ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ೨೧ ವರ್ಷದ ಯುವತಿ ಕವಿತಾ ಸಾವನ್ನಪ್ಪಿದ್ದಾಳೆಂದು ಆರೋಪಿಸಿ ಸ್ಥಳೀಯರು ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಯುವತಿಯ ಮೃತದೇಹವನ್ನು ಆಸ್ಪತ್ರೆ ಮುಂಭಾಗದಲ್ಲಿಟ್ಟು ಜಿಲ್ಲಾ ಸರ್ಜನ್ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರು.
ಚಿಕ್ಕಮಗಳೂರು ತಾಲೂಕು ಹೊಸಪೇಟೆ ಗ್ರಾಮದ ಕವಿತಾ ಕಾಫಿ ಹಣ್ಣು ಕೊಯ್ಯುವಾಗ ಮರ ಬಿದ್ದು ತೀವ್ರ ಗಾಯಗೊಂಡಿದ್ದಳು. ಕೂಡಲೇ ಕುಟುಂಬಸ್ಥರು ಆಕೆಯನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆತಂದರು. ಆದರೆ ಆ ಸಮಯದಲ್ಲಿ ವೈದ್ಯರು ಇರಲಿಲ್ಲ ಎಂದು ಆರೋಪಿಸಲಾಗಿದೆ ನರ್ಸ್ ಮತ್ತು ಕಾಂಪೌಂಡರ್ ಮಾತ್ರ ಇದ್ದು, ಕೇವಲ ಬ್ಯಾಂಡೇಜ್ ಹಾಕಿ ‘ಶಿವಮೊಗ್ಗಕ್ಕೆ ಕರೆದೊಯ್ಯಲು ತಿಳಿಸಿದರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಶಿವಮೊಗ್ಗಕ್ಕೆ ಕರೆದೊಯ್ಯುವಾಗ ತರೀಕೆರೆ ಬಳಿ ಕವಿತಾ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯವರ ನಿರ್ಲಕ್ಷ್ಯದಿಂದಾಗಿ ತಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಕುಟುಂಬಸ್ಥರು ಮತ್ತು ಸ್ಥಳೀಯರು ಆಸ್ಪತ್ರೆ ಮುಂದೆ ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದರು. ‘ವೈದ್ಯರು ಇಲ್ಲದ ಆಸ್ಪತ್ರೆ ಏನು ಮಾಡುತ್ತದೆ, ‘ಜಿಲ್ಲಾ ಸರ್ಜನ್ ಬರಲಿ, ಉತ್ತರ ಕೊಡಲಿ’ ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆ ತೀವ್ರಗೊಂಡಿತು.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರತಿಭಟನೆಕಾರರನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೆ ಕುಟುಂಬಸ್ಥರು ಜಿಲ್ಲಾ ಸರ್ಜನ್ ಬಂದು ತಮ್ಮನ್ನು ಭೇಟಿಯಾಗಬೇಕೆಂದು ಆಗ್ರಹಿಸಿದರು. ಘಟನೆಯ ಬಗ್ಗೆ ಆರೋಗ್ಯ ಇಲಾಖೆಯಿಂದ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಲಾಗಿದೆ. ಆದರೆ ಸ್ಥಳೀಯರು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ತುರ್ತು ಸೇವೆಯ ನಿರ್ಲಕ್ಷ್ಯ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆಯನ್ನು ಎತ್ತಿ ತೋರಿಸಿದ್ದಾರೆ.
ಈ ಘಟನೆಯಿಂದಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಚಿಕಿತ್ಸೆಗೆ ಸರಿಯಾದ ವೈದ್ಯರು ಇಲ್ಲದಿರುವುದು ಸಾಮಾನ್ಯವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ೨೪ ಗಂಟೆಗಳ ಕಾಲ ವೈದ್ಯರು ಲಭ್ಯವಿರಬೇಕು,ತುರ್ತು ವಿಭಾಗ ಬಲಪಡಿಸಬೇಕು ಎಂಬ ಆಗ್ರಹಗಳು ಕೇಳಿಬಂದವು. ಪ್ರತಿಭಟನೆಕಾರರು ತನಿಖೆಯಾಗುವವರೆಗೆ ಮೃತದೇಹವನ್ನು ತೆಗೆದುಕೊಳ್ಳದಂತೆ ಘೋಷಣೆಗಳನ್ನು ಕೂಗಿದರು.
ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳು ಪ್ರತಿಭಟನೆಕಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ. ಈ ಘಟನೆಯು ರಾಜ್ಯದ ಗ್ರಾಮೀಣ ಆರೋಗ್ಯ ವ್ಯವಸ್ಥೆಯ ದಯನೀಯ ಸ್ಥಿತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.
Protest at the district hospital condemning the death of a young woman
Leave a comment