ಚಿಕ್ಕಮಗಳೂರು: ಜಿಲ್ಲೆಯಲ್ಲಿ ನೂತನವಾಗಿ ರಚಿಸಲಾಗಿರುವ ಚಿಕ್ಕಮಗಳೂರು ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರಥಮ ಸಭೆಯು ಚಿಕ್ಕಮಗಳೂರು ನಗರದ ಜಿ.ಕೆ. ಪ್ಯಾಲೇಸ್ ಸಭಾಭವನದಲ್ಲಿ ಶನಿವಾರ ನಡೆಯಿತು.
ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಮುಸ್ಲಿಂ ಬಾಂಧವರು ಮತ್ತು ಮುಖಂಡರುಗಳು ಭಾಗವಹಿಸಿ ಸಮುದಾಯದ ಹಕ್ಕೊತ್ತಾಯಗಳನ್ನು ಮಂಡಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೇಸ್ ಹಿರಿಯ ಉಪಾಧ್ಯಕ್ಷ ಕೆ.ಮಹಮ್ಮದ್ ರವರು , ಜಿಲ್ಲೆಯಲ್ಲಿ ಮುಸಲ್ಮಾನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ, ಸಮುದಾಯವು ಅಂದುಕೊಂಡಂತೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬ ನೋವು ಮುಸ್ಲಿಂ ಸಮಾಜದಲ್ಲಿದೆ. ನಿರೀಕ್ಷೆಯಂತೆ ನಮ್ಮ ಸಮಸ್ಯೆಗಳ ಪರಿಹಾರಕ್ಕೆ ನಾವು ಯಾರ ಬಳಿ ಹೋಗಬೇಕು ಮುಂತಾದ ಹಲವು ವಿಷಯಗಳ ಬಗ್ಗೆ ಚರ್ಚಿಸಿ ನಿರ್ಧರಿಸಲು ಚಿಕ್ಕಮಗಳೂರು ಜಿಲ್ಲಾ ಒಕ್ಕೂಟ ರಚನೆಗೊಂಡಿದೆ ಎಂದರು.
ರಾಜಕೀಯ, ಪಂಗಡವಾರು ಭೇದಭಾವವಿಲ್ಲದೆ ನೂತನ ಸಂಘಟನೆ ರಚನೆಗೊಂಡಿದೆ. ಸಮುದಾಯದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ. ಸಮುದಾಯದ ಪ್ರಗತಿಯ ಬಗ್ಗೆ ಚರ್ಚಿಸ ಬೇಕಾದ ಅಗತ್ಯವಿರುವುದರಿಂದ ಸಂಘಟನೆ ರಚನೆಗೊಂಡಿದೆ.
ಮೂಡಿಗೆರೆಯಲ್ಲಿ ನಮ್ಮ ಮತಗಳನ್ನು ಪಡೆದು ಶಾಸಕರಾದ ನಯನಮೋಟಮ್ಮರವರು ಕೋಮುವಾದಿ ಒಬ್ಬರು ಭಾಗವಹಿಸಿದ ಸಭೆಯಲ್ಲಿ ಮಾತನಾಡಿ, ಕೋಮುವಾದಿ ಮುಖಂಡನನ್ನು ಸ್ವಾಗತ ಮಾಡಿರುವುದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ. ಹಿಂದೆ ನನ್ನ ತಾಯಿಯವರು ಇವರನ್ನು ಕ್ಷೇತ್ರಕ್ಕೆ ಕಾಲಿಡಲು ಬಿಟ್ಟಿರಲಿಲ್ಲ, ನನಗೆ ಇನ್ನೂ ಮೂರು ವರ್ಷದ ಅಧಿಕಾರದ ಅವಧಿ ಇದೆ. ಮುಂದೆ ನಾನು ಯಾವ ಪಕ್ಷಕ್ಕೆ ಹೋಗುತ್ತೇನೆಂದು ಹೇಳಲು ಸಾಧ್ಯವಿಲ್ಲ ಎಂದು ಒಂದು ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸಿ ಗೆದ್ದು ಈ ರೀತಿ ಮಾತನಾಡಿದ್ದಾರೆ. ತಮ್ಮ ಭಾಷಣದಲ್ಲಿ ಕೋಮುವಾದಿ ಯವರ ಬಗ್ಗೆ ಕೊಂಡಾಡಿದ್ದಾರೆ. ಸಭೆಯಲ್ಲಿ ಕೋಮುವಾದಿ ಮುಖಂಡ ಮಾತನಾಡಿ, ಇಸ್ಲಾಂ ಧರ್ಮದವರ ಬಗ್ಗೆ ದ್ವೇಷ ಭಾಷಣ ಮಾಡಿದರು ಎಂದರು.
ಈ ವಿಚಾರದ ಬಗ್ಗೆ ಬೇಸತ್ತ ಮೂಡಿಗೆರೆಯ ಮುಸ್ಲಿಂ ಮುಖಂಡರುಗಳು ಸಭೆ ಸೇರಿ ಶಾಸಕರನ್ನು ಅಲ್ಲಿಗೆ ಕರೆದರೆ ಶಾಸಕರು ನನ್ನನ್ನು ಬ್ಲಾಕ್‌ಮೇಲ್ ಮಾಡುತ್ತೀರ ಎಂದು ಪ್ರಶ್ನಿಸಿ, ಮುಖಂಡರುಗಳ ಕರೆಗೆ ಸ್ಪಂದಿಸಲಿಲ್ಲ ಎಂದು ವಿವರಿಸಿದರು. ಈ ಶಾಸಕರ ಬಗ್ಗೆ ಅವರ ಪಕ್ಷವು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇಂತಹವರನ್ನು ಅವರ ಪಕ್ಷವು ಉಚ್ಚಾಟನೆ ಮಾಡಬೇಕಿತ್ತು. ಇಂತಹ ಭಾಷಣ ಮಾಡಿದ ಶಾಸಕರನ್ನು ಬೆಂಬಲಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಒಬ್ಬರು ಶಾಸಕರಿಗೆ ಪತ್ರ ಬರೆದಿದ್ದಾರೆ.
ಅಂತಹವರಿಗೆ ಜಿಲ್ಲಾ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಮುಸಲ್ಮಾನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ, ಎಂ.ಎಲ್ ಮೂರ್ತಿ ಅಂತಹವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ. ನಮ್ಮ ಸಮುದಾಯದ ವಿರುದ್ದ ಇರುವವರಿಗೆ ಅಧಿಕಾರ ಸ್ಥಾನನೀಡುತ್ತಾರೆ. ಆದರೆ, ಮುಸ್ಲಿಂ ಸಮುದಾಯದ ಬೆಂಬಲಕ್ಕೆ ನಿಂತಹವರನ್ನು ಮೂಲೆಗುಂಪು ಮಾಡಲಾಗಿದೆ. ನಮ್ಮ ಸಮುದಾಯದ ಬೆಂಬಲಕ್ಕೆ ನಿಂತಿದ್ದ ಮೂರ್ತಿಯವರ ಬೆಂಬಲಕ್ಕೆ ಇಡೀ ನಮ್ಮ ಸಮಾಜ ನಿಲ್ಲುತ್ತದೆ ಎಂದರು.
ಮುಂಬರುವ ತಾಲ್ಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ಈ ರೀತಿ ಮುಸ್ಲಿಂ ಸಮಾಜದ ಬಗ್ಗೆ ಅಸಡ್ಡೆ ತೋರಿದರೆ ನಾವು ಪಾಠ ಕಲಿಸಬೇಕಾಗುತ್ತದೆ ಎಂದು ಕೆ.ಮಹಮ್ಮದ್ ಎಚ್ಚರಿಸಿದರು. ಮುಸ್ಲಿಂ ಸಮಾಜಕ್ಕೆ ಮಂಜೂರಾದ ಅನುದಾನ ಪೂರ್ಣ ಪ್ರಮಾಣದಲ್ಲಿ ಸರ್ಕಾರ ಬಿಡುಗಡೆಗೊಳಿಸಲಿಲ್ಲ, ಮುಸ್ಲಿಂ ಸಮಾಜಕ್ಕೆ ಇದ್ದ ಶೇ.೪ರಷ್ಟು ಮೀಸಲಾತಿ ಈ ಹಿಂದಿನ ಸರ್ಕಾರ ರದ್ದುಗೊಳಿಸಿತ್ತು. ಆದರಿ ಅದನ್ನು ಪುನಃ ಜಾರಿಗೊಳಿಸಲು ಸರ್ಕಾರ ಮುಂದಾಗಲಿಲ್ಲ, ನಮ್ಮ ಸಮುದಾಯದ ಬೇಡಿಕೆಗಳು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಕೆ.ಮಹಮ್ಮದ್ ಎಚ್ಚರಿಸಿದರು.
ಮುಖಂಡ ಸಿ.ಎನ್.ಅಕ್ಮಲ್ ಮಾತನಾಡಿ, ಕುರಾನ್ ಬಗ್ಗೆ ಗೊತ್ತಿಲ್ಲದಿರುವವರು ಅದರ ಬಗ್ಗೆ ಮಾತನಾಡುತ್ತಾರೆ. ಕುರಾನ್ ಅಂದರೆ ಶಾಂತಿ, ಮುಸ್ಲಿಂ ಸಮುದಾಯ ಪ್ರತಿ ತಾಲ್ಲೂಕಲ್ಲೂ ಶಾಸಕರಾಗಲು ಸಾಮರ್ಥ್ಯ ಹೊಂದಿರುವ ಒಬ್ಬರಾನ್ನದರೂ ಬೆಳೆಸಬೇಕು, ಅದಕ್ಕೆ ಸಮುದಾಯದಲ್ಲಿ ಒಗ್ಗಟ್ಟಿರಬೇಕು ಎಂದರು. ಮುಸ್ಲಿಂ ಸಮಾಜದಲ್ಲಿ ಸಿರಿವಂತರು ಜಕಾತ್ ಕಾರ್ಯವು ಸಮರ್ಪಕವಾಗಿ ಮಾಡಿದರೆ ನಮ್ಮ ಸಮಾಜದಲ್ಲಿ ಯಾರೂ ಬಡವರಾಗಿರುವುದಿಲ್ಲ.
ನಮ್ಮ ಮತಗಳನ್ನು ಪಡೆದು ಬೇರೆ ಗತಿಇಲ್ಲದೆ ನಮಗೆ ಮತ ನೀಡುತ್ತಾರೆಂದು ನಮ್ಮ ಸಮುದಾಯದ ಬಗ್ಗೆ ಹೀಯಾಳಿಸುತ್ತಾರೆ. ಮುಂದೆ ಚಾಕು ಹಾಕುವ ಮಾತುಗಳನ್ನಾಡುವವರ ಜೊತೆ ನಮ್ಮವರು ಇರುತ್ತಾರೆ. ಧರ್ಮದ ಬಗ್ಗೆ ಮಾತನಾಡುವುದು ನಾಟಕ. ಮಂತ್ರಿ, ಮುಖ್ಯಮಂತ್ರಿಯಾಗಲು ಧರ್ಮದ ವಿಷಯ ಮಾತನಾಡುತ್ತಾರೆ. ಇದಕ್ಕೆ ನಮ್ಮ ಸಮುದಾಯದವರು ತಲೆಕೆಡಿಸಿಕೊಳ್ಳಬಾರದು. ಪ್ರತಿ ತಾಲ್ಲೂಕಿನಲ್ಲೂ ನಮ್ಮ ಸಮುದಾಯದ ಸಂಖ್ಯಾ ಬಲವಿದೆ, ಅದರೂ ನಮಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಿಕ್ಕಿದರೆ ನಮ್ಮವರು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರುಗಳಾಗುತ್ತಿದ್ದರು. ನಮ್ಮಲ್ಲಿ ಒಗ್ಗಟ್ಟಿಲ್ಲ ೬೦ ಸಾವಿರ ಸಂಖ್ಯೆ ಇರುವ ಜನಾಂಗಕ್ಕೆ ೮೦ ಶಾಸಕರುಗಳಿರುತ್ತಾರೆ, ಆದರೆ, ೧ ಕೋಟಿ ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ಕೇವಲ ೧೫ ಶಾಸಕರುಗಳು ಮಾತ್ರ. ಇದು ನ್ಯಾಯವೇ ಎಂದು ಸಿ.ಎನ್ ಅಕ್ಮಲ್ ಪ್ರಶ್ನಿಸಿದರು.
ಮುಖಂಡ ಕಿರುಗುಂದ ಅಬ್ಬಾಸ್ ಮಾತನಾಡಿ, ಎಂಟು ನೂರು ವರ್ಷಗಳ ಆಳ್ವಿಕೆ ಮಾಡಿದ ಮುಸ್ಲಿಂ ಸಮಾಜ ದೇಶವನ್ನು ಎಂದಿಗೂ ಗಂಡಾಂತರಕ್ಕೆ ಸಿಕುಸಲಿಲ್ಲ. ಯಾರನ್ನೂ ಮತಾಂತರ ಮಾಡಲಿಲ್ಲ. ಅಂತಹ ಸಮಾಜಕ್ಕೆ ಇಂದು ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಮುಸ್ಲಿಂ ಮುಖಂಡರುಗಳನ್ನು ಆರ್ಥಿಕವಾಗಿ ಪ್ರಬಲರಾಗಿದ್ದರೂ ರಾಜಕೀಯ ಪಕ್ಷಗಳು ತುಳಿದು ಹಾಕಲಾಗಿದೆ. ಮುಸ್ಲಿಂ ಸಮಾಜದ ಮುಖಂಡರುಗಳನ್ನು ಬಿ.ಜೆ.ಪಿ, ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ನಿರ್ಲಕ್ಷಿಸಿ, ಮುಸ್ಲಿಂ ಮುಖಂಡರುಗಳಿಗೆ ಪಡೆಯುವ ಅರ್ಹತೆ ಇದ್ದರೂ ಕೊಡುವ ಮನಸ್ಸು ಈ ರಾಜಕೀಯ ಪಕ್ಷಗಳಿಗಿಲ್ಲ ಎಂದರು.
ಸಮಾರಂಭದಲ್ಲಿ ಮೂಡಿಗೆರೆಯ ಸಿ.ಕೆ.ಇಬ್ರಾಹಿಂ, ಕೊಪ್ಪದ ಇಜಾಸ್ ಅಹಮ್ಮದ್ ಜಾಕಿರ್‌ಹೊರಟಿ, ಅತೀಕ್ ಕೈಸರ್ ಇಬ್ರಾಹಿಂ, ಮುಂತಾದವರು ಸಭೆಯಲ್ಲಿ ಮಾತನಾಡಿದರು. ನಗರಸಭಾ ಮಾಜಿ ಸದಸ್ಯ ನೂರ್ ಮಹಮ್ಮದ್ ಎಲ್ಲರನ್ನೂ ಸ್ವಾಗತಿಸಿ ನಿರೂಪಿಸಿದರು.
First meeting of Chikkamagaluru District Muslim Federation
Leave a comment