ಚಿಕ್ಕಮಗಳೂರು: ಜಾನುವಾರುಗಳನ್ನು ಕಳ್ಳತನ ಮಾಡಿ, ಹಿಂಸಾತ್ಮಕವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಚಿಕ್ಕಮಗಳೂರು 1ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ತಲಾ ಮೂರು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ₹1,58,050 ದಂಡ ವಿಧಿಸಿದೆ.
ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಿಕ್ಕರಣೆ ಗ್ರಾಮದಲ್ಲಿ 2022ರ ಏಪ್ರಿಲ್ 8ರಂದು ಬೆಳಗಿನ ಜಾವ ಸುಮಾರು 3.30ಕ್ಕೆ ಘಟನೆ ನಡೆದಿತ್ತು. ಬಾಬು ಎಂಬುವವರಿಗೆ ಸೇರಿದ ಸುಮಾರು ₹80 ಸಾವಿರ ಮೌಲ್ಯದ ಒಂದು ಹಸು ಹಾಗೂ ಎರಡು ಹೆಣ್ಣು ಕರುಗಳನ್ನು ಕಳವು ಮಾಡಿ, ಮಾಂಸಕ್ಕಾಗಿ ಸಾಗಿಸಲಾಗುತ್ತಿತ್ತು.
ಆರೋಪಿಗಳು ಜಾನುವಾರುಗಳನ್ನು ಕೆಎ-18-ಬಿ-1244 ಸಂಖ್ಯೆಯ ಮಹೀಂದ್ರಾ ಪಿಕ್‌ಅಪ್ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು, ವಾಹನದ ದೀಪಗಳನ್ನು ಹಾಕದೆ ಟಾರ್ಚ್ ಬೆಳಕಿನಲ್ಲಿ ಸಾಗಿಸುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದರು. ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಮೊದಲ ಆರೋಪಿ ಜಬ್ಬರ್ ವಾಹನವನ್ನು ಅತಿವೇಗವಾಗಿ ಹಿಮ್ಮುಖವಾಗಿ ಚಲಾಯಿಸಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಗೆ ಪಲ್ಟಿಯಾಗಿ ಮುಂಭಾಗದ ಗಾಜು ಒಡೆದಿತ್ತು. ಬಳಿಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಳವು ಮಾಡಲಾಗಿದ್ದ ಮೂರು ಜಾನುವಾರುಗಳು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಳೆಹೊನ್ನೂರು ಠಾಣೆಯಲ್ಲಿ ಕ್ರೈಂ ನಂ.39/2022ರಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅನುರಾಧ ಹೆಚ್.ಟಿ. ಅವರು ಆರೋಪಿಗಳಾದ ಜಬ್ಬರ್ ಬಿನ್ ಎಂ. ಹಸೈನರ್ (42) ಹಾಗೂ ಶಿವಣ್ಣ ಬಿನ್ ನಾಗಪ್ಪಶೆಟ್ಟಿ (43) ಅವರು ಅಪರಾಧ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದ್ದಾರೆ.
ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 12ರಡಿ ಇಬ್ಬರಿಗೂ ತಲಾ ಮೂರು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ಮೂರು ಜಾನುವಾರುಗಳಿಗೆ ತಲಾ ₹50 ಸಾವಿರದಂತೆ ಒಟ್ಟು ₹1.50 ಲಕ್ಷ ದಂಡ ವಿಧಿಸಲಾಗಿದೆ.
ಇದಲ್ಲದೆ, ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಕಲಂ 379ರಡಿ ಇಬ್ಬರಿಗೂ ತಲಾ ನಾಲ್ಕು ತಿಂಗಳ ಜೈಲು ಹಾಗೂ ತಲಾ ₹5 ಸಾವಿರ ದಂಡ ವಿಧಿಸಲಾಗಿದೆ. ಮೊದಲ ಆರೋಪಿಗೆ ಐಪಿಸಿ ಕಲಂ 279ರಡಿ ₹1 ಸಾವಿರ ಮತ್ತು ಮೋಟಾರು ವಾಹನ ಕಾಯ್ದೆಯ ಕಲಂ 196ರಡಿ ₹2 ಸಾವಿರ ದಂಡ ವಿಧಿಸಲಾಗಿದೆ. ಪ್ರಾಣಿಗಳಿಗೆ ಹಿಂಸಾಚಾರ ತಡೆ ಕಾಯ್ದೆಯಡಿ ಇಬ್ಬರಿಗೂ ತಲಾ ₹50 ದಂಡ ವಿಧಿಸಲಾಗಿದೆ.
ದಂಡ ಪಾವತಿಸಲು ವಿಫಲರಾದಲ್ಲಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯವು 2026ರ ಅಕ್ಟೋಬರ್ 31ರಂದು ತೀರ್ಪು ನೀಡಿದೆ.
ಪ್ರಕರಣದ ತನಿಖೆಯನ್ನು ಬಾಳೆಹೊನ್ನೂರು ಠಾಣೆಯ ಪಿಎಸ್‌ಐಗಳಾದ ನಿತ್ಯಾನಂದ ಗೌಡ ಹಾಗೂ ದಿಲೀಪ್ ಕುಮಾರ್ ನಡೆಸಿದ್ದರು. ತನಿಖಾ ಸಹಾಯಕರಾಗಿ ನಾಗರಾಜ್ ಹೆಚ್.ಸಿ. 276 ಕಾರ್ಯನಿರ್ವಹಿಸಿದ್ದರು. ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಹಾಜರುಪಡಿಸುವಲ್ಲಿ ಸುನೀಲ್ ಕುಮಾರ್ ಸಿಪಿಸಿ-179 ಸಹಕರಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ದಯಾನಂದ ಶಿರೋಳ ವಾದ ಮಂಡಿಸಿದ್ದರು.
Two sentenced to 3 years in jail fined ₹1.58 lakh in cattle theft case
Leave a comment