ಚಿಕ್ಕಮಗಳೂರು: ‘ಮೂಲ ಸೌಕರ್ಯಗಳಿಲ್ಲದೆ ವೈದ್ಯ ಕೀಯ ಕಾಲೇಜು ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಶಿಫ್ಟ್ ಮಾಡಿದ್ದೇಕೆ, ತರಾ ತುರಿಯಲ್ಲಿ ಉದ್ಘಾಟನೆ ಮಾಡಿದ್ದೇಕೆ, ಮಕ್ಕಳ ಕಾಳಜಿ ಬಗ್ಗೆ ಗೊತ್ತಿರಲಿಲ್ಲವೇ’ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಅರ್ಜಿಗಳ ಸಮಿತಿ ಭೇಟಿ ವೇಳೆ ಮಾತನಾಡಿದ ಅವರು, ‘40 ಎಕರೆ ಪ್ರದೇಶದ ವೈದ್ಯಕೀಯ ಕಾಲೇಜಿನ 1,500 ವಿದ್ಯಾರ್ಥಿಗಳಿಗೆ ನೀರು, ವಿದ್ಯುತ್ ಸೌಕರ್ಯವಿಲ್ಲ. 2022ರಲ್ಲಿ ತರಾತುರಿಯಲ್ಲಿ ಉದ್ಘಾಟನೆ ಮಾಡಲಾಯಿತು. ಕಾಲೇಜು ‘ಉದ್ಘಾಟನೆ ಮಾಡಿ ಮಕ್ಕಳ ಮನೆ ಹಾಳು ಮಾಡಲು ಮುಂದಾಗಿದ್ದಾರೆ. ಪೋಷಕರ ಶಾಪ ಅವರಿಗೆ ತಟ್ಟುವುದಿಲ್ಲವೇ’ ಎಂದು ಪ್ರಶ್ನಿಸಿದರು.
ಅಂದಿನ ಉದ್ಘಾಟನಾ ಸಮಾರಂಭಕ್ಕೆ 5 ಸಾವಿರ ಜನ ಸೇರಿಸಿದ್ದರು. ಕೇಂದ್ರದಿಂದ ವೈದ್ಯಕೀಯ ಕಾಲೇಜಿಗೆ ಶೇ 40ರಷ್ಟು ಅನುದಾನ ಬರುತ್ತದೆ. ಸೌಜನ್ಯಾಕ್ಕಾದರೂ ಹಿಂದಿನ ಸಂಸದರನ್ನು ಕಾರ್ಯಕ್ರಮಕ್ಕೆ ಕರೆಯಲಿಲ್ಲ. ಕಾಲೇಜಿನಲ್ಲಿ ನೀರಿಲ್ಲದಿದ್ದರೇನು, ವಿದ್ಯುತ್ ಇಲ್ಲದಿದ್ದರೇನು ಅವರಿಗೆ ಹೆಸರು ಬರಬೇಕಿತ್ತು ಅಷ್ಟೇ. ಈಗ ಅವರು ಮಾಡಿದ ಕೊಳೆಯನ್ನು ನಾವು ತೊಳೆಯಬೇಕಿದೆ’ ಎಂದರು.
‘ವೈದ್ಯಕೀಯ ಕಾಲೇಜು ನಿರ್ವಹಣೆ ಸರಿಯಾಗಿಲ್ಲ ಎಂದು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಈ ರೀತಿ ಆರೋಪ ಮಾಡಿದವರ ಮಕ್ಕಳು ವಿದೇಶದಲ್ಲಿ ಓದುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.
ನೀರಿನ ಸಮಸ್ಯೆ ಬಗ್ಗೆ ಸಮಿತಿ ಅಧ್ಯಕ್ಷರು ಕೇಳಿದ ಪ್ರಶ್ನೆಗೆ ಮಾಹಿತಿ ನೀಡಿದ ಎಂಜಿನಿಯರ್ ಮುಕ್ಕಣ್ಣ ನಾಯಕ್, ‘ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ₹275.03 ಕೋಟಿ ಟೆಂಡರ್ ಆಗಿತ್ತು. 2024ರಲ್ಲಿ ₹455 ಕೋಟಿ ಅಂದಾಜು ತಯಾರಿಸಿ ಕಳುಹಿಸಲಾಗಿತ್ತು. ಈ ಮೊತ್ತದಲ್ಲಿ ₹438.29 ಕೋಟಿ ವೆಚ್ಚವಾಗಿದ್ದು, ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆದ್ದರಿಂದ ನೀರು ಮತ್ತು ವಿದ್ಯುತ್ ಸಮಸ್ಯೆ ಇದೆ ಎಂದು ಹೇಳಿದರು.
ಸಮೀಪದ ಕೆರೆ ಪಕ್ಕದಲ್ಲಿ ಎರಡು ಕೊಳವೆ ಬಾವಿ ಕೊರೆಸಿ ನೀರೆತ್ತಲು ಚಿಂತನೆ ನಡೆಸಲಾಗಿದೆ. ಇದರಿಂದ 15 ಲಕ್ಷ ಲೀಟರ್ ನೀರು ಸಂಗ್ರಹಿಸಿ ಕ್ಯಾಂಪಸ್‌ಗೆ ಬಳಸಬಹುದು ಎಂದರು.
H.D. Thammaiah unhappy with hasty inauguration
Leave a comment