ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಋತುವಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಶೇ.೩೫ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಜೂನ್ ೧ ರಿಂದ ಆಗಸ್ಟ್ ೨೨ ರವರೆಗೆ ಜಿಲ್ಲೆಯಲ್ಲಿ ೧,೨೧೦.೨ ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಕೇವಲ ೭೯೧.೧ ಮಿ.ಮೀ ಮಳೆಯಾಗಿದ್ದು, ಶೇ. ೩೫ ರಷ್ಟು ಕೊರತೆ ದಾಖಲಾಗಿದೆ. ತಾಲೂಕುವಾರು ವಿವರಗಳನ್ನು ಗಮನಿಸಿದರೆ, ಅಜ್ಜಂಪುರ ತಾಲೂಕಿನಲ್ಲಿ ಜಿಲ್ಲೆಯಲ್ಲೇ ಗರಿಷ್ಠ ಅಂದರೆ ಶೇ.೪೭ರಷ್ಟು ಮಳೆ ಕೊರತೆ ಉಂಟಾಗಿದೆ. ಕಡೂರು ಮತ್ತು ತರೀಕೆರೆ ತಾಲೂಕುಗಳಲ್ಲಿ ತಲಾ ಶೇ ೩೮ರಷ್ಟು, ಕಳಸದಲ್ಲಿ ಶೇ. ೨೯ರಷ್ಟು, ಮೂಡಿಗೆರೆ ಮತ್ತು ಎನ್.ಆರ್.ಪುರ ತಾಲೂಕುಗಳಲ್ಲಿ ತಲಾ ಶೇ.೨೩ರಷ್ಟು ಮಳೆ ಅಭಾವ ಕಂಡುಬಂದಿದೆ.
ಚಿಕ್ಕಮಗಳೂರು ತಾಲೂಕಿನಲ್ಲಿ ಸರಾಸರಿ ಶೇ ೫೮ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ವರದಿ ಇದ್ದರೂ ನೈಜವಾಗಿ ಹೋಬಳಿವಾರು ಭಾರಿ ವ್ಯತ್ಯಾಸವಿದೆ. ಜಾಗರ (ಶೇ.೨೪ ಹೆಚ್ಚುವರಿ) ಮತ್ತು ವಸ್ತಾರೆ (ಶೇ.೧೧ ಹೆಚ್ಚುವರಿ) ಹೋಬಳಿಗಳಲ್ಲಿ ಉತ್ತಮ ಮಳೆಯಾಗಿದೆ. ಆದರೆ, ಉಳಿದ ೬ ಹೋಬಳಿಗಳಲ್ಲಿ ತೀವ್ರ ಮಳೆ ಅಭಾವವಿದ್ದು, ಲಕ್ಕಾ ಹೋಬಳಿಯಲ್ಲಿ ಶೇ.೪೯ ಹಾಗೂ ಖಂಡ್ಯಾ ಮತ್ತು ಆವತಿ ಹೋಬಳಿಗಳಲ್ಲಿ ಶೇ.೫೭ರಷ್ಟು ಮಳೆ ಕೊರತೆಯಾಗಿದೆ. ರೈತ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಮಾಧ್ಯಮಗಳ ಮನವಿಯಂತೆ ಮತ್ತು ಸಚಿವರ ಸಮ್ಮುಖದಲ್ಲಿ ನಡೆದ ಸಭೆಯ ಚರ್ಚೆಯಂತೆ, ಚಿಕ್ಕಮಗಳೂರು ತಾಲೂಕನ್ನು ಹೋಬಳಿವಾರು ಘಟಕವಾಗಿ ಪರಿಗಣಿಸಿ ಬರಪೀಡಿತ ಪ್ರದೇಶವೆಂದು ಘೋಷಿಸಲು ತಾಲೂಕು ಮತ್ತು ಜಿಲ್ಲಾ ಟಾಸ್ಕ್ ಫೊ?ರ್ಸ್ ಸಭೆಯಲ್ಲಿ ನಿರ್ಣಯಿಸಿ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಜಿಲ್ಲೆಯ ಕೃಷಿ ಇಲಾಖೆಯು ೯೭,೦೪೫ ಹೆಕ್ಟೇರ್ ಬಿತ್ತನೆ ಗುರಿ ಹೊಂದಿತ್ತು. ಆದರೆ ಆಗಸ್ಟ್ ೨೨ ರವರೆಗೆ ೨೩,೩೩೨ ಹೆಕ್ಟೇರ್ (ಶೇ.೨೪) ಮಾತ್ರ ಬಿತ್ತನೆಯಾಗಿದೆ. ವಿಶೇಷವಾಗಿ ಕಡೂರು ತಾಲೂಕಿನಲ್ಲಿ ಗುರಿಯ ಶೇ. ೬ರಷ್ಟು ಮಾತ್ರ ಬಿತ್ತನೆಯಾಗಿದೆ. ನಿಯಮಾವಳಿ ಪ್ರಕಾರ ಶೇಕಡ ೨೫ಕ್ಕಿಂತ ಕಡಿಮೆ ಬಿತ್ತನೆಯಾದರೆ ಪ್ರಿವೆಂಟೆಡ್ ಸೋಯಿಂಗ್ ನಿಯಮ ಜಾರಿಗೊಳಿಸಲು ಅವಕಾಶವಿದೆ. ಈ ಸಂಬಂಧ ವಿಮಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ, ಪ್ರೀಮಿಯಂ ಪಾವತಿಸಿದ ಅರ್ಹ ರೈತರಿಗೆ ಪರಿಹಾರ ಮೊತ್ತ ತಲುಪಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ರೈತರಲ್ಲಿ ಅರಿವು ಮೂಡಿಸುವ ಮೂಲಕ ಈ ಬಾರಿ ಬೆಳೆ ವಿಮೆ ನೋಂದಣಿಯಲ್ಲಿ ಜಿಲ್ಲೆ ಐತಿಹಾಸಿಕ ಸಾಧನೆ ಮಾಡಿದೆ. ಕೃಷಿ ಬೆಳೆ ವಿಮೆಯಡಿ ಕಳೆದೆಂಟು ವರ್ಷಗಳಲ್ಲಿ ಗರಿಷ್ಠ ಅಂದರೆ ೧೦,೦೦೦ ರೈತರು ಮಾತ್ರ ನೋಂದಾಯಿಸಿಕೊಳ್ಳುತ್ತಿದ್ದರು. ಈ ವರ್ಷ ಪ್ರಚಾರ ಅಭಿಯಾನದ ಫಲವಾಗಿ ೩೬,೫೪೦ ರೈತರು ನೋಂದಾಯಿಸಿಕೊಂಡಿದ್ದು, ಇದು ಸುಮಾರು ಐದು ಪಟ್ಟು ಹೆಚ್ಚಿನ ದಾಖಲೆಯಾಗಿದೆ. ಅದೇ ರೀತಿ ತೋಟಗಾರಿಕೆ ಬೆಳೆ ವಿಮೆಯಲ್ಲಿ ಕಳೆದ ವರ್ಷ ೪೪,೯೦೫ ರೈತರು ನೋಂದಾಯಿಸಿಕೊಂಡಿದ್ದರೆ, ಈ ಸಾಲಿನಲ್ಲಿ ಗರಿಷ್ಠ ೬೫,೬೦೮ ರೈತರು ನೋಂದಣಿ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿದ್ದ ೨೪೨ ಟೆಲಿಮೆಟ್ರಿಕ್ ಮಳೆಮಾಪನ ಯಂತ್ರಗಳಲ್ಲಿ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದ ಯಂತ್ರಗಳನ್ನು ದುರಸ್ತಿಗೊಳಿಸಲಾಗಿದ್ದು, ಪ್ರಸ್ತುತ ೨೩೭ ಯಂತ್ರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಮಳೆ ವಿವರ ನಿಖರವಾಗಿ ದಾಖಲಾಗುತ್ತಿದ್ದು, ವಿಮಾ ಪರಿಹಾರ ಪಡೆಯಲು ರೈತರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಹಾಜರಿದ್ದರು.
There was a 35% rainfall deficit in the district during the monsoon season.
Leave a comment