ಚಿಕ್ಕಮಗಳೂರು: ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಮನೆಗೊಂದು ಗ್ರಂಥಾಲಯ’ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲಾ ಜಾಗೃತಿ ಸಮಿತಿಗೆ ಬರಹಗಾರರಾದ ಡಿ. ಎಂ. ಮಂಜುನಾಥಸ್ವಾಮಿ ಅವರನ್ನು ಸಂಚಾಲಕರಾಗಿ ನೇಮಕ ಮಾಡಲಾಗಿದೆ.
ಈ ಕುರಿತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಮಾಹಿತಿ ನೀಡಿದ್ದು. ಜಿಲ್ಲೆಯಾದ್ಯಂತ ಕನ್ನಡ ಸಾಹಿತ್ಯ, ಪುಸ್ತಕ ಸಂಸ್ಕೃತಿ ಮತ್ತು ಓದುವ ಹವ್ಯಾಸವನ್ನು ವ್ಯಾಪಕವಾಗಿ ವಿಸ್ತರಿಸುವ ಉದ್ದೇಶದಿಂದ ಈ ವಿಶೇಷ ಸಮಿತಿಯನ್ನು ರಚಿಸಲಾಗಿದೆ. ಈ ಜಾಗೃತಿ ಸಮಿತಿಯು ಒಟ್ಟು ಹತ್ತು ಜನ ಸದಸ್ಯರನ್ನು ಒಳಗೊಂಡಿದ್ದು, ಡಿ. ಎಂ. ಮಂಜುನಾಥಸ್ವಾಮಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ.
ಸಮಿತಿಯ ಸದಸ್ಯರುಗಳಾಗಿ ಕೆ. ಚಂದ್ರಯ್ಯ, ಡಾ. ಲಕ್ಷ್ಮಿಕಾಂತ್ ಕೆ. ಎನ್., ಮಾವಿನಕೆರೆ ದಯಾನಂದ್, ಎಂ. ಆರ್. ಪ್ರಕಾಶ್, ದಾದಾಪೀರ್ ತರೀಕೆರೆ, ಸೌಭಾಗ್ಯ ಮಹಾಂತೇಶ್, ಸುಜಾತ ಎಚ್. ಎಲ್., ನಂದೀಶ್ ಬಂಕೇನಹಳ್ಳಿ ಹಾಗೂ ಸತೀಶ್ ಜೆ. ಅವರು ನೇಮಕಗೊಂಡಿದ್ದಾರೆ. ಈ ತಂಡವು ಜಿಲ್ಲೆಯಲ್ಲಿ ಪುಸ್ತಕ ಸಂಸ್ಕೃತಿಯನ್ನು ಪಸರಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಿದೆ.
ತಮ್ಮ ಈ ಹೊಸ ಜವಾಬ್ದಾರಿಯ ಕುರಿತು ಸಂತಸ ಹಂಚಿಕೊಂಡಿರುವ ನೂತನ ಸಂಚಾಲಕ ಮಂಜುನಾಥಸ್ವಾಮಿ ಅವರು, ಪ್ರಸ್ತುತ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಪುಸ್ತಕ ಓದುವ ಅಭಿರುಚಿಯನ್ನು ಹೆಚ್ಚಿಸುವುದು ಅತ್ಯಂತ ಅಗತ್ಯವಾಗಿದೆ ಎಂದಿದ್ದಾರೆ.
ಇದಕ್ಕಾಗಿ ಜಿಲ್ಲೆಯಲ್ಲಿ ವಿಶೇಷ ಮತ್ತು ಆಕರ್ಷಕ ಕಾರ್ಯಕ್ರಮಗಳನ್ನು ರೂಪಿಸಿ ಯುವಜನರನ್ನು ಸಾಹಿತ್ಯದ ಕಡೆಗೆ ಸೆಳೆಯಲು ಶ್ರಮಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಈ ಮಹತ್ವದ ಹುದ್ದೆಗೆ ಆಯ್ಕೆಯಾಗಿರುವ ಮಂಜುನಾಥಸ್ವಾಮಿ ಅವರಿಗೆ ಜಿಲ್ಲೆಯ ಸಾಹಿತ್ಯಾಸಕ್ತರು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅವರ ಹಿತೈಷಿಗಳು ಮತ್ತು ಸ್ನೇಹಿತರು ಆತ್ಮೀಯವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Writer D. M. Manjunathaswamy appointed to Chikkamagaluru District Awareness Committee
Leave a comment