಲ್ಲಿ ಕೆಲಸ ಮಾಡಿದ್ದೆವು. ಜಾರ್ಜ್ ಫರ್ನಾಂಡಿಸ್ ಅವರ ರಾಜಕೀಯ ಆರ್ಭಟವನ್ನು ಎದುರಿಸಲು ದೇವರಾಜ ಅರಸು ಅವರು ನಮ್ಮನ್ನು ‘ಕಪಿಸೇನೆ’ ಎಂದು ಕರೆಯುತ್ತಿದ್ದರು ಎಂದು ತಮ್ಮ ರಾಜಕೀಯ ಜೀವನದ ನೆನಪುಗಳನ್ನು ಹಂಚಿಕೊಂಡರು.
ಅಂದು ಸಾಮಾನ್ಯ ಕಾರ್ಯಕರ್ತನಾಗಿ ಬಂದಿದ್ದ ನಾನು, ಸುಮಾರು ಐದು ದಶಕಗಳ ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿ ಇದೇ ನೆಲಕ್ಕೆ ಬಂದಿರುವುದು ನನ್ನ ರಾಜಕೀಯ ಬದುಕಿನ ಅತ್ಯಂತ ಹೆಮ್ಮೆಯ ಕ್ಷಣ. ಇಂದಿರಾ ಗಾಂಧಿಯವರಿಗೆ ರಾಜಕೀಯವಾಗಿ ಮತ್ತೆ ಶಕ್ತಿ ತುಂಬಿದ ಐತಿಹಾಸಿಕ ನೆಲ ಚಿಕ್ಕಮಗಳೂರು. ಈ ಜಿಲ್ಲೆಯೊಂದಿಗೆ ನನಗಿರುವ ಸಂಬಂಧ ಕೇವಲ ರಾಜಕೀಯ ಸಂಬಂಧವಲ್ಲ, ಭಾವನಾತ್ಮಕ ಸಂಬಂಧವೂ ಹೌದು ಎಂದು ಹೇಳಿದರು.
ನೂತನ ಜಿಲ್ಲಾಧ್ಯಕ್ಷರಾದ ಮಂಜೇಗೌಡರಿಗೆ ಕಿವಿಮಾತು ಹೇಳಿದ ಹರಿಪ್ರಸಾದ್, ಕಾಂಗ್ರೆಸ್ ಪಕ್ಷದಲ್ಲಿ ಹುದ್ದೆ ಎಂದರೆ ಕೇವಲ ಅಧಿಕಾರವಲ್ಲ, ಬಹುದೊಡ್ಡ ಜವಾಬ್ದಾರಿ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವುದು ಅಧಿಕಾರದ ಉದ್ದೇಶವಾದರೆ, ಪಕ್ಷದ ತತ್ವ ಮತ್ತು ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರುವುದು ಜವಾಬ್ದಾರಿಯಾಗಿದೆ ಎಂದರು.
ಚುನಾವಣೆಯಲ್ಲಿ ಗೆಲ್ಲುವುದು, ಮಂತ್ರಿಯಾಗುವುದು ಅಥವಾ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಪಡೆಯುವುದಷ್ಟೇ ರಾಜಕೀಯ ಜೀವನದ ಗುರಿಯಾಗಬಾರದು. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು, ಯಾವುದೇ ರಾಗದ್ವೇಷವಿಲ್ಲದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬಲಪಡಿಸಬೇಕು ಎಂದು ಸಲಹೆ ನೀಡಿದರು.
ನಾನು ಸೇವಾದಳದಿಂದ ಬಂದವನು. ಕಾಂಗ್ರೆಸ್ ಪಕ್ಷದಲ್ಲಿ ನನ್ನ ರಾಜಕೀಯ ಜೀವನಕ್ಕೆ 53 ವರ್ಷಗಳಾಗಿವೆ. ಈ ಅವಧಿಯಲ್ಲಿ ಒಂದೇ ಒಂದು ದಿನವೂ ಪಕ್ಷವನ್ನು ತೊರೆದಿಲ್ಲ. ಒಬ್ಬ ಹರಿಪ್ರಸಾದ್ ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಲು ನೂರು ಜನ ಹರಿಪ್ರಸಾದ್ಗಳು ಸಿದ್ಧರಾಗಿರುತ್ತಾರೆ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಅಧಿಕಾರಕ್ಕಿಂತ ಸಿದ್ಧಾಂತ ದೊಡ್ಡದು ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಇಂದಿರಾ ಗಾಂಧಿಯವರು ಕೇವಲ ಭಾರತದ ಪ್ರಧಾನಮಂತ್ರಿಯಾಗಿರಲಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ನಾಯಕತ್ವಕ್ಕೆ ವಿಶಿಷ್ಟ ಸ್ಥಾನ ಕಲ್ಪಿಸಿದ ಮಹಾನ್ ನಾಯಕಿಯಾಗಿದ್ದರು. ಹಸಿರು ಕ್ರಾಂತಿ, ಬ್ಯಾಂಕುಗಳ ರಾಷ್ಟ್ರೀಕರಣ, ರಾಜಧನ ರದ್ದತಿ ಸೇರಿದಂತೆ ಅನೇಕ ಐತಿಹಾಸಿಕ ನಿರ್ಧಾರಗಳ ಮೂಲಕ ಬಡವರು, ರೈತರು ಹಾಗೂ ದುರ್ಬಲ ವರ್ಗಗಳ ಸಬಲೀಕರಣಕ್ಕೆ ಶ್ರಮಿಸಿದರು ಎಂದು ಸ್ಮರಿಸಿದರು.
ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರಿಂದ ಮಾತ್ರ ನಮ್ಮ ಕರ್ತವ್ಯ ಮುಗಿಯುವುದಿಲ್ಲ. ಅವರ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಸಮಾನತೆ ಹಾಗೂ ದೇಶದ ಏಕತೆಯ ಆದರ್ಶಗಳನ್ನು ನಮ್ಮ ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸುವುದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಕಾಂಗ್ರೆಸ್ ಪಕ್ಷ ನೀಡಿರುವ ಕೊಡುಗೆಗಳನ್ನು ಪ್ರಸ್ತಾಪಿಸಿದ ಅವರು, ಆ್ಯನಿ ಬೆಸೆಂಟ್, ಸರೋಜಿನಿ ನಾಯ್ಡು, ನೆಲ್ಲಿ ಸೇನ್ಗುಪ್ತಾ, ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿದರು. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ವಿಚಾರದಲ್ಲಿ ಸೋನಿಯಾ ಗಾಂಧಿಯವರ ಬದ್ಧತೆ ಅತ್ಯಂತ ಮಹತ್ವದ್ದಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಇತಿಹಾಸ ಅಧಿಕಾರದ ಇತಿಹಾಸ ಮಾತ್ರವಲ್ಲ. ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ನ್ಯಾಯ, ಸರ್ವಧರ್ಮ ಸಮಭಾವ ಹಾಗೂ ಸಮಾನತೆಯ ಹೋರಾಟದ ಇತಿಹಾಸವಾಗಿದೆ. ಮಹಾತ್ಮ ಗಾಂಧಿಯವರ ಸರ್ವಧರ್ಮ ಸಮಭಾವದ ತತ್ವವೇ ನಮ್ಮ ರಾಜಕೀಯ ಬದುಕಿನ ಅಡಿಪಾಯ ಎಂದು ಹೇಳಿದರು.
ಚಿಕ್ಕಮಗಳೂರಿನ ಜನತೆ ಕೋಮುವಾದಿ ನಾಯಕರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಮಹತ್ವದ ಸಂದೇಶ ನೀಡಿದ್ದಾರೆ. ಈಗ ಆ ಸಂದೇಶವನ್ನು ಸಮಾಜದ ಪ್ರತಿಯೊಂದು ಹಂತಕ್ಕೂ ತಲುಪಿಸುವ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ. ಕೋಮುವಾದಿ ನಾಯಕರ ಸೋಲು ಚುನಾವಣೆಗೆ ಸೀಮಿತವಾಗಬಾರದು; ಕೋಮುವಾದಿ ರಾಜಕಾರಣದ ಸೋಲು ಸಮಾಜದ ಗೆಲುವಾಗಬೇಕು ಎಂದು ಬಿ.ಕೆ. ಹರಿಪ್ರಸಾದ್ ಕರೆ ನೀಡಿದರು.
Communal politics must also be defeated.
Leave a comment