ತರೀಕೆರೆ: ಸರ್ಕಾರಿ ಬಸ್ ಚಾಲಕನ ಮೇಲೆ ಖಾಸಗಿ ಬಸ್ ಏಜೆಂಟ್ಗಳು ನಡುರಸ್ತೆಯಲ್ಲೇ ಪುಂಡಾಟ ನಡೆಸಿ, ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ ಎನ್ನಲಾದ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಡಿಪೋಗೆ ಸೇರಿದ ಕೆಎಸ್ಆರ್ಟಿಸಿ ಬಸ್ ತರೀಕೆರೆ ಸರ್ಕಲ್ನಲ್ಲಿ ನಿಂತಿದ್ದ ವೇಳೆ, ಖಾಸಗಿ ಬಸ್ ಸ್ಟ್ಯಾಂಡ್ ಏಜೆಂಟ್ ಮಂಜುನಾಥ್ ಎಂಬಾತ ಏಕಾಏಕಿ ಸರ್ಕಾರಿ ಬಸ್ನೊಳಗೆ ನುಗ್ಗಿ ಪ್ರಯಾಣಿಕರನ್ನು ತಮ್ಮ ಖಾಸಗಿ ಬಸ್ಗೆ ಕರೆಯಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಸರ್ಕಾರಿ ವಾಹನದೊಳಗೆ ಬಂದು ಪ್ರಯಾಣಿಕರನ್ನು ಕರೆಯುತ್ತಿದ್ದ ಪುಂಡಾಟವನ್ನು ಪ್ರಶ್ನಿಸಿದ ಚಾಲಕ ಲೋಹಿತ್ ಅವರ ಮೇಲೆ ಆಕ್ರೋಶಗೊಂಡ ಆರೋಪಿ ಮಂಜುನಾಥ್, ಅಸಭ್ಯ ಪದಗಳಿಂದ ನಿಂದಿಸಿ ತನ್ನ ತಲೆಯಿಂದಲೇ ಚಾಲಕನ ಮೂಗಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಲಾಗಿದೆ.
ಏಕಾಏಕಿ ನಡೆದ ಈ ದಾಳಿಯಿಂದ ಚಾಲಕನ ಮೂಗಿನಿಂದ ತೀವು ರಕ್ತಸ್ರಾವವಾಗಿದ್ದು, ಅಷ್ಟಕ್ಕೇ ಬಿಡದ ಮತ್ತೊಬ್ಬ ಏಜೆಂಟ್ ಹರೀಶ್ ಎಂಬಾತನೊಂದಿಗೆ ಸೇರಿಕೊಂಡು ಚಾಲಕನ ಎದೆ ಹಾಗೂ ಮೈಕೈಗೆ ಮನಬಂದಂತೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಕೂಡಲೇ ಸ್ಥಳೀಯರು ಹಾಗೂ ಬಸ್ ನಿರ್ವಾಹಕ ಗಾಯಾಳು ಚಾಲಕನನ್ನು ರಕ್ಷಿಸಿ ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ದೌರ್ಜನ್ಯವೆಸಗಿದ ಇಬ್ಬರು ಖಾಸಗಿ ಬಸ್ ಏಜೆಂಟ್ಗಳ ವಿರುದ್ಧ ತರೀಕೆರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
A fight breaks out in the middle of a private bus agent’s street in Tarikere
Leave a comment