ಚಿಕ್ಕಮಗಳೂರು: ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಮಹಿಳೆಯೊಬ್ಬರಿಂದ ಕ್ರೆಡಿಟ್ ಕಾರ್ಡ್ ವಿವರ ಹಾಗೂ ಒಟಿಪಿ ಪಡೆದು ₹2,79,281 ಹಣವನ್ನು ವಂಚಿಸಿರುವ ಪ್ರಕರಣ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ವಂಚನೆಗೊಳಗಾದವರು ಫೈನಾನ್ಷಿಯಲ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿರುವ ಜೊಲಿಟಾ ನೊರೋನ ಎಂದು ತಿಳಿದುಬಂದಿದೆ.
ಸೆ.16ರಂದು ಸಂಜೆ ಸುಮಾರು 5.15ಕ್ಕೆ ಅವರ ಮೊಬೈಲ್ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಕ್ರೆಡಿಟ್ ಕಾರ್ಡ್ ಆಕ್ಸಿಸ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದು, ನಿಮಗೆ ವಿಶೇಷ ಆಫರ್ ಇದೆ ಎಂದು ನಂಬಿಸಿದ್ದಾನೆ.
ನಂತರ ಆ ವ್ಯಕ್ತಿ ಆಕ್ಸಿಸ್ ಬ್ಯಾಂಕ್ ಮೊಬೈಲ್ ಆ್ಯಪ್ ತೆರೆಯುವಂತೆ ಸೂಚಿಸಿದ್ದಾನೆ. ವಂಚಕನನ್ನು ನಿಜವಾದ ಬ್ಯಾಂಕ್ ಅಧಿಕಾರಿ ಎಂದು ನಂಬಿದ ಮಹಿಳೆ, ಆತ ಸೂಚಿಸಿದಂತೆ ಮೊಬೈಲ್ ಬ್ಯಾಂಕಿಂಗ್ನಲ್ಲಿ ‘Third Party My Card Support.CC Axis Bank Apply Online’ ಎಂಬ ಅಪ್ಲಿಕೇಷನ್ನಲ್ಲಿ ತಮ್ಮ ಕ್ರೆಡಿಟ್ ಕಾರ್ಡ್ ಸಂಖ್ಯೆ, ಸಿವಿವಿ ಸಂಖ್ಯೆ ಹಾಗೂ ಕಾರ್ಡ್ನ ಎಕ್ಸ್ಪೈರಿ ದಿನಾಂಕವನ್ನು ನಮೂದಿಸಿದ್ದಾರೆ.
ಇದಾದ ಬಳಿಕ ಅವರ ಕ್ರೆಡಿಟ್ ಕಾರ್ಡ್ನಿಂದ ₹2,79,281 ಹಣ ಡ್ರಾ ಆಗಿರುವ ಕುರಿತು ಎರಡು ಬಾರಿ ಒಟಿಪಿ ಸಂದೇಶ ಬಂದಿದೆ. ವಂಚಕನ ಸೂಚನೆಯಂತೆ ಆ ಒಟಿಪಿಯನ್ನೂ ಅಪ್ಲಿಕೇಷನ್ನಲ್ಲಿ ನಮೂದಿಸಿದ್ದಾರೆ. ಬಳಿಕ ಮೊಬೈಲ್ ಸಂಪರ್ಕ ಕಡಿತಗೊಳಿಸಿ ಸಂದೇಶಗಳನ್ನು ಪರಿಶೀಲಿಸಿದಾಗ ಕ್ರೆಡಿಟ್ ಕಾರ್ಡ್ನಿಂದ ₹2,79,281 ಹಣ ಕಡಿತವಾಗಿರುವುದು ಗೊತ್ತಾಗಿದೆ.
ತಾವು ವಂಚನೆಗೊಳಗಾಗಿರುವುದು ಅರಿವಾದ ಕೂಡಲೇ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ಕಾರ್ಡ್ನ್ನು ಬ್ಲಾಕ್ ಮಾಡಿಸಿದ್ದಾರೆ. ನಂತರ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದು, 31609260165254 ಸಂಖ್ಯೆಯ ಸ್ವೀಕೃತಿ ದೊರೆತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸೆ.24ರಂದು NCRP ಪೋರ್ಟಲ್ನಲ್ಲಿ ದಾಖಲಾಗಿದ್ದ Zero FIR No. 804432200202600752 ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಬಂದಿದ್ದು, ಮಧ್ಯಾಹ್ನ 1 ಗಂಟೆಗೆ ಪೊಲೀಸ್ ಐಟಿ-2 ಮೂಲಕ ಸ್ವೀಕರಿಸಲಾಗಿದೆ. ಬಳಿಕ ದೂರುದಾರರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ವಂಚನೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಿ, ವಂಚನೆಗೊಳಗಾದ ಹಣವನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳಬೇಕು ಹಾಗೂ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರುದಾರರು ಮನವಿ ಮಾಡಿದ್ದಾರೆ.
₹2.79 lakh swindled by posing as an Axis Bank official
Leave a comment