ಚಿಕ್ಕಮಗಳೂರು: ಸಂಚಾರಿ ಹೈಕೋರ್ಟ್ ಪೀಠವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಥಾಪನೆ ಮಾಡುವುದು ಸೂಕ್ತವೆಂದು ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಗುರುವಾರ ಮಾತನಾಡಿ,ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ವಕೀಲರ ಸಂಘದ ಕೋರಿಕೆ ಮೇರೆಗೆ ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಪ್ರತ್ಯೇಕ ಸಂಚಾರಿ ಹೈಕೋರ್ಟ್ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪನೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಲಿಖಿತವಾಗಿ ಮನವಿಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವಕೀಲರ ಸಂಘದ ಕೋರಿಕೆಯಂತೆ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರಿಗೆ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ಶಿಫಾರಸ್ಸು ಮಾಡುವ ಮೂಲಕ ಪತ್ರ ಬರೆಯಲಾಗಿರುತ್ತದೆ ಎಂದು ಹೇಳಿದರು.
ಈ ಕುರಿತು ಶಿಫಾರಸ್ ಮಾಡುವ ಮೊದಲು ಚಿಕ್ಕಮಗಳೂರು ವಕೀಲರ ಸಂಘವನ್ನಾಗಲಿ ಅಥವಾ ಇತರೆ ಜಿಲ್ಲೆಗಳ ವಕೀಲರುಗಳ ಸಂಘದ ಅಭಿಪ್ರಾಯವನ್ನು ಪಡೆಯದೇ ಏಕಪಕ್ಷೀಯವಾಗಿ ಶಿಫಾರಸ್ಸುಮಾಡಿರುವುದು ಸಮಂಜಸವಾಗಿರುವುದಿಲ್ಲ. ಏಕೆಂದರೆ ಮಂಗಳೂರು ಜಿಲ್ಲೆ ಚಿಕ್ಕಮಗಳೂರು ೧೬೦ ಕಿ.ಮೀ. ಅಂತರಹೊಂದಿದ್ದು, ದಟ್ಟವಾದ ಕಾಡು, ಚಾರ್ಮಾಡಿಘಾಟಿಯನ್ನು ಹಾದುಹೋಗಬೇಕಾಗಿದೆ. ಮಳೆಗಾಲದಲ್ಲಿ ಹಲವಾರು ಕಡೆಗಳಲ್ಲಿ ಆಕಸ್ಮಿಕವಾಗಿ ಗುಡ್ಡಕುಸಿತಗಳು ಹಾಗೂ ರಸ್ತೆ ಮುಚ್ಚುವಂತಹ ಅನೇಕ ಘಟನೆಗಳು ಸಾಮಾನ್ಯವಾಗಿವೆ ಎಂದು ತಿಳಿಸಿದರು.
ಮಂಗಳೂರು ಹಾಗೂ ಚಿಕ್ಕಮಗಳೂರಿಗೆ ಯಾವುದೇ ವ್ಯವಹಾರಿಕ ವಹಿವಾಟುಗಳಾಗಲಿ ಸಾರ್ವಜನಿಕ ದಿನನಿತ್ಯದ ಸಂಪರ್ಕಗಳಾಗಿ ಇರುವುದಿಲ್ಲ ಅಲ್ಲದೇ ಕರ್ನಾಟಕದ ಅಂಚಿನ ಭಾಗದಲ್ಲಿ ಮಂಗಳೂರು ಇರುವುದರಿಂದ ಚಿಕ್ಕಮಗಳೂರಿನ ಜನತೆಗೆ ಯಾವುದೇ ಅನುಕೂಲರ ವಾತಾವರಣ ಇರುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಶಿವಮೊಗ್ಗದಿಂದ ೧೦೦ ಕಿ.ಮೀ. ಉಡುಪಿ ೧೬೦ ಕಿ.ಮೀ. ಅಂತರದಲ್ಲಿದೆ. ಚಿಕ್ಕಮಗಳೂರು ಹಾಗೂ ಮಡಿಕೇರಿ ೧೪೭ ಕಿ.ಮೀ.ಹಾಸನ ೬೦ ಕಿ.ಮೀ.ದಾವಣಗೆರೆ ೧೬೦ ಕಿ.ಮೀ. ಚಿತ್ರದುರ್ಗ ೧೪೦ ಕಿ.ಮೀ. ಆಗಿದ್ದು, ಈ ಎಲ್ಲಾ ಜಿಲ್ಲೆಗಳಿಗೆ ಚಿಕ್ಕಮಗಳೂರು ಹೃದಯ ಭಾಗವಾಗಿದೆ ಎಂದು ಹೇಳಿದರು.
ಈಗಾಗಲೇ ಚಿಕ್ಕಮಗಳೂರ ಜಿಲ್ಲೆಯಲ್ಲಿ ೧೦೦ ಕೋಟಿಗಿಂತಲೂ ಅಧಿಕವೆಚ್ಚದಲ್ಲಿ ನೂತನವಾದ ಆರು ಅಂತಸ್ತಿನ ೧೬ ನ್ಯಾಯಾಲಯಗಳ ಸಂಕೀರ್ಣ ಅವಶ್ಯಕ ವ್ಯವಸ್ಥೆಗಳೊಂದಿಗೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯ ಹಂತದಲ್ಲಿರುವುದರಿಂದ ಸಂಚಾರಿ ಹೈಕೋರ್ಟ್ ಪೀಠವನ್ನು ಚಿಕ್ಕಮಗಳೂರ ಜಿಲ್ಲೆಯಲ್ಲಿ ಸ್ಥಾಪನೆ ಮಾಡುವುದು ಸೂಕ್ತವೆಂದು ಸಂಘವು ಬಯಸುತ್ತದೆ ಎಂದರು.
ಈ ಎಲ್ಲಾ ಕಾರಣಗಳಿಂದ ಕಕ್ಷಿದಾರರು, ಸಾರ್ವಜನಿಕರು, ವಕೀಲರುಗಳ ಹಿತದೃಷ್ಟಿಯಿಂದ ಮಾಜಿ ಮುಖ್ಯಮಂತ್ರತಿ ಸಿದ್ದರಾಮಯ್ಯನವರ ವೈಯಕ್ತಿಕ ಶಿಫಾರಸ್ಸನ್ನುಹ ಪರಿಗಣಿಸದೆ ಕೈಬಿಡಬೇಕೆಂದು ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳಲ್ಲಿ ವಕೀಲರ ಸಂಘದ ಮನವಿ ಮಾಡಲಿದೆ ಎಂದು ತಿಳಿಸಿದರು.
ವಕೀಲರಸಂಘದ ಕಾರ್ಯದರ್ಶಿ ಅನಿಲ್ಕುಮಾರ್, ಉಪಾಧ್ಯಕ್ಷ ಕೆ.ಎಸ್.ಶರತ್ಚಂದ್ರ, ಖಜಾಂಚಿ ದೀಪಕ್, ವೀಣಾ ಆರ್.ಸೆರಾವ್, ಸಹಕಾರ್ಯದರ್ಶಿ ಎನ್.ವಿ.ಪ್ರಿಯದರ್ಶಿನಿ ಇದ್ದರು.
Appeal for establishment of a mobile High Court bench in the district
Leave a comment