ಚಿಕ್ಕಮಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ‘ಎದ್ದೇಳು ಕರ್ನಾಟಕ’ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್, ಸೆ.30ರೊಳಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಹಾಗೂ SIR ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಅ.1ರಿಂದ ಸಮಾನ ಮನಸ್ಕ ಸಂಘಟನೆಗಳೊಂದಿಗೆ ರಾಷ್ಟ್ರವ್ಯಾಪಿ ಆಂದೋಲನ ಆರಂಭಿಸುವುದಾಗಿ ಹೇಳಿದ್ದಾರೆ.
ಚಿಕ್ಕಮಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, SIR ಪ್ರಕ್ರಿಯೆಯಿಂದ ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯುವ ಆತಂಕವಿದೆ ಎಂದು ಆರೋಪಿಸಿದರು. ಚುನಾವಣಾ ಆಯೋಗದೊಳಗಿನ ನಿರ್ಧಾರ ಪ್ರಕ್ರಿಯೆ ಕುರಿತಂತೆ ಇತ್ತೀಚೆಗೆ ವರದಿಯಾಗಿರುವ ಭಿನ್ನಾಭಿಪ್ರಾಯಗಳ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದರು. ಚುನಾವಣಾ ಆಯೋಗದ ಮೂವರು ಆಯುಕ್ತರು ಸಮಾನವಾಗಿ ಕಾರ್ಯನಿರ್ವಹಿಸಬೇಕಿದ್ದು, ಪ್ರಮುಖ ನಿರ್ಧಾರಗಳಲ್ಲಿ ಪಾರದರ್ಶಕತೆ ಇರಬೇಕು ಎಂದು ಆಗ್ರಹಿಸಿದರು. ಚುನಾವಣಾ ಆಯೋಗದೊಳಗಿನ ಇಬ್ಬರು ಆಯುಕ್ತರು SIR ಸೇರಿದಂತೆ ಕೆಲವು ನಿರ್ಧಾರಗಳ ಕುರಿತು ಆಕ್ಷೇಪ ದಾಖಲಿಸಿದ್ದಾರೆ ಎಂಬ ವರದಿಗಳು ಇತ್ತೀಚೆಗೆ ಪ್ರಕಟವಾಗಿವೆ.
SIR ಮೂಲಕ ಕೋಟ್ಯಂತರ ಅರ್ಹ ಮತದಾರರು, ಅದರಲ್ಲೂ ಶೋಷಿತ ಸಮುದಾಯಗಳ ಮತದಾರರು ಮತಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಅಶೋಕ್ ಆರೋಪಿಸಿದರು. ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
SIR ಪ್ರಕ್ರಿಯೆ ಮತ್ತು ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ವಿವಿಧ ರಾಜಕೀಯ ಹಾಗೂ ನಾಗರಿಕ ಸಂಘಟನೆಗಳಿಂದ ದೇಶದಾದ್ಯಂತ ಆಕ್ಷೇಪಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ. ಕರ್ನಾಟಕದಲ್ಲಿಯೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆ.24ರಂದು ಹೊಸದಾಗಿ SIR ನಡೆಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು.
ಸೆ.27ರಂದು ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ ವಿರೋಧಿ ಜಾಥಾ
ಎಸ್‌ಐಆರ್ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸೆ.27ರಂದು ಚಿಕ್ಕಮಗಳೂರಿನಲ್ಲಿ ಜಾಥಾ ಹಾಗೂ ಸಭೆ ಆಯೋಜಿಸಲಾಗಿದೆ ಎಂದು ಅಶೋಕ್ ತಿಳಿಸಿದರು. ನಟ ಪ್ರಕಾಶ್ ಅವರ ನೇತೃತ್ವದಲ್ಲಿ ನಡೆಯಲಿರುವ ಜಾಥಾ ನಗರದ ಪ್ರೆಸ್‌ಕ್ಲಬ್ ಪಕ್ಕದಲ್ಲಿರುವ ಡಾ. ಫಿಲೋಮಿನಾ ಆಡಿಟೋರಿಯಂನಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆಯಾಗಿ ನಡೆಯಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಎಚ್.ಎಸ್. ಪುಟ್ಟಸ್ವಾಮಿ, ಗೌಸ್ ಮೋಹಿದ್ದೀನ್ ಹಾಗೂ ಮುನ್ನ ಕಡೂರು ಉಪಸ್ಥಿತರಿದ್ದರು.
Nationwide agitation against SIR: K.L. Ashok
Leave a comment