ಚಿಕ್ಕಮಗಳೂರು: ತಾಲ್ಲೂಕು ಬೆಳವಾಡಿಯಲ್ಲಿ ಸಾಧನಧಾಮ, ಸೂರ್ಯಮಂದಿರ ಹಾಗೂ ಗೋಶಾಲೆ ಉದ್ಘಾಟನಾ ಸಮಾರಂಭ ಜ.೨೩ ರಿಂದ ೨೫ ರವರೆಗೆ ಜರುಗಲಿದೆ ಎಂದು ಯೋಗಕ್ಷೇಮ ಯೋಗ ಸಾಧನಾ ಧಾಮದ ಸಂಸ್ಥಾಪಕ ವಿರೂಪಾಕ್ಷ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.೨೩ ರಂದು ಹೋಮ, ವಿಶೇಷ ಪೂಜೆಯನ್ನು ಏರ್ಪಡಿಸಲಾಗಿದ್ದು, ೨೪ ರಂದು ಬೆಂಗಳೂರಿನ ಯೋಗ ಬಂಧುಗಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುಮಾರು ೮ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೂರ್ಯ ದೇವಸ್ಥಾನ ಹಾಗೂ ಪುರಿ ಜಗನ್ನಾಥ ದೇವಸ್ಥಾನದ ರೀತಿ ಮೂರು ಗೋಪುರಗಳು ಜೊತೆಗೆ ಕೃಷ್ಣನ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ಕೋನಾರ್ಕ್ ಸೂರ್ಯ ದೇವಸ್ಥಾನದ ಮಾದರಿಯಲ್ಲಿ ರಥದ ಆಕೃತಿಯಲ್ಲಿ ದೇವಸ್ಥಾನ ಇದ್ದು, ಅಯೋಧ್ಯೆ ಬಾಲರಾಮನ ವಿಗ್ರಹದ ಕೆತ್ತನೆಯನ್ನು ಮಾಡಿರುವ ಮೈಸೂರಿನ ಅರುಣ್ ಯೋಗಿರಾಜ್ ಅವರು ಈ ಸೂರ್ಯ ದೇವರ ವಿಗ್ರಹವನ್ನು ಕೆತ್ತನೆ ಮಾಡಿದ್ದಾರೆಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳವಾಡಿ ಗ್ರಾಮದವರೇ ಆದ ಖ್ಯಾತ ಹೋಮಿಯೋಪತಿ ತಜ್ಞ ನಾಡೋಜ ಡಾ. ಬಿ.ಟಿ ರುದ್ರೇಶ್ ವಹಿಸಲಿದ್ದು, ಖ್ಯಾತ ರಂಗಭೂಮಿ ಕಲಾವಿದ ಪ್ರಕಾಶ್ ಬೆಳವಾಡಿ, ಚಲನಚಿತ್ರ ನಟ ಶಶಿಕುಮಾರ್, ಶಾಸಕ ಹೆಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಂಡೂರಿನ ಶಾಸಕರಾದ ಶ್ರೀಮತಿ ಅನ್ನಪೂರ್ಣ ತುಕಾರಾಮ ಅವರು ಆಗಮಿಸುತ್ತಿದ್ದಾರೆಂದು ವಿವರಿಸಿದರು.
ಸೂರ್ಯ ದೇವಸ್ಥಾನ ಸಾಧನಾ ಧಾಮ ಮತ್ತು ಗೋಶಾಲೆಯನ್ನು ಮೈಸೂರು ಹಾಗೂ ಕೊಡಗು ಜಿಲ್ಲೆ ಸಂಸದ ಯದುವೀರ ಕೃಷ್ಣರಾಜದತ್ತ ಒಡೆಯರ್ ಉದ್ಘಾಟಿಸುವರು. ಮೈಸೂರು ರಾಜಮನೆತನಕ್ಕೆ ಹಾಗೂ ಬೆಳವಾಡಿ ಗ್ರಾಮಕ್ಕೆ ವಿಶೇಷ ನಂಟು ಇದ್ದು, ಅತ್ಯಂತ ಸಮೃದ್ಧ ಮತ್ತು ಸುಂದರವಾಗಿದ್ದ ಬೆಳವಾಡಿ ಗ್ರಾಮವನ್ನು ಅಂದಿನ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ರವರು ಕ್ರಿ.ಶ ೧೮೨೮ ರಲ್ಲಿ ಶೃಂಗೇರಿ ಮಠಕ್ಕೆ ದಾನ ನೀಡಿದ್ದಾರೆಂದು ಹೇಳಿದರು.
ಇಂದಿಗೂ ಸಹ ಬೆಳವಾಡಿ ಗ್ರಾಮದಲ್ಲಿ ಪೂಜಾ ಕೈಂಕರ್ಯಗಳು ಶೃಂಗೇರಿ ಮಠದ ಸುಪರ್ದಿಯಲ್ಲಿ ನಡೆಯುತ್ತಿದ್ದು, ಇದೀಗ ಬೆಳವಾಡಿಗೆ ಆಗಮಿಸುತ್ತಿರುವ ಸಂಸದ ಯದುವೀರ್ರವರು ಗ್ರಾಮದ ಜನರಿಗೆ ಮಹಾರಾಜರೇ ಆಗಿದ್ದಾರೆ ಎಂದು ತಿಳಿಸಿದರು.
ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಬೆಳವಾಡಿ ಮಂಜುನಾಥ್, ಹೆಚ್ಡಿ ಕಂಪನಿ ನಿರ್ದೇಶಕ ಶ್ರೀಧರ್ ಉಪಸ್ಥಿತರಿದ್ದರು.
Sadhana Dham Surya Mandir-Goshala to be inaugurated in Belawadi on January 25th
Leave a comment