ಕೊಪ್ಪ: ಮನೆ ಮಾಲೀಕರು ಇಲ್ಲದ ಸಮಯ ನೋಡಿ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಕೊರಡಿಹಿತ್ಯುವಿನಲ್ಲಿ ಬೆಳಕಿಗೆ ಬಂದಿದೆ.
ಕುದುರೆಗುಂಡಿ ನಿವಾಸಿ ಅವಿನಾಶ್ ಪಿಂಟೋ ಎಂಬುವರು ಕೊರಡಿಹಿತ್ಯುವಿನಲ್ಲಿ ರಬ್ಬರ್ ತೋಟ ಮತ್ತು ಮನೆ ಖರೀದಿಸಿದ್ದು, ಅವರ ತಂದೆ-ತಾಯಿ ದಿನನಿತ್ಯ ತೋಟದ ಕೆಲಸಕ್ಕೆ ಬಂದು ಹೋಗುತ್ತಿದ್ದರು, ಎಂದಿನಂತೆ ದಿನಾಂಕ 28ರ ಸಂಜೆ ತೋಟದ ಕೆಲಸ ಮುಗಿಸಿ ಮನೆ ಹಾಗೂ ಮುಂಭಾಗದ ಗೇಟಿಗೆ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ವಾಪಸ್ ಬಂದು ನೋಡಿದಾಗ ಮನೆಯ ಮುಂಭಾಗದ ಮರದ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ.
ಒಳಗೆ ತೆರಳಿ ಪರಿಶೀಲಿಸಿದಾಗ, ಹಾಲ್ ಪಕ್ಕದ ಕೋಣೆಯಲ್ಲಿದ್ದ ಬೀರುವಿನ ಲಾಕ್ ಮುರಿದು ಅದರಲ್ಲಿದ್ದ ಸುಮಾರು 90 ಸಾವಿರ ರೂಪಾಯಿ ಮೌಲ್ಯದ 10 ಗ್ರಾಂ ಚಿನ್ನಾಭರಣಗಳು (ಬ್ರಾಸ್ಲೇಟ್ ಹಾಗೂ ಉಂಗುರ) ಮತ್ತು 50 ಸಾವಿರ ರೂಪಾಯಿ ನಗದು ಹಣ ಸೇರಿ ಒಟ್ಟು 1.40 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಸಂಬಂಧ ಅವಿನಾಶ್ ಪಿಂಟೋ ನೀಡಿದ ದೂರಿನ ಮೇರೆಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.
Gold and cash worth lakhs of rupees stolen
Leave a comment