ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಬರದ ಛಾಯೆ ತೀವ್ರವಾಗಿ ಆವರಿಸುತ್ತಿರುವ ಹಿನ್ನೆಲೆಯಲ್ಲಿ, ಮಳೆರಾಯನ ಕೃಪೆಗಾಗಿ ಗ್ರಾಮಸ್ಥರೆಲ್ಲರೂ ಸೇರಿ ಕಪ್ಪೆಗಳಿಗೆ ಸಂಪ್ರದಾಯಬದ್ಧವಾಗಿ ಮದುವೆ ಮಾಡಿಸಿ, ಊರಲ್ಲಿ ಮೆರವಣಿಗೆ ನಡೆಸಿ ಬಳಿಕ ಭರ್ಜರಿ ಸಾಮೂಹಿಕ ಬಾಡೂಟ ಸವಿದ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಿಲೇಗೌಡನ ಕೊಪ್ಪಲು ಗ್ರಾಮದಲ್ಲಿ ಭಾನುವಾರ (ಅ.11) ನಡೆದಿದೆ.
ಗ್ರಾಮದ ಶ್ರೀ ಸೇವಾಲಾಲ್ ಸಮಿತಿಯ ನೇತೃತ್ವದಲ್ಲಿ ನಡೆದ ಈ ವಿಶಿಷ್ಟ ಆಚರಣೆಯಲ್ಲಿ ಒಟ್ಟು ಮೂರು ಕಪ್ಪೆಗಳನ್ನು ಬಳಸಿಕೊಳ್ಳಲಾಗಿತ್ತು. ಗ್ರಾಮದ ಗ್ರಾಮದೇವತೆ ಶ್ರೀ ಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಕಪ್ಪೆಗಳನ್ನು ಇರಿಸಿ, ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು.
ಕಪ್ಪೆಗಳ ಮದುವೆಯ ಶುಭ ಸಂದರ್ಭದಲ್ಲಿ ಇಡೀ ಗ್ರಾಮಸ್ಥರಿಗೆ ಬೃಹತ್ ಬಾಡೂಟ ಏರ್ಪಡಿಸಲಾಗಿತ್ತು. ಇದಕ್ಕಾಗಿ ಬರೋಬ್ಬರಿ 200 ರಾಗಿ ಮುದ್ದೆಗಳನ್ನು ಹಾಗೂ ಸುಮಾರು 40 ರಿಂದ 50 ನಾಟಿ ಕೋಳಿಗಳನ್ನು ಬಳಸಿ ಚಿಕನ್ ಸಾಂಬಾರ್ ಸಿದ್ಧಪಡಿಸಲಾಗಿತ್ತು. ಕಪ್ಪೆಗಳ ಮದುವೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಗ್ರಾಮಸ್ಥರು, ಮಹಿಳೆಯರು ಹಾಗೂ ಮಕ್ಕಳು ಒಂದೆಡೆ ಸೇರಿ ಸಾಮೂಹಿಕವಾಗಿ ಬಾಡೂಟ ಸವಿದು ಮಳೆಗಾಗಿ ಪ್ರಾರ್ಥಿಸಿದರು.
ಭಾರತೀಯ ಗ್ರಾಮೀಣ ಸಂಸ್ಕೃತಿ ಹಾಗೂ ಜಾನಪದ ನಂಬಿಕೆಗಳಲ್ಲಿ ಮಳೆ ಬಾರದಿದ್ದಾಗ ಕಪ್ಪೆಗಳ ಮದುವೆ ಮಾಡಿಸುವುದು ಶತಮಾನಗಳಿಂದಲೂ ನಡೆದುಬಂದಿರುವ ನಂಬಿಕೆ. ಕಪ್ಪೆಗಳನ್ನು ಜಲಚರ ಹಾಗೂ ಮಳೆಯ ಸಂಕೇತವೆಂದು ಜಾನಪದದಲ್ಲಿ ಪರಿಗಣಿಸಲಾಗುತ್ತದೆ. ಕಪ್ಪೆಗಳು ಗಟ್ಟಿಯಾಗಿ ಶಬ್ದ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿದೆ. ಕಪ್ಪೆಗಳಿಗೆ ಮದುವೆ ಮಾಡಿಸುವುದರಿಂದ ವರುಣ ದೇವ ಹಾಗೂ ಇಂದ್ರ ದೇವ ಪ್ರಸನ್ನರಾಗಿ ತಕ್ಷಣವೇ ಧರೆಗೆ ಮಳೆ ತರುತ್ತಾರೆ ಎಂಬುದು ಗ್ರಾಮೀಣ ಭಾರತದ ಆಳವಾದ ನಂಬಿಕೆ ಎನ್ನಲಾಗುತ್ತದೆ.
A traditional wedding for frogs to invoke the Rain God’s grace.
Leave a comment