ಚಿಕ್ಕಮಗಳೂರು: ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿರುವ ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಲೈಫ್ಲೈನ್ ಫೀಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಅದ್ಧೂರಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೂ ಮುನ್ನ ನಗರದ ಆಜಾದ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಸಾಧಕರನ್ನು ವಿಶೇಷ ಮೆರವಣಿಗೆಯಲ್ಲಿ ಕರೆತರಲಾಯಿತು. ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಕ್ರೀಡಾಭಿಮಾನಿಗಳು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಕ್ರೀಡಾಪಟುಗಳ ಸಾಧನೆಯನ್ನು ಸಂಭ್ರಮಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಡಿ. ತಮ್ಮಯ್ಯ, ಗೆಲುವು ಎನ್ನುವುದು ಒಂದೇ ದಿನದ ಸಾಧನೆಯಲ್ಲ. ಅದರ ಹಿಂದೆ ಹಲವು ವರ್ಷಗಳ ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಶಿಸ್ತು, ತ್ಯಾಗ ಮತ್ತು ದೃಢಸಂಕಲ್ಪ ಇರುತ್ತದೆ. ಈ ಎಲ್ಲ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಕ್ರೀಡಾಪಟುಗಳು ಸಾಧನೆಯ ಶಿಖರವೇರಲು ಸಾಧ್ಯ ಎಂದು ಹೇಳಿದರು.
ಸರ್ಕಾರಗಳು ಕ್ರೀಡಾ ಸಾಧಕರನ್ನು ಗುರುತಿಸಿ ಗೌರವಿಸುವುದು ಸಾಮಾನ್ಯ. ಆದರೆ, ಜಿಲ್ಲೆಯ ಯಶಸ್ವಿ ಉದ್ಯಮಿಯಾಗಿರುವ ಲೈಫ್ಲೈನ್ ಫೀಡ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಕಿಶೋರ್ ಕುಮಾರ್ ಹೆಗಡೆ ಅವರು ತಮ್ಮ ಸಂಸ್ಥೆಯ ವತಿಯಿಂದ ಒಂದು ಕೋಟಿಗೂ ಅಧಿಕ ಮೊತ್ತವನ್ನು ವೆಚ್ಚ ಮಾಡಿ ಕ್ರೀಡಾಪಟುಗಳು, ತರಬೇತುದಾರರು ಹಾಗೂ ಮಾರ್ಗದರ್ಶಕ ಓಟಗಾರರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಸಾಧನೆ ಮಾಡಿದ ರಕ್ಷಿತಾ ರಾಜು, ರವಿ ರಂಗೋಲಿ, ರಾಧಾ ವೆಂಕಟೇಶ್ ಹಾಗೂ ರವಣಿ ವಲಸನೈನಿ ಅವರ ಸಾಧನೆ ಇಡೀ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಪದಕ ಗೆಲ್ಲುವುದಷ್ಟೇ ಕ್ರೀಡೆಯ ಉದ್ದೇಶವಲ್ಲ; ಕ್ರೀಡೆಯಲ್ಲಿ ಭಾಗವಹಿಸುವುದೇ ಮೊದಲ ಸಾಧನೆ. ಕ್ರೀಡೆಯಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸದೃಢತೆ, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳು ಬೆಳೆಯುತ್ತವೆ ಎಂದು ತಿಳಿಸಿದರು.
ಯುವಜನರು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಿನ ಸಮಯ ಮೀಸಲಿಡದೆ ಪ್ರತಿದಿನ ಸ್ವಲ್ಪ ಸಮಯವನ್ನಾದರೂ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಿಗೆ ಮೀಸಲಿಡಬೇಕು. ಸಾಮಾಜಿಕ ಜಾಲತಾಣಗಳಲ್ಲಿರುವ ಉತ್ತಮ ವಿಚಾರಗಳನ್ನು ಮಾತ್ರ ಸ್ವೀಕರಿಸಿ, ಯುವಜನರ ಭವಿಷ್ಯಕ್ಕೆ ಮಾರಕವಾಗುವ ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಕ್ರೀಡಾ ಪ್ರತಿಭೆಗಳನ್ನು ಗುರುತಿಸುವುದು, ಅವರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಮತ್ತು ಸಾಧಕರನ್ನು ಗೌರವಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಚಿಕ್ಕಮಗಳೂರಿನ ಶತಮಾನೋತ್ಸವ ಅಥ್ಲೆಟಿಕ್ಸ್ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ನಾಲ್ಕು ತಿಂಗಳಲ್ಲಿ ಕ್ರೀಡಾಪಟುಗಳ ಬಳಕೆಗೆ ಲೋಕಾರ್ಪಣೆಗೊಳ್ಳಲಿದೆ. ಇಂದಾವರದ ಪ್ರಾಧಿಕಾರದ ಬಡಾವಣೆಯಲ್ಲಿ ಸುಮಾರು ಎಂಟು ಎಕರೆ ಜಾಗವನ್ನು ಕ್ರಿಕೇಟ್ ಮೀಸಲಿಡಲಾಗಿದ್ದು, ಅದನ್ನು ಕೂಡ ಶೀಘ್ರ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತೆ ರಕ್ಷಿತಾ ರಾಜು, ಗೆಲುವು ಸಾಧಕನನ್ನು ಎತ್ತರಕ್ಕೆ ಕೊಂಡೊಯ್ದರೆ, ಸೋಲು ಬದುಕಿನ ಅಮೂಲ್ಯ ಪಾಠಗಳನ್ನು ಕಲಿಸುತ್ತದೆ. ಗೆಲುವು ಎಷ್ಟು ಮುಖ್ಯವೋ ಸೋಲೂ ಅಷ್ಟೇ ಮುಖ್ಯ. ಸೋಲಿನ ನೋವಿನಿಂದಲೇ ಮುಂದಿನ ಸಾಧನೆಗೆ ಬೇಕಾದ ಶಕ್ತಿ ಮತ್ತು ಆತ್ಮವಿಶ್ವಾಸ ದೊರೆಯುತ್ತದೆ ಎಂದು ಭಾವುಕರಾದರು.
೨೦೧೮ರಲ್ಲಿ ಜಕಾರ್ತದಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದೆ. ೨೦೨೩ರಲ್ಲಿ ಚೀನಾದಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಯೂ ಚಿನ್ನದ ಪದಕ ಗಳಿಸಿದ್ದೆ. ೨೦೨೪ರ ಪ್ಯಾರಾ ಒಲಿಂಪಿಕ್ಸ್ನಲ್ಲಿ ಭಾಗವಹಿಸಿ ಐದನೇ ಸ್ಥಾನ ಪಡೆದಿದ್ದೆ. ವಿಶ್ವ ಚಾಂಪಿಯನ್ಶಿಪ್ನಲ್ಲಿಯೂ ಎರಡು ಬಾರಿ ಐದನೇ ಸ್ಥಾನ ಗಳಿಸಿದ್ದೆ. ಇಷ್ಟೆಲ್ಲ ಸಾಧನೆಗಳ ನಂತರ ೨೦೨೬ರ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರೂ, ಉಡುಪಿನ ನಿಯಮಕ್ಕೆ ಸಂಬಂಧಿಸಿದ ವಿವಾದದಿಂದಾಗಿ ಆ ಪದಕವನ್ನು ಮರಳಿ ಪಡೆಯಲಾಯಿತು ಎಂದು ತಮ್ಮ ನೋವನ್ನು ಹಂಚಿಕೊಂಡರು.
ಮೂರು ವರ್ಷಗಳ ಪರಿಶ್ರಮ, ಬೆವರು ಮತ್ತು ಕನಸುಗಳು ಕಣ್ಣೆದುರೇ ಕೈತಪ್ಪಿದಾಗ ಅನುಭವಿಸಿದ ನೋವನ್ನು ವರ್ಣಿಸಲು ಸಾಧ್ಯವಿಲ್ಲ. ಆದರೆ ಆ ಸಂದರ್ಭದಲ್ಲಿ ಲೈಫ್ಲೈನ್ ಫೀಡ್ಸ್ ಸಂಸ್ಥೆಯ ಕಿಶೋರ್ ಕುಮಾರ್ ಹೆಗಡೆ ಅವರು ದೂರವಾಣಿ ಮೂಲಕ ಧೈರ್ಯ ತುಂಬಿ, ‘ನಿನ್ನ ಮುಂದಿನ ಗುರಿ ಚಿನ್ನದ ಪದಕವಾಗಿರಲಿ. ನೀನು ಸೋತಿಲ್ಲ, ನಿನ್ನ ಮುಂದೆ ದೊಡ್ಡ ಗೆಲುವಿದೆ’ ಎಂದು ಪ್ರೋತ್ಸಾಹಿಸಿದರು. ಆ ಮಾತುಗಳು ಕುಗ್ಗಿಹೋಗಿದ್ದ ಆತ್ಮವಿಶ್ವಾಸಕ್ಕೆ ಹೊಸ ಶಕ್ತಿ ನೀಡಿದವು ಎಂದರು.
ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡು, ದೃಷ್ಟಿದೋಷದ ಸವಾಲುಗಳ ನಡುವೆಯೂ ಬದುಕಿನಲ್ಲಿ ಹಲವು ಕಷ್ಟಗಳನ್ನು ಎದುರಿಸಿದ್ದೇನೆ. ಆದರೆ ಕ್ರೀಡೆಯೇ ನನ್ನ ಬದುಕಿಗೆ ಹೊಸ ದಾರಿ ತೋರಿಸಿತು. ನನ್ನ ಕೋಚ್ ರಾಹುಲ್ ಬಾಲಕೃಷ್ಣ, ಮಾರ್ಗದರ್ಶಕ ಓಟಗಾರರು ಹಾಗೂ ನನ್ನ ಬೆನ್ನಿಗೆ ನಿಂತ ಕಿಶೋರ್ ಕುಮಾರ್ ಹೆಗಡೆ ಅವರಂತಹವರು ನನ್ನ ಸಾಧನೆಯ ಹಿಂದಿನ ಪ್ರಮುಖ ಶಕ್ತಿಯಾಗಿದ್ದಾರೆ. ನನ್ನ ಕೈತಪ್ಪಿದ ಪದಕ ಭಾರತಕ್ಕೇ ಸೇರಿದೆ ಎಂಬ ಸಮಾಧಾನವಿದೆ. ಮುಂದಿನ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ದೇಶ, ರಾಜ್ಯ ಹಾಗೂ ಚಿಕ್ಕಮಗಳೂರಿಗೆ ತಂದುಕೊಡುವ ಸಂಕಲ್ಪ ಮಾಡಿದ್ದೇನೆ. ಒಲಿಂಪಿಕ್ಸ್ ಪದಕ ಗೆಲ್ಲುವವರೆಗೂ ಕ್ರೀಡೆಯನ್ನು ಬಿಡುವುದಿಲ್ಲ ಎಂದು ಘೋಷಿಸಿದರು.
ಲೈಫ್ಲೈನ್ ಫೀಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಕೆ. ಕಿಶೋರ್ ಕುಮಾರ್ ಹೆಗಡೆ ಮಾತನಾಡಿ, ಕ್ರೀಡಾಪಟುಗಳು ಮಾಡಿರುವ ಸಾಧನೆಗೆ ಹೋಲಿಸಿದರೆ ಸಂಸ್ಥೆ ನೀಡುತ್ತಿರುವ ನಗದು ಬಹುಮಾನ ಅತ್ಯಂತ ಸಣ್ಣ ಕೊಡುಗೆಯಷ್ಟೇ. ಅವರ ಪರಿಶ್ರಮಕ್ಕೆ ಗೌರವ ಸಲ್ಲಿಸುವ ಹಾಗೂ ಮುಂದಿನ ಸಾಧನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ನೆರವು ನೀಡಲಾಗುತ್ತಿದೆ ಎಂದರು.
ದೃಷ್ಟಿದೋಷವುಳ್ಳ ಕ್ರೀಡಾಪಟುಗಳು ಸಾಧನೆ ಮಾಡಲು ಅವರೊಂದಿಗೆ ವರ್ಷಪೂರ್ತಿ ಹೆಜ್ಜೆ ಹಾಕುವ ಗೈಡ್ ರನ್ನರ್ಗಳ ಪಾತ್ರ ಅತ್ಯಂತ ಮಹತ್ವದ್ದು. ಕ್ರೀಡಾಪಟುಗಳೊಂದಿಗೆ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ತರಬೇತಿಯಲ್ಲಿ ಪಾಲ್ಗೊಳ್ಳುವ ಮಾರ್ಗದರ್ಶಕ ಓಟಗಾರರ ತ್ಯಾಗ ಮತ್ತು ಪರಿಶ್ರಮವನ್ನು ಸಮಾಜ ಹಾಗೂ ಸರ್ಕಾರ ಗುರುತಿಸಬೇಕು. ಅವರಿಗೆ ಸೂಕ್ತ ಸೌಲಭ್ಯ, ಗೌರವ ಮತ್ತು ಪ್ರೋತ್ಸಾಹಧನ ದೊರೆಯಬೇಕು ಎಂದು ಹೇಳಿದರು.
ಅದೇ ರೀತಿ ಕ್ರೀಡಾಪಟುಗಳನ್ನು ರೂಪಿಸುವ ತರಬೇತುದಾರರ ಪರಿಶ್ರಮಕ್ಕೂ ಮನ್ನಣೆ ಸಿಗಬೇಕು. ಕ್ರೀಡಾಪಟುಗಳಿಗೆ ಬಹುಮಾನ ನೀಡುವುದರ ಜತೆಗೆ ಗೈಡ್ ರನ್ನರ್ಗಳು ಹಾಗೂ ಕೋಚ್ಗಳಿಗೂ ಪ್ರತ್ಯೇಕ ಪ್ರೋತ್ಸಾಹಧನ ನೀಡಿರುವುದು ಇದೇ ಉದ್ದೇಶದಿಂದ. ಬಹುಮಾನದ ಮೊತ್ತದ ಶೇ.೭೦ರಷ್ಟನ್ನು ಗೈಡ್ ರನ್ನರ್ಗಳಿಗೆ ನೀಡುವಂತೆ ಸಂಸ್ಥೆಯಲ್ಲಿಯೂ ಒತ್ತಾಯಿಸಿದ್ದೇನೆ. ಕ್ರೀಡಾಪಟುಗಳ ತರಬೇತಿ ಮತ್ತು ಆಹಾರಕ್ಕೆ ಯಾವುದೇ ಆರ್ಥಿಕ ಅಡಚಣೆಯಾಗದಂತೆ ಸಂಸ್ಥೆ ನಿರಂತರ ನೆರವು ನೀಡಲಿದೆ ಎಂದು ತಿಳಿಸಿದರು.
೨೦೨೮ರ ಅಮೆರಿಕದ ಒಲಿಂಪಿಕ್ಸ್ಗೆ ಸಂಸ್ಥೆಯ ಬೆಂಬಲದಲ್ಲಿರುವ ಸುಮಾರು ಎಂಟು ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ಗುರಿಯಿದೆ. ಅಲ್ಲದೆ, ಬಡ ಕುಟುಂಬಗಳ ಹಿನ್ನೆಲೆಯಿಂದ ಬಂದಿರುವ ೧೨ರಿಂದ ೧೪ ವರ್ಷದ ಪ್ರತಿಭಾವಂತ ಮಕ್ಕಳಿಗೂ ಈಗಿನಿಂದಲೇ ತರಬೇತಿ ನೀಡಿ, ೨೦೩೬ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್ ನಡೆದರೆ ದೇಶಕ್ಕೆ ಪದಕ ತರುವಂತೆ ರೂಪಿಸುವ ಕನಸಿದೆ ಎಂದರು.
ಲೈಫ್ಲೈನ್ ಫೀಡ್ಸ್ ಸಂಸ್ಥೆ ಕ್ರೀಡಾಪಟುಗಳಿಗೆ ಮಾತ್ರವಲ್ಲದೆ, ಅವರ ತರಬೇತುದಾರರು ಮತ್ತು ಮಾರ್ಗದರ್ಶಕ ಓಟಗಾರರಿಗೂ ಬೆಂಬಲವಾಗಿ ನಿಲ್ಲಲಿದೆ. ಇಂತಹ ಕಾರ್ಯಗಳಿಗೆ ಚಿಕ್ಕಮಗಳೂರಿನ ಜನತೆ ನೀಡುತ್ತಿರುವ ಪ್ರೀತಿ ಮತ್ತು ಆಶೀರ್ವಾದ ಮುಂದುವರಿಯಲಿ ಎಂದು ಮನವಿ ಮಾಡಿದರು.
ಮುಖ್ಯ ತರಬೇತುದಾರ ರಾಹುಲ್ ಬಾಲಕೃಷ್ಣ ಮಾತನಾಡಿ, ತಾವು ಕೂಡ ರಾಷ್ಟ್ರೀಯ ಮಟ್ಟದ ಪದಕ ವಿಜೇತರಾಗಿದ್ದು, ಕ್ರೀಡಾ ಕೋಟಾದಡಿ ರೈಲ್ವೆಯಲ್ಲಿ ಉದ್ಯೋಗ ಪಡೆದಿದ್ದೇನೆ. ಗಾಯದ ಸಮಸ್ಯೆ ಹಾಗೂ ಆರ್ಥಿಕ ತೊಂದರೆಗಳಿಂದ ಸ್ವಂತ ಕ್ರೀಡಾ ಕನಸನ್ನು ಮುಂದುವರಿಸಲು ಸಾಧ್ಯವಾಗದಿದ್ದರೂ, ವಿಶೇಷಚೇತನ ಕ್ರೀಡಾಪಟುಗಳನ್ನು ದೇಶದ ಮಟ್ಟದಲ್ಲಿ ಸಾಧಕರನ್ನಾಗಿ ರೂಪಿಸುವ ಸಂಕಲ್ಪ ಮಾಡಿದೆ ಎಂದರು.
೨೦೧೮ರಲ್ಲಿ ರಕ್ಷಿತಾ ರಾಜು ಮತ್ತು ರಾಧಾ ವೆಂಕಟೇಶ್ ಅವರನ್ನು ತರಬೇತಿಗೆ ಕರೆತಂದು ಪ್ಯಾರಾ ಏಷ್ಯನ್ ಗೇಮ್ಸ್ಗೆ ಸಿದ್ಧಪಡಿಸಲಾಯಿತು. ಬಳಿಕ ಕಿಶೋರ್ ಕುಮಾರ್ ಹೆಗಡೆ ಅವರ ನೆರವು ದೊರೆತಿದ್ದು, ಹೆಚ್ಚಿನ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಸಾಧ್ಯವಾಯಿತು. ೨೦೨೩ರಲ್ಲಿ ಇನ್ನಷ್ಟು ಮಕ್ಕಳನ್ನು ಸಂಸ್ಥೆಯ ಪ್ರಾಯೋಜಕತ್ವಕ್ಕೆ ಸೇರಿಸಿಕೊಂಡರು. ಇಂದು ಲೈಫ್ಲೈನ್ ಫೀಡ್ಸ್ ನೆರವಿನಿಂದ ಏಳು ಪದಕಗಳು ದೇಶಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ರವಿ ರಂಗೋಲಿ ಅವರು ೨೮ ವರ್ಷ ವಯಸ್ಸಿನವರೆಗೂ ಸೂಕ್ತ ಪ್ರಾಯೋಜಕತ್ವವಿಲ್ಲದೆ ಕಷ್ಟಪಟ್ಟು ತರಬೇತಿ ಪಡೆದಿದ್ದರು. ಊಟ ಮತ್ತು ತರಬೇತಿ ವೆಚ್ಚಕ್ಕೂ ಪರದಾಡುತ್ತಿದ್ದ ಅವರಿಗೆ ಕಿಶೋರ್ ಹೆಗಡೆ ಅವರ ನೆರವು ದೊರೆತ ನಂತರ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲಲು ಸಾಧ್ಯವಾಯಿತು. ಇಂದು ಅವರು ಸರ್ಕಾರಿ ಉದ್ಯೋಗವನ್ನೂ ಪಡೆದಿದ್ದಾರೆ. ರಾಧಾ ವೆಂಕಟೇಶ್ ಅವರ ಸಾಧನೆಯ ಹಿಂದೆಯೂ ಇದೇ ರೀತಿಯ ಪರಿಶ್ರಮವಿದೆ ಎಂದರು.
ಕ್ರೀಡಾ ಕ್ಷೇತ್ರದಲ್ಲಿ ಪ್ರತಿಭೆ ಮತ್ತು ಪರಿಶ್ರಮದ ಜತೆಗೆ ಆರ್ಥಿಕ ಬೆಂಬಲವೂ ಅತ್ಯಗತ್ಯ. ಲೈಫ್ಲೈನ್ ಫೀಡ್ಸ್ ಸಂಸ್ಥೆಯ ನೆರವಿಲ್ಲದಿದ್ದರೆ ಹಲವು ಕ್ರೀಡಾಪಟುಗಳ ಸಾಧನೆ ಇಷ್ಟು ಎತ್ತರಕ್ಕೆ ತಲುಪುವುದು ಕಷ್ಟವಾಗುತ್ತಿತ್ತು. ಮುಂದಿನ ೨೦೨೮ರ ಒಲಿಂಪಿಕ್ಸ್ನಲ್ಲಿ ಸಂಸ್ಥೆಯ ಬೆಂಬಲದಲ್ಲಿರುವ ಕ್ರೀಡಾಪಟುಗಳು ಪದಕ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ಯಾರಾ ಏಷ್ಯನ್ ಗೇಮ್ಸ್ ಪದಕ ವಿಜೇತರಾದ ರಕ್ಷಿತಾ ರಾಜು, ರವಿ ರಂಗೋಲಿ, ರಾಧಾ ವೆಂಕಟೇಶ್ ಹಾಗೂ ರವಣಿ ವಲಸನೈನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡಾ ಸಾಧಕರಿಗೆ ನಗದು ಬಹುಮಾನ ಹಾಗೂ ಪ್ರೋತ್ಸಾಹಧನ ವಿತರಿಸಲಾಯಿತು. ತರಬೇತುದಾರರು ಮತ್ತು ಗೈಡ್ ರನ್ನರ್ಗಳನ್ನೂ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಎಐಟಿ ಸಂಸ್ಥೆಯ ನಿರ್ದೇಶಕ ಡಾ. ಸಿ.ಕೆ. ಸುಬ್ಬರಾಯ್, ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್, ಉಪಾಧ್ಯಕ್ಷ ಮಲ್ಲೇಶ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್, ಮಾಜಿ ಸಚಿವ ಸಿ.ಟಿ. ರವಿ ಅವರ ಪುತ್ರ ಸಮರ್ಥ್ ಸೂರ್ಯ, ಸಂಸ್ಥೆಯ ನಿರ್ದೇಶಕರಾದ ನಂದನ್ ಹೆಗಡೆ, ಅರ್ಜುನ್ ಹೆಗಡೆ, ಸುಲೇಖ.ಕೆ ಹೆಗಡೆ, ರಾಧಾ ಸುಂದರೇಶ್, ಸೇರಿದಂತೆ ಹಲವು ಗಣ್ಯರು, ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
Para Asian Games medal winners felicitated by Lifeline Feeds
Leave a comment