ನರಸಿಂಹರಾಜಪುರ: ಸಹೊದ್ಯೋಗಿಯ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಹೊರಗುತ್ತಿಗೆ ನೌಕರನೊಬ್ಬನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡೇಟಾ ಎಂಟ್ರಿ ಆಪರೇಟರ್ ಆಗಿದ್ದ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಪ್ರಜ್ವಲ್ ಆರೋಪಿ.
ಸುಮಾರು ಒಂದೂವರೆ ವರ್ಷದಿಂದ ಆತ ಕಾರ್ಯನಿರ್ವಹಿಸುತ್ತಿದ್ದು, ತಾಲ್ಲೂಕಿನ ವ್ಯಾಪ್ತಿಯಲ್ಲಿ ಮನೆ ಮಾಡಿ ವಾಸವಾಗಿದ್ದೇನೆ. ನನಗೆ ವಿವಾಹವಾಗಿದ್ದು, ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿಸಲ್ಲಿಸಿದ್ದೇನೆ. ನಾನು ಒಬ್ಬಳೇ ವಾಸವಾಗಿರುವುದನ್ನು ತಿಳಿದ ಪ್ರಜ್ವಲ್, ಮದುವೆಯಾಗುವಂತೆ ಕೇಳಿದ್ದು ಅದಕ್ಕೆ ನಾನು ಒಪ್ಪಿರಲಿಲ್ಲ. ಆದರೂ ಪದೇಪದೇ ಪೀಡಿಸುತ್ತಿದ್ದ. ಡಿ.11ರಂದು ಮನೆಯೊಳಗೆ ಬಂದು ಅಕ್ರಮವಾಗಿ ಬಂಧನದಲ್ಲಿಟ್ಟು ಕೂಗದಂತೆ ಬಾಯಿಯನ್ನು ಮುಚ್ಚಿ ಹಿಂಸೆ ನೀಡಿ ಬಟ್ಟೆ ಹರಿದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅವನಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಬಂದು ಕೂಗಿದಾಗ ಸ್ಥಳೀಯರು ರಕ್ಷಿಸಿ ಉಪಚರಿಸಿದರು. ನಂತರ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Leave a comment