ತರೀಕೆರೆ: ತಾಲೂಕಿನ ದುಗ್ಗಲಾಪುರ ಗ್ರಾಮದ ಅಡಿಕೆ ತೋಟವೊಂದರಿಂದ ಸುಮಾರು 20 ಕ್ವಿಂಟಾಲ್ ಹಸಿ ಅಡಿಕೆಯನ್ನು ಕಳವು ಮಾಡಿರುವ ಘಟನೆ ಅ. 10ರಂದು ಬೆಳಕಿಗೆ ಬಂದಿದೆ. ಕಳವಾದ ಅಡಿಕೆಯ ಮೌಲ್ಯ ಸುಮಾರು ₹1.30 ಲಕ್ಷ ಎಂದು ಅಂದಾಜಿಸಲಾಗಿದೆ.
ಭದ್ರಾವತಿಯ ಗಾಂಧಿನಗರ ನಿವಾಸಿ ಜಿ. ಮೋಹನ್ (ಗೋಪಾಲ ಅವರ ಪುತ್ರ) ಎಂಬುವರಿಗೆ ಸೇರಿದ ದುಗ್ಗಲಾಪುರ ಗ್ರಾಮದ ಸರ್ವೆ ನಂ. 86ರಲ್ಲಿರುವ 4 ಎಕರೆ 28 ಗುಂಟೆ ಜಮೀನಿನಲ್ಲಿ ಸುಮಾರು 10 ವರ್ಷ ಪ್ರಾಯದ ಅಡಿಕೆ ತೋಟವಿದೆ. ಈ ತೋಟವನ್ನು ಬೆಲೆನಹಳ್ಳಿ ನಿವಾಸಿ ಸುರೇಶ್ ಅವರಿಗೆ ಚೇಣಿ ನೀಡಲಾಗಿತ್ತು. ಕಳೆದ ತಿಂಗಳು ಮೊದಲ ಕೊಯ್ಲು ನಡೆದಿದ್ದು, ಎರಡನೇ ಕೊಯ್ಲು ಬಾಕಿ ಇತ್ತು.
ಅ. 10ರಂದು ಬೆಳಿಗ್ಗೆ ಸುಮಾರು 12 ಗಂಟೆಯ ವೇಳೆಗೆ ಮೋಹನ್ ಅವರು ಭದ್ರಾವತಿಯ ತಮ್ಮ ಮನೆಯಲ್ಲಿದ್ದಾಗ, ಪಕ್ಕದ ತೋಟದ ಮಾಲೀಕ ಜೋಡಿಕೋಡಿಹಳ್ಳಿ ನಿವಾಸಿ ಎಚ್. ಗಣೇಶ್ ದೂರವಾಣಿ ಕರೆ ಮಾಡಿ, ಮೋಹನ್ ಅವರಿಗೆ ಸೇರಿದ ತೋಟದಿಂದ ಕೆಲವರು ಹಸಿ ಅಡಿಕೆಯನ್ನು ಕೊಯ್ದು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಹೋಗುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಕೂಡಲೇ ಮೋಹನ್ ಮತ್ತು ಅವರ ಅಳಿಯ ಸತೀಶ್ ಕುಮಾರ್ ಕಾರಿನಲ್ಲಿ ಭದ್ರಾವತಿಯಿಂದ ತರೀಕೆರೆ ಕಡೆಗೆ ತೆರಳಿದ್ದಾರೆ. ಲಕ್ಕವಳ್ಳಿ ಕ್ರಾಸ್ ಬಳಿ ಗಣೇಶ್ ಅವರನ್ನು ಭೇಟಿಯಾದಾಗ, ಹಸಿ ಅಡಿಕೆ ತುಂಬಿದ್ದ ಟ್ರ್ಯಾಕ್ಟರ್ ಭದ್ರಾವತಿ ಕಡೆಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಅದರಂತೆ ಬೆನ್ನಟ್ಟಿದಾಗ, ಬೆಲೆನಹಳ್ಳಿ ಹಿಂದಿನ ರಸ್ತೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಹಸಿ ಅಡಿಕೆ ಸಾಗಿಸುತ್ತಿರುವುದು ಕಂಡುಬಂದಿದೆ.
ಟ್ರ್ಯಾಕ್ಟರ್ ನಿಲ್ಲಿಸಲು ಪ್ರಯತ್ನಿಸಿದರೂ ಚಾಲಕ ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಚಾಲಕನನ್ನು ಗಮನಿಸಿದ ಮೋಹನ್ ಅವರಿಗೆ ಆತ ಪರಿಚಯದ ವ್ಯಕ್ತಿಯಾಗಿದ್ದು, ಜಯಲಕ್ಷ್ಮಿ ಅವರ ಅಳಿಯ ಮಣಿಕಂಠ ಎಂದು ಗುರುತಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಟ್ರ್ಯಾಕ್ಟರ್‌ನಲ್ಲಿ ಇತರರೂ ಇದ್ದರು ಎನ್ನಲಾಗಿದೆ.
ನಂತರ ತೋಟಕ್ಕೆ ತೆರಳಿ ಪರಿಶೀಲಿಸಿದಾಗ, ಸುಮಾರು 25 ಚೀಲಗಳಷ್ಟು, ಅಂದಾಜು 20 ಕ್ವಿಂಟಾಲ್ ಹಸಿ ಅಡಿಕೆ ಕಳವಾಗಿರುವುದು ಗೊತ್ತಾಗಿದೆ. ಇದರ ಮೌಲ್ಯ ಸುಮಾರು ₹1.30 ಲಕ್ಷ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಾವು ತೋಟದಲ್ಲಿ ಇಲ್ಲದ ಸಮಯದಲ್ಲಿ ಹಸಿ ಅಡಿಕೆಯನ್ನು ಕಳವು ಮಾಡಿಕೊಂಡು ಹೋದ ಆರೋಪದ ಮೇರೆಗೆ ಮಣಿಕಂಠ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೋಹನ್ ದೂರು ನೀಡಿದ್ದಾರೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಮೊ.ನಂ. 263/2026ರಲ್ಲಿ ಪ್ರಕರಣ ದಾಖಲಾಗಿದೆ.
20 quintals of raw arecanut stolen in Tarikere
Leave a comment