ಚಿಕ್ಕಮಗಳೂರು: ಜಿಲ್ಲೆಯ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಹೆಚ್ಚಿಸುವುದು ಸೇರಿದಂತೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಅವರೊಂದಿಗೆ ಕ್ಷೇತ್ರದ ವಿದ್ಯುತ್ ಸಮಸ್ಯೆ ಕುರಿತು ಸಭೆ ನಡೆಸಿದ ಬಳಿಕ ಅವರು ಮಾತನಾಡಿ ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಸೂಚನೆ ಮೇರೆಗೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಚಿಕ್ಕಮಗಳೂರಿಗೆ ಆಗಮಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಜಿಲ್ಲೆಗೆ ಅಗತ್ಯವಿರುವ ವಿದ್ಯುತ್ ಪ್ರಮಾಣದಲ್ಲಿ ಕೆಲವು ಕಾರಣಗಳಿಂದ ಕೊರತೆ ಉಂಟಾಗಿದ್ದರಿಂದ, ಅದರಲ್ಲೂ ಬಯಲು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆ ಎದುರಾಗಿತ್ತು. ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿಯೂ ಇಂಧನ ಸಚಿವರ ಗಮನಕ್ಕೆ ತಂದು, ಮೌಖಿಕವಾಗಿ ಹಾಗೂ ಪತ್ರದ ಮೂಲಕ ಮನವಿ ಮಾಡಿದ್ದೆ ಎಂದು ತಿಳಿಸಿದರು.
ಸಭೆಯಲ್ಲಿ ಮೆಸ್ಕಾಂ ಎಂಡಿ, ಅಧೀಕ್ಷಕ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್ ಹಾಗೂ ಜೆಇಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸಲಾಗಿದೆ. ಈ ಹಿಂದೆ ಇದ್ದಂತೆ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಮುಂದುವರಿಸುವಂತೆ ಮನವಿ ಮಾಡಿದ್ದು, ಕಡಿತಗೊಳಿಸಲಾಗಿದ್ದ ಸುಮಾರು ಎರಡೂವರೆ ಗಂಟೆಗಳ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದರು.
ಇತ್ತೀಚೆಗೆ ಕಳಸಾಪುರ ಹಾಗೂ ನಿಡಘಟ್ಟದಲ್ಲಿ ೧*೧೦ ಎಂವಿಎ ಸಾಮರ್ಥ್ಯವನ್ನು ೨*೧೦ ಎಂವಿಎಗೆ ಹೆಚ್ಚಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಗಾಣದಾಳದಲ್ಲಿಯೂ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಅರಣ್ಯ ಇಲಾಖೆಯ ಅಗತ್ಯ ಅನುಮತಿ ಪಡೆದು ಒಂದು ವಾರದೊಳಗೆ ಚಾರ್ಜ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ವಿದ್ಯುತ್ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಮೆಸ್ಕಾಂ ಸಿಬ್ಬಂದಿ ೨೪*೭ ಕಾರ್ಯನಿರ್ವಹಿಸಬೇಕಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ ಲೈನ್‌ಮ್ಯಾನ್‌ಗಳ ಕೊರತೆ ಇತ್ತು. ಇದೀಗ ೯೪ ಲೈನ್‌ಮ್ಯಾನ್‌ಗಳನ್ನು ಜಿಲ್ಲೆಗೆ ನೀಡಲಾಗಿದ್ದು, ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೀಗಾಗಿ ಲೈನ್‌ಮ್ಯಾನ್‌ಗಳ ಕೊರತೆಯ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ ಎಂದು ಶಾಸಕ ತಿಳಿಸಿದರು.
ಸಾಮಾನ್ಯವಾಗಿ ವಿದ್ಯುತ್ ಬೇಡಿಕೆ ಜನವರಿ ನಂತರ ಹೆಚ್ಚಾಗುತ್ತಿತ್ತು. ಆದರೆ, ಈ ಬಾರಿ ಸೆಪ್ಟೆಂಬರ್‌ನಲ್ಲಿಯೇ ಬೇಡಿಕೆ ಹೆಚ್ಚಾಗಿದೆ. ಕಳೆದ ಕೆಲವು ದಿನಗಳಲ್ಲಿ ಮಳೆ ಹಾಗೂ ಚಂಡಮಾರುತದ ಪರಿಣಾಮ ಬೇಡಿಕೆ ಸ್ವಲ್ಪ ಕಡಿಮೆಯಾಗಿದ್ದರೂ, ಅಕ್ಟೋಬರ್ ೧ರಿಂದ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬರಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ವಿದ್ಯುತ್ ವಿನಿಮಯಕ್ಕಾಗಿ ಜಾರಿಯಲ್ಲಿದ್ದ `ಬ್ಯಾಂಕಿಂಗ್ ಸಿಸ್ಟಮ್’ ಸೆಪ್ಟೆಂಬರ್ ೩೦ಕ್ಕೆ ಪೂರ್ಣಗೊಳ್ಳಲಿದೆ. ಮಳೆಗಾಲದಲ್ಲಿ ಹೆಚ್ಚುವರಿ ವಿದ್ಯುತ್ ಅನ್ನು ಇತರ ರಾಜ್ಯಗಳಿಗೆ ನೀಡಿ, ಅಗತ್ಯವಿದ್ದ ಸಂದರ್ಭದಲ್ಲಿ ಅಲ್ಲಿಂದ ವಿದ್ಯುತ್ ಪಡೆಯುವ ವ್ಯವಸ್ಥೆ ಇದಾಗಿದೆ.
ಅಕ್ಟೋಬರ್ ೧ರಿಂದ ಜಾರ್ಖಂಡ್ ಸೇರಿದಂತೆ ಇತರ ರಾಜ್ಯಗಳಿಂದ ರಾಜ್ಯಕ್ಕೆ ವಿದ್ಯುತ್ ಲಭ್ಯವಾಗಲಿದ್ದು, ಇದರಿಂದ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆ ಹೆಚ್ಚಾಗುವ ನಿರೀಕ್ಷೆ ಇದೆ. ಹೀಗಾಗಿ ಪ್ರಸ್ತುತ ಎದುರಾಗಿರುವ ವಿದ್ಯುತ್ ಸಮಸ್ಯೆಗಳಲ್ಲಿ ಬಹುತೇಕವು ಪರಿಹಾರವಾಗಲಿದೆ ಎಂದು ಎಚ್.ಡಿ. ತಮ್ಮಯ್ಯ ಹೇಳಿದರು.
ರೈತರ ತೋಟಗಾರಿಕಾ ಬೆಳೆಗಳಿಗೆ ನೀರಾವರಿ, ಮನೆಗಳಲ್ಲಿ ದೈನಂದಿನ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನಿರಂತರ ವಿದ್ಯುತ್ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ಮರುಕಳಿಸದಂತೆ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸಲಾಗುವುದು ಎಂದು ಅವರು ತಿಳಿಸಿದರು.
Improvement in power supply from October 1
Leave a comment