ಚಿಕ್ಕಮಗಳೂರು: ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರ ವಿರುದ್ಧದ ವಿವಾದದ ಕಿಡಿ ಮತ್ತಷ್ಟು ಹೆಚ್ಚಾಗಿದ್ದು, ಚಿಕ್ಕಮಗಳೂರಿನಲ್ಲಿ ಅವರ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ನಗರದ ಉಪ್ಪಳ್ಳಿ ನಿವಾಸಿ ಗೌಸ್ ಮುನೀರ್ ಎಂಬುವರು ನಗರದ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಈ ದೂರು ನೀಡಿದ್ದು, ಸಿ.ಟಿ. ರವಿ ಅವರ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಾಗೂ ಕೋಮು ದ್ವೇಷ ಪ್ರಚೋದಿಸಿದ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.
ಇತ್ತೀಚೆಗೆ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಸಿ.ಟಿ. ರವಿ ಅವರು ‘ಮುಲ್ಲಾ’ ಪದ ಬಳಕೆ ಮಾಡಿ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಜೊತೆಗೆ, ಬೇರೆ ರಾಜ್ಯದಲ್ಲಿ ನಡೆದ ಅಪಘಾತದ ವಿಡಿಯೋವನ್ನು ಹಂಚಿಕೊಂಡು, “ಜಂತರ್ ಮಂತರ್ನಲ್ಲಿ ಮುಲ್ಲಾಗಳು ಸಾರ್ವಜನಿಕ ಆಸ್ತಿ-ಪಾಸ್ತಿ ಹಾಳು ಮಾಡುತ್ತಿದ್ದಾರೆ” ಎಂದು ತಪ್ಪು ಮಾಹಿತಿ ಹರಡುವ ಮೂಲಕ ಕೋಮು ಗಲಭೆಗೆ ಪ್ರಚೋದನೆ ನೀಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.
ಈ ದೂರಿನ ಅನ್ವಯ ಬಿ.ಎನ್.ಎಸ್. ಕಲಂ 173(3)(1)ರ ಅಡಿಯಲ್ಲಿ ಸೆನ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಇದರೊಂದಿಗೆ ಸಿ.ಟಿ. ರವಿ ಅವರ ವಿರುದ್ಧ ಸಲ್ಲಿಕೆಯಾದ ಒಟ್ಟು ದೂರುಗಳ ಸಂಖ್ಯೆ ಮೂರಕ್ಕೇರಿದೆ. ಈ ಪೈಕಿ ಮುದಾಸಿರ್ ಹಾಗೂ ಗೌಸ್ ಮುನೀರ್ ನೀಡಿದ ದೂರುಗಳ ಆಧಾರದ ಮೇಲೆ ನಗರ ಪೊಲೀಸ್ ಠಾಣೆ ಮತ್ತು ಸೆನ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
Another complaint filed against CT Ravi
Leave a comment