ಚಿಕ್ಕಮಗಳೂರು: ತಾಲೂಕಿನ ಜೋಳದಾಳು ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಮೈಲಿಮನೆ ಗ್ರಾಮ ಪಂಚಾಯಿತಿಯಲ್ಲಿರುವ ಶಾಲೆಗೆ ಸಂಯೋಜನೆ ಮಾಡುವ ಮೂಲಕ ಮುಚ್ಚಲಾಗುತ್ತಿದೆ ಎಂದು ಆರೋಪಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ಜೋಳದಾಳು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸಂಚಾಲಕಿ ಚೈತ್ರ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಜೋಳದಾಳು ಹಿರಿಯ ಪ್ರಾಥಮಿಕ ಶಾಲೆ ಮುಚ್ಚಿ ಇಲ್ಲಿನ ವಿದ್ಯಾರ್ಥಿಗಳನ್ನು ಮೈಲಿಮನೆ ಶಾಲೆಗೆ ಕಳುಹಿಸಲಾಗುತ್ತದೆ. ಈ ರೀತಿ ಚಿಕ್ಕಮಗಳೂರಿನಲ್ಲಿ ಅಂದಾಜು ೧೦೦೦ ಶಾಲೆಗಳನ್ನು ಮುಚ್ಚಲು ಪಟ್ಟಿ ತಯಾರಿಸಲಾಗಿದೆ. ರಾಜ್ಯವ್ಯಾಪಿ ೪೦ ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ದೂರಿದರು.
ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯರವರಲ್ಲಿ ಒಬ್ಬರಾದ ಮಹೇಶ್ ಮಾತನಾಡಿ, ೬ನೇ ಕ್ಲಾಸಿನಿಂದಲೇ ಕೆಪಿಎಸ್ ಶಾಲೆಯಲ್ಲಿ ಅಡಕೆ ಸುಲಿಯುವುದು ಸೇರಿದಂತೆ ಇತರೆ ಕಸುಬುಗಳನ್ನು ಕಲಿಸುವುದಾಗಿ ಸರ್ಕಾರ ಹೇಳಿದೆ. ಸಮಾಜದ ತಳಸಮುದಾಯದ ಮಕ್ಕಳ ವಿದ್ಯೆ ಕಸಿದು ಕೂಲಿಗೆ ಕಳಿಸುವ ಸರ್ಕಾರದ ಹುನ್ನಾರವನ್ನು ನಾವು ಒಪ್ಪುವುದಿಲ್ಲ. ಈ ಯೋಜನೆ ರದ್ದಾಗುವವರೆಗೂ ನಿರಂತರವಾಗಿ ಹೋರಾಟ ನಡೆಸುತ್ತೇವೆ. ನಮ್ಮ ಶಾಲೆ ಮುಚ್ಚಲು ನಾವು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷೆ ಚೈತ್ರಾ , ಉಪಾಧ್ಯಕ್ಷ ಪುರುಷೋತ್ತಮ್, ಜೋಳದಾಳು ಗ್ರಾಮಸ್ಥರಾದ ಮಹೇಶ್, ಶೇಖರ್, ಭರತ್, ಕಮಲಾಕ್ಷಿ, ನಿರ್ಮಲ, ಪರಮೇಶ್, ಪುಟ್ಟಸ್ವಾಮಿ, ಹರೀಶ್, ಮನೋಹರ್, ಶಾರದಾ, ಪವಿತ್ರ, ಸುನೀತಾ ಮತ್ತಿತರರಿದ್ದರು.
Protest in Jholdal village led by student organization
Leave a comment