ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ ವಿತರಕರು ಗ್ರಾಹಕರ ಮನೆಬಾಗಿಲಿಗೆ ಸರಬರಾಜು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗಳ ಸಮರ್ಪಕ ಪೂರೈಕೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಎಲ್‌ಪಿಜಿ ವಿತರಕರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಜಿಲ್ಲೆಯ ಎಲ್ಲಾ ಎಲ್‌ಪಿಜಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಒಂದು ಗೃಹಬಳಕೆ ಸಿಲಿಂಡರನ್ನು ಬುಕ್ ಮಾಡಿದ ೨೫ ದಿನಗಳ ಬಳಿಕವೇ ಇನ್ನೊಂದು ಸಿಲಿಂಡರ್ ಅನ್ನು ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರು ಅಡುಗೆ ಅನಿಲವನ್ನು ಮಿತಬಳಕೆ ಮಾಡುವಂತೆ ಕೋರಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಅಗತ್ಯವಿರುವ ಪ್ರಮಾಣದಲ್ಲಿ ಮಾತ್ರ ಗ್ಯಾಸ್ ಸಿಲಿಂಡರ್ ಪಡೆಯುವಂತೆ ವಿನಂತಿಸಲಾಗಿದೆ.
ಎಲ್‌ಪಿಜಿ ವಿತರಣೆಯಲ್ಲಿ ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ದೂರವಾಣಿ (೦೮೨೬೨-೨೩೭೭೧೫ ಅಥವಾ ೯೪೮೩೩೨೫೯೪೪) ಸಂಖ್ಯೆಗಳಿಗೆ ಬೆಳಿಗ್ಗೆ ೧೦ ರಿಂದ ಸಂಜೆ ೫.೩೦ರವರೆಗೆ ಕರೆ ಮಾಡಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯಿಲ್ ಕಂಪನಿಗಳಿಂದ ಜಿಲ್ಲೆಗೆ ಅಡುಗೆ ಅನಿಲ ಸರಬರಾಜು ಪರಿಸ್ಥಿತಿಗೆ ಅನುಗುಣವಾಗಿ ಅಡುಗೆ ಅನಿಲ ಬಳಕೆ ಮಿತಿಗೊಳಿಸುವ ಬಗ್ಗೆ ಸಾರ್ವಜನಿಕರು, ಗ್ರಾಹಕರು, ಸಂಘ-ಸಂಸ್ಥೆಗಳು ಇತರರಿಗೆ ಅರಿವು ಮೂಡಿಸಲು ಈ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಯಾವುದೇ ಅನಧಿಕೃತ ಗ್ಯಾಸ್ ಸಿಲಿಂಡರ್ ಸಂಗ್ರಹಣೆ ಅಥವಾ ಅಕ್ರಮ ಮಾರಾಟ ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ ೧೯೫೫ ಹಾಗೂ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ರೆಗ್ಯೂಲೇಷನ್ ಆಫ್ ಸಪ್ಪೆ, ಅಂಡ್ ಡಿಸ್ಟ್ರಿಬ್ಯೂಷನ್) ಆರ್ಡರ್ ೨೦೦೦ ರನ್ವಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಗೃಹಬಳಕೆ ಗ್ಯಾಸ್ ವಿತರಣಾ ವ್ಯವಸ್ಥೆಯು ಸುಗಮವಾಗಿ ನಡೆಯಲು ಸಹಕರಿಸುವಂತೆ ಅವರು ಕೋರಿದ್ದಾರೆ.
There is no shortage of domestic cylinders in the district.
Leave a comment