ಕೊಪ್ಪ: ಮನೆಯ ಹಿಂಬಾಗಿಲು ತಳ್ಳಿ ಒಳನುಗ್ಗಿದ ಕಳ್ಳರು ಸುಮಾರು 3.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ಕಳವು ಮಾಡಿರುವ ಘಟನೆ ಕೊಪ್ಪ ತಾಲ್ಲೂಕಿನ ನರಸೀಪುರ ಗ್ರಾಮದ ಬೆಳಗೊಳದಲ್ಲಿ ನಡೆದಿದೆ.
ಬೆಳಗೊಳದ ನರಸೀಪುರ ಗ್ರಾಮದಲ್ಲಿ ಬಿ.ಎಸ್. ಚಂದ್ರಶೇಖರ್ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಿರುವ 44 ವರ್ಷದ ಮಹಿಳೆಯೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದೆ.
ಅಕ್ಟೋಬರ್ 30ರಂದು ಬೆಳಿಗ್ಗೆ ಎಂದಿನಂತೆ ಸುಮಾರು 10.30ಕ್ಕೆ ಮನೆಗೆ ಬೀಗ ಹಾಕಿಕೊಂಡು ಮನೆಯ ಮಾಲೀಕರ ಮನೆಗೆ ತೆರಳಿದ್ದ ಮಹಿಳೆ, ಮಧ್ಯಾಹ್ನ 1.15ರ ವೇಳೆಗೆ ವಾಪಸ್ ಬಂದಿದ್ದಾರೆ. ಈ ವೇಳೆ ಮನೆಯ ಬೀಗ ತೆಗೆದು ಒಳಗೆ ಹೋದಾಗ ಹಾಸಿಗೆಯ ಬಟ್ಟೆಗಳನ್ನು ಎಳೆದಾಡಿ, ಗಾಡ್ರೇಜ್ ಬೀರುವಿನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಹಾಕಿರುವುದು ಕಂಡುಬಂದಿದೆ.
ಅನುಮಾನಗೊಂಡು ಮನೆಯ ಹಿಂಬಾಗಿಲ ಬಳಿ ಪರಿಶೀಲಿಸಿದಾಗ ಬಾಗಿಲನ್ನು ತಳ್ಳಿ ಕಳ್ಳರು ಒಳನುಗ್ಗಿರುವುದು ಗೊತ್ತಾಗಿದೆ. ಬೀರುವಿನಲ್ಲಿದ್ದ ಸುಮಾರು 26 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು, 4 ಗ್ರಾಂ ತೂಕದ ಒಂದು ಜೊತೆ ಓಲೆಗಳು, 4 ಗ್ರಾಂ ತೂಕದ ಒಂದು ಉಂಗುರ, 1 ಗ್ರಾಂ ತೂಕದ ಒಂದು ಓಲೆ ಹಾಗೂ 2,500 ರೂ. ನಗದು ಹಣವನ್ನು ಕಳ್ಳರು ಕಳವು ಮಾಡಿದ್ದಾರೆ.
ಕಳುವಾಗಿರುವ ಒಟ್ಟು 35 ಗ್ರಾಂ ಚಿನ್ನಾಭರಣಗಳ ಅಂದಾಜು ಮೌಲ್ಯ ಸುಮಾರು 3.50 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಮಹಿಳೆ ಅಕ್ಟೋಬರ್ 30ರಂದು ಸಂಜೆ ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರು ಹಾಗೂ ಕಳುವಾಗಿರುವ ಸ್ವತ್ತಿನ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
Jewelry and cash worth Rs 3.50 lakh stolen
Leave a comment