ಮೂಡಿಗೆರೆ: ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ಆತಂಕದಲ್ಲಿ ದಿನದೂಡುತ್ತಿದ್ದಾರೆ. ಒಂದೆಡೆ ಕೈಗೆ ಬಂದ ಬೆಳೆ ಕಾಡುಪ್ರಾಣಿಗಳ ಪಾಲಾಗುತ್ತಿದ್ದರೆ, ಮತ್ತೊಂದೆಡೆ ಯಾವ ಕ್ಷಣದಲ್ಲಿ ಕಾಡಾನೆ ಅಥವಾ ಕಾಡುಕೋಣ ದಾಳಿ ಮಾಡುತ್ತದೆಯೋ ಎಂಬ ಭೀತಿಯಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುವಂತಾಗಿದೆ.
ಗೋಣಿಬೀಡು ಹೋಬಳಿಯ ಜಿ.ಹೊಸಳ್ಳಿ ಗ್ರಾಮದ ಸುತ್ತಮುತ್ತ ಸಕಲೇಶಪುರ ಕಡೆಯಿಂದ ಆಗಮಿಸಿರುವ ‘ಬೀಟಮ್ಮ ಗ್ಯಾಂಗ್’ನ 15ಕ್ಕೂ ಅಧಿಕ ಕಾಡಾನೆಗಳು ಹಾಗೂ 8ಕ್ಕೂ ಹೆಚ್ಚು ಕಾಡುಕೋಣಗಳು ಹಿಂಡು ಹಿಂಡಾಗಿ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ. ಕಾಫಿ, ಅಡಕೆ ಸೇರಿದಂತೆ ವಿವಿಧ ಬೆಳೆಗಳ ಗಿಡಗಳು ಹಾಗೂ ಮರಗಳನ್ನು ಕಿತ್ತು ಬಿಸಾಡುತ್ತಿದ್ದು, ಬೆಳೆಗಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.
ಕಾಡಾನೆಗಳ ನಿರಂತರ ಸಂಚಾರದಿಂದಾಗಿ ಕಾರ್ಮಿಕರಿಗೆ ರಜೆ ನೀಡಲಾಗಿದ್ದು, ಹಗಲು-ರಾತ್ರಿ ಎನ್ನದೆ ಕಾಡುಪ್ರಾಣಿಗಳು ತೋಟಗಳಲ್ಲಿ ಓಡಾಡುತ್ತಿರುವುದರಿಂದ ತೋಟದ ಕೆಲಸ ಸ್ಥಗಿತಗೊಂಡಿದೆ. ಇದರಿಂದ ಬೆಳೆಗಾರರ ಜೊತೆಗೆ ಕಾರ್ಮಿಕರ ಜೀವನೋಪಾಯಕ್ಕೂ ಸಂಕಷ್ಟ ಎದುರಾಗಿದೆ.
ಕಾಡಾನೆ ದಾಳಿಗೆ ತುತ್ತಾದ ಯೋಗೇಶ್ ಕುಮಾರ್, ಕುಮಾರ್ ಹೆಚ್.ಕೆ., ಪೂರ್ಣೇಶ್, ಹೆಚ್.ಡಿ. ಚನ್ನಬಸವಪ್ಪ, ಜೆಸಿಐ ಅಧ್ಯಕ್ಷ ಸಂತೋಷ್, ಬಾಲಕೃಷ್ಣ ಹೆಚ್.ಆರ್., ಸಚ್ಚಿನ್, ಸಣ್ಣಪ್ಪಗೌಡ, ರಂಜೀತ್, ರಾಹೀಲ್ ಹಾಗೂ ಮುಜಾರ್ ಅಹ್ಮದ್ ಅವರ ತೋಟಗಳಿಗೆ ಗೋಣಿಬೀಡು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಡಿ.ಎಸ್. ರಮೇಶ್ ಮತ್ತು ಕಾರ್ಯದರ್ಶಿ ಚಂದ್ರಶೇಖರ್ ಬೆಟ್ಟದಮನೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಬೆಳೆ ನಾಶದಿಂದ ತತ್ತರಿಸಿದ್ದ ತೋಟದ ಮಾಲೀಕರು ಕಣ್ಣೀರಿಡುತ್ತಿರುವ ದೃಶ್ಯ ಕಂಡುಬಂದಿತು.
ಗೋಣಿಬೀಡು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಡಿ.ಎಸ್. ರಮೇಶ್ ಮಾತನಾಡಿ, “ಒಂದೆಡೆ ಹವಾಮಾನ ವೈಪರೀತ್ಯ, ಮತ್ತೊಂದೆಡೆ ಕಾಡುಪ್ರಾಣಿಗಳ ಹಾವಳಿ. ಇವೆರಡರ ನಡುವೆ ಮಲೆನಾಡಿನ ಬೆಳೆಗಾರರು ತತ್ತರಿಸುತ್ತಿದ್ದಾರೆ. ಇದರ ಜೊತೆಗೆ ಕಸ್ತೂರಿ ರಂಗನ್ ವರದಿ ಎಂಬ ಮತ್ತೊಂದು ಸಮಸ್ಯೆ ಬೆಳೆಗಾರರನ್ನು ಕಾಡುತ್ತಿದೆ. ಒಟ್ಟಿನಲ್ಲಿ ಬೆಳೆಗಾರರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಆಟವಾಡುವ ವಸ್ತುವಿನಂತಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಬೆಳೆಗಾರರ ಸಮಸ್ಯೆಗಳನ್ನು ಆಲಿಸಿ, ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆಗಾರರನ್ನು ರಕ್ಷಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು. ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನ ಬೆಳೆಗಾರರಿಗೆ ಆಗಬಹುದಾದ ಅನನುಕೂಲಗಳನ್ನು ನಿವಾರಿಸಬೇಕು. ಇಲ್ಲವಾದಲ್ಲಿ ಬೆಳೆಗಾರರನ್ನು ಸಂಘಟಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಬೆಟ್ಟದಮನೆ ಮಾತನಾಡಿ, ಮಲೆನಾಡು ಭಾಗದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದರ ಜೊತೆಗೆ ಮಾನವ–ಪ್ರಾಣಿ ಸಂಘರ್ಷವನ್ನು ತಪ್ಪಿಸಲು ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
“ಬೆಳೆ ಕೈಗೆ ಬಂದರೆ ಮಾತ್ರ ಬೆಳೆಗಾರರು ಮತ್ತು ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಸಾಧ್ಯ. ಬೆಳೆ ಸಂಪೂರ್ಣ ನಾಶವಾದರೆ ಬೆಳೆಗಾರರ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ, ಬೆಳೆಗಾರರ ಬದುಕನ್ನು ರಕ್ಷಿಸಬೇಕು” ಎಂದು ಒತ್ತಾಯಿಸಿದರು.
Workers in fear of wild elephant and leopard attacks
Leave a comment