ಚಿಕ್ಕಮಗಳೂರು: ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (CIMS)ಯಲ್ಲಿ ಸಹಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಗಣೇಶ್ ಪಿ. ಸುಬ್ರಹ್ಮಣ್ಯ ಅವರ ವಿರುದ್ಧ ಸರ್ಕಾರಿ ಸೇವಾ ನಿಯಮ ಉಲ್ಲಂಘನೆ, ಕರ್ತವ್ಯ ಲೋಪ, ಹಾಜರಾತಿ ದಾಖಲೆ ತಿದ್ದುಪಡಿ ಹಾಗೂ ಪ್ರಭಾವ ಬಳಸಿ ಪದೋನ್ನತಿ ಪಡೆದಿರುವ ಆರೋಪಗಳು ಕೇಳಿಬಂದಿದ್ದು, ಪ್ರಕರಣದ ಕುರಿತು ಲೋಕಾಯುಕ್ತ ಅಥವಾ ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸಬೇಕೆಂದು ಸಾಮಾಜಿಕ ಕಾರ್ಯಕರ್ತ ಸುಪ್ರೀತ್ ಅರೈನೂರ್ ಆಗ್ರಹಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಗಣೇಶ್ ಅವರು ಸರ್ಕಾರಿ ಸೇವೆಯಲ್ಲಿದ್ದರೂ ಯಾವುದೇ ಪೂರ್ವಾನುಮತಿ ಪಡೆಯದೆ ಕೇರಳದ ವಯನಾಡಿನಲ್ಲಿರುವ ಲಿಯೋ ಆಸ್ಪತ್ರೆಯಲ್ಲಿ ಖಾಸಗಿಯಾಗಿ ಹೊರರೋಗಿ ಹಾಗೂ ಒಳರೋಗಿಗಳ ತಪಾಸಣೆ, ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಬಿಲ್ ಮತ್ತು ರಸೀದಿಗಳು ಸೇರಿದಂತೆ ದಾಖಲೆಗಳು ತಮ್ಮ ಬಳಿ ಇರುವುದಾಗಿ ತಿಳಿಸಿದರು.
ಸರ್ಕಾರಿ ಕರ್ತವ್ಯದ ಸಮಯದಲ್ಲಿ ಹೊರರಾಜ್ಯದ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿರುವುದನ್ನು ಮುಚ್ಚಿಹಾಕುವ ಉದ್ದೇಶದಿಂದ CIMSನ ಹಾಜರಾತಿ ರಿಜಿಸ್ಟರ್ನಲ್ಲಿ ವೈಟ್ನರ್ ಬಳಸಿ ತಿದ್ದುಪಡಿ ಮಾಡಲಾಗಿದೆ ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದರು.
ಡಾ. ಗಣೇಶ್ ಹಾಗೂ ಸಂಸ್ಥೆಯ ಡೀನ್ ನಡುವೆ ನಿಕಟ ಸ್ನೇಹವಿದ್ದು, ಈ ಆಪ್ತತೆಯ ಲಾಭ ಪಡೆದು ಸ್ಥಳೀಯ ಮಟ್ಟದ ತನಿಖೆಯನ್ನು ಅವರ ಪರವಾಗಿ ಮುಕ್ತಾಯಗೊಳಿಸಲು ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳಿಂದ ನಡೆಯುವ ತನಿಖೆಯ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿದರು.
ಇದಲ್ಲದೆ, ಡಾ. ಗಣೇಶ್ ಅವರ ವಿರುದ್ಧ ಕರ್ತವ್ಯ ಲೋಪದ ಕುರಿತು ತನಿಖೆ ಅಥವಾ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ಪ್ರಭಾವ ಬಳಸಿ ನಿಯಮಬಾಹಿರವಾಗಿ ಪದೋನ್ನತಿ ನೀಡಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು.
ಆರೋಪಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವ ಅಗತ್ಯವಿದ್ದು, ಸ್ಥಳೀಯ ಮಟ್ಟದ ಅಧಿಕಾರಿಗಳ ಬದಲಿಗೆ ಲೋಕಾಯುಕ್ತ ಅಥವಾ ಉನ್ನತ ಮಟ್ಟದ ಸ್ವತಂತ್ರ ತನಿಖಾ ಸಂಸ್ಥೆಗೆ ಪ್ರಕರಣವನ್ನು ವಹಿಸಬೇಕು. ತನಿಖೆಯಲ್ಲಿ ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸುಪ್ರೀತ್ ಅರೈನೂರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವರೂಪ್ ಕಬ್ಬಿಣ ಸೇತುವೆ, ಶರಣ್ ಚಿತ್ಮಳ್ಳಿ, ಮಾಗೋಡ್ ಮೋಹನ್ ಗೌಡ, ಸಂಗೀತ ಪ್ರಸಾದ್ ಹಾಗೂ ಪ್ರೀತಮ್ ಹಲಸುಮನೆ ಉಪಸ್ಥಿತರಿದ್ದರು.
Attendance correction allegations against associate professor of Institute of Medical Sciences
Leave a comment