ಚಿಕ್ಕಮಗಳೂರು: ನಗರದ ಹೊರವಲಯದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಲಾಗಿರುವ ಪ್ರದೇಶ ಕೃಷಿ ಅವಲಂಬಿತವಾಗಿದ್ದು, ಅತ್ಯಂತ ಫಲವತ್ತಾದ ಭೂಮಿಯನ್ನು ಹೊಂದಿದೆ. ರೈತರ ಜೀವನಾಧಾರವಾಗಿರುವ ಈ ಜಮೀನನ್ನು ವಿಮಾನ ನಿಲ್ದಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವ ಕೈಬಿಟ್ಟು, ಕೃಷಿಗೆ ಯೋಗ್ಯವಲ್ಲದ ಪರ್ಯಾಯ ಜಾಗವನ್ನು ಗುರುತಿಸುವಂತೆ ಒತ್ತಾಯಿಸಿ ರೈತರು ಶಾಸಕ ಎಚ್.ಡಿ. ತಮ್ಮಯ್ಯಗೆ ಮನವಿ ಸಲ್ಲಿಸಿದರು.
ಚಿಕ್ಕಮಗಳೂರು ಕಸಬಾ ಹೋಬಳಿಯ ಸರ್ಕಾರಿ ಗೋಮಾಳದ ಸುಮಾರು ೧೦೦ ಎಕರೆ ಜಾಗವನ್ನು ಕಿರು ವಿಮಾನ ನಿಲ್ದಾಣಕ್ಕಾಗಿ ಗುರುತಿಸಲಾಗಿದೆ. ೨೦ ಆಸನಗಳ ವಿಮಾನಗಳ ಸಂಚಾರಕ್ಕೆ ಸುಮಾರು ೧,೨೦೦ ಮೀಟರ್ ಉದ್ದ ಹಾಗೂ ೧೫೦ ಮೀಟರ್ ಅಗಲದ ರನ್‌ವೇ ಅಗತ್ಯವಿದ್ದು, ಒಟ್ಟಾರೆ ಸುಮಾರು ೧೫೦ ಎಕರೆ ಭೂಮಿ ಬೇಕಾಗುತ್ತದೆ. ಈಗಾಗಲೇ ಸರ್ಕಾರಿ ಜಮೀನಿನ ಜತೆಗೆ ಖಾಸಗಿ ರೈತರ ೩೦ರಿಂದ ೪೦ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿರುವುದರಿಂದ ರೈತರಲ್ಲಿ ಆತಂಕ ಮೂಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಚಿಕ್ಕಮಗಳೂರು ನಗರವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ೧೨ ಅಥವಾ ೨೦ ಆಸನಗಳ ಕಿರು ವಿಮಾನ ನಿಲ್ದಾಣವನ್ನು ನಿರ್ಮಿಸುವುದು ತಾತ್ಕಾಲಿಕ ಪರಿಹಾರವಾಗಲಿದೆ. ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಅಗತ್ಯ ಎದುರಾಗುವ ಸಾಧ್ಯತೆ ಇರುವುದರಿಂದ ಈಗಲೇ ದೊಡ್ಡ ಪ್ರಮಾಣದಲ್ಲಿ ಭೂಮಿ ಹೊಂದಿರುವ ಸೂಕ್ತ ಸ್ಥಳವನ್ನು ಗುರುತಿಸಬೇಕು ಎಂದು ರೈತರು ಒತ್ತಾಯಿಸಿದರು.
ಕೋಟೆ, ಅಂಬಳೆ, ಹಿರೇಮಗಳೂರು, ಲಕ್ಷ್ಮೀಪುರ, ಉಂಡಾಡಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ರೈತರು ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಮದುವೆ, ಆರೋಗ್ಯ ಸೇರಿದಂತೆ ಕುಟುಂಬದ ಎಲ್ಲ ಪ್ರಮುಖ ಅಗತ್ಯಗಳಿಗೆ ಈ ಜಮೀನು ಆಧಾರವಾಗಿದೆ. ಈ ಪ್ರದೇಶದ ಭೂಮಿ ಅತ್ಯಂತ ಫಲವತ್ತಾಗಿದ್ದು, ನೀರಿನ ಸೌಲಭ್ಯವೂ ಉತ್ತಮವಾಗಿದೆ. ಹೀಗಾಗಿ ಇಲ್ಲಿ ಉತ್ತಮ ಇಳುವರಿ ದೊರೆಯುತ್ತಿದ್ದು, ಕೃಷಿ ಚಟುವಟಿಕೆಗಳು ಸಮೃದ್ಧವಾಗಿವೆ ಎಂದು ರೈತರು ಹೇಳಿದರು.
ಯಗಚಿ ನೀರು ಹರಿಯುವ ಕಾಲುವೆಯೂ ಇದೇ ಭಾಗದಲ್ಲಿದ್ದು, ವಿಮಾನ ನಿಲ್ದಾಣ ಕಾಮಗಾರಿಯಿಂದ ನೀರು ಕಲುಷಿತಗೊಳ್ಳುವ ಸಾಧ್ಯತೆಯಿದೆ. ಇದರಿಂದ ಕೃಷಿಗೆ ಬಳಸುವ ನೀರು ಮಾತ್ರವಲ್ಲದೆ, ಕುಡಿಯುವ ನೀರಿನ ಮೇಲೂ ಪರಿಣಾಮ ಬೀರುವ ಆತಂಕವಿದೆ, ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣವನ್ನು ವಿಸ್ತರಿಸಲು ಹೆಚ್ಚಿನ ಭೂಮಿ ಅಗತ್ಯವಾದರೆ ಸುತ್ತಮುತ್ತಲಿನ ಗ್ರಾಮಗಳ ರೈತರೂ ತಮ್ಮ ಫಲವತ್ತಾದ ಜಮೀನುಗಳನ್ನು ಕಳೆದುಕೊಂಡು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದರಿಂದ ನೂರಾರು ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಚಿಕ್ಕಮಗಳೂರು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ವಿಮಾನ ನಿಲ್ದಾಣ ನಿರ್ಮಿಸುವುದಾದರೆ ಕನಿಷ್ಠ ೪೦೦ ಎಕರೆ ಭೂಮಿ ಹೊಂದಿರುವ ಸ್ಥಳವನ್ನು ಗುರುತಿಸುವ ಅಗತ್ಯವಿದೆ. ನಗರದ ಸುತ್ತಮುತ್ತ ಕೃಷಿ ಚಟುವಟಿಕೆಗಳಿಗೆ ಯೋಗ್ಯವಲ್ಲದ ಭೂಮಿಗಳು ಲಭ್ಯವಿದ್ದು, ಅಂತಹ ಪ್ರದೇಶಗಳನ್ನು ಪರಿಶೀಲಿಸಿ ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ರೈತರು ಸಲಹೆ ನೀಡಿದರು.
ಕೃಷಿ ಭೂಮಿಯನ್ನು ಉಳಿಸುವುದರ ಜತೆಗೆ ಭವಿಷ್ಯದಲ್ಲಿ ವಿಮಾನ ನಿಲ್ದಾಣ ವಿಸ್ತರಣೆಗೆ ಮತ್ತೆ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವ ಪರಿಸ್ಥಿತಿ ಬರದಂತೆ ಈಗಲೇ ಸೂಕ್ತ ಯೋಜನೆ ರೂಪಿಸಬೇಕು. ರೈತರ ಜೀವಾಳವಾಗಿರುವ ಫಲವತ್ತಾದ ಭೂಮಿಯಿಂದ ಕಿರು ವಿಮಾನ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರಿಸಿ, ರೈತರ ಜೀವನೋಪಾಯವನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.
Farmers oppose land acquisition for airport
Leave a comment